ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಗೊಂದಲದಿಂದಾಗಿ ರಾಜ್ಯದ ರಾಜಕೀಯ ಪರಿಸ್ಥಿತಿ ಅಯೋಮಯವಾಗಿದ್ದು, ಹಾಸ್ಯಾಸ್ಪದ ಹಂತ ತಲುಪಿದೆ ಎಂದು ಹೇಳಿರುವ ಕೇಂದ್ರ ಸಚಿವ ಅನತಂಕುಮಾರ್, ಮತ್ತೂಮ್ಮೆ ರಾಜಕೀಯ ಸಮೀಕರಣವಾಗುವ ಸಮಯ ಸನ್ನಿಹಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಗರದ ವಾಣಿ ವಿಲಾಸ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾ ಮಂದಿರದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರವೇ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆದರೆ ಖಾತೆ ಹಂಚಿಕೆಗೆ ಹರಸಾಹಸ ಮಾಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ದಿಕ್ಕು-ದೆಸೆ ಇಲ್ಲದಂತಾಗಿದ್ದು, ರಾಜ್ಯಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ, ಹೊಸ ರಾಜಕೀಯ ಸಮೀಕರಣವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್‌ನವರು ಸೇರಿ ಸರ್ಕಾರ ರಚಿಸಿದ್ದು, ಅದನ್ನು ಮುನ್ನಡೆಸಿಕೊಂಡು ಹೋಗಲಿ. ಎಷ್ಟು ದಿನ ಮತ್ತು ಹೇಗೆ ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ನೋಡೋಣ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೇಲ್ಮಟ್ಟದ ನಾಯಕರಲ್ಲಿ ಆಗಿರುವ ಒಪ್ಪಂದ ಕಾರ್ಯಕರ್ತರು ಮತ್ತು ಶಾಸಕರಿಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ ಈ ಸರ್ಕಾರ ಅಲ್ಪಾಯುಷಿಯಾಗಿದೆ ಎಂದರು.
ರಾಜ್ಯದ ಜನತೆ ಬಿಜೆಪಿಗೆ 104 ಸ್ಥಾನ ಕೊಟ್ಟರೂ ಜೆಡಿಎಸ್ ಮತ್ತು ಕಾಂಗ್ರೆಸ್ ಕುತಂತ್ರದಿಂದ ಹಿಂಬಾಗಿಲಿನ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದಿದೆ. ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೆ. ರಾಜ್ಯದ ಇತಿಹಾಸದಲ್ಲಿ 37 ಸ್ಥಾನ ಗಳಿಸಿದ ಜೆಡಿಎಸ್‌ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದನ್ನು ಜನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಬಂಡಾಯ ಮತ್ತು ತೀವ್ರ ಅಸಮಾಧಾನ ಎದ್ದಿದೆ. ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು- ಜೆಡಿಎಸ್‌ನಲ್ಲಿ ಇಕ್ಕಟ್ಟು ಕಂಡು ಬರುತ್ತಿದೆ.
ಮುಸ್ಲಿಮರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅನಂತಕುಮಾರ್, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ದೃಷ್ಟಿಕೋನದ ಮೂಲಕ ಯಾವುದೇ ಜಾತಿ, ಮತ, ಪಂಥ, ಭಾಷೆಯ ಬೇಧವಿಲ್ಲದೆ ಎಲ್ಲರೂ ಭಾರತೀಯರು ಎಂದು ಬಿಜೆಪಿ ನಂಬಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದಷ್ಟೇ ಹೇಳಿದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್ ಸಮಾರಂಭದಲ್ಲಿ ಭಾಗವಹಿಸಿದ ಬಗ್ಗೆ ಪ್ರತಿಕ್ರಿಯಿಸಿ, ಸಂಘ ಕಳೆದ 80 ವರ್ಷದಿಂದ ಕೈಗೊಂಡಿರುವ ನಿಸ್ವಾರ್ಥ ಸೇವೆ, ದೇಶಪ್ರೇಮದಿಂದ ಕೆಲಸ ಮಾಡಿರುವುದಕ್ಕೆ ಮಾಜಿ ರಾಷ್ಟ್ರಪತಿಗಳ ಆಗಮನದಿಂದ ಅಂಗೀಕಾರ ಮತ್ತು ಸಮರ್ಥನೆ ಸಿಕ್ಕಿದೆ.
ಇಷ್ಟು ದೊಡ್ಡ ದೇಶ ಮುನ್ನಡೆಸಿಕೊಂಡು ಹೋಗಬೇಕಾದರೆ ಎಲ್ಲ ವಿಚಾರಗಳಿಗೆ ಮನ್ನಣೆ ನೀಡಬೇಕು. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು. ಅದರಲ್ಲೂ ಮುಖ್ಯವಾಗಿ ದೇಶಭಕ್ತಿಯೇ ಜೀವಾಳ ಎಂದುಕೊಂಡು ಸೇವೆ ಮಾಡುವ ಆರ್‌ಎಸ್‌ಎಸ್‌ಗೆ ಮನ್ನಣೆ ಕೊಡಬೇಕು ಎಂದು ಸಂಘದ ವಿರೋಧಿಗಳಿಗೆ ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.