Advertisement
ಅಜ್ಜಿ (ಪಾರ್ವತಿ), ಮೊಮ್ಮಗ (ಧನುಶ್) ಮೃತಪಟ್ಟವರು. ಪುತ್ತೂರು ಪೇಟೆಯ ಸಮೀಪದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೊಂದಿ ಕೊಂಡಂತೆ ಇರುವ ಸಾಲ್ಮರ ಹೆಬ್ಟಾರಬೈಲಿನಲ್ಲಿ ಘಟನೆ ಸಂಭವಿಸಿತ್ತು. ಈ ಘಟನೆಗೆ ನಡೆದು ಎರಡು ತಿಂಗಳು ಸರಿದಿದೆ. ಮನೆಯವರ ಪರಿಸ್ಥಿತಿ ಈಗಲೂ ಅಂದಿನಂತೆಯೇ ಇದೆ. ಸೂತಕದ ಛಾಯೆಯಿಂದ ಇನ್ನೂ ಅವರು ಹೊರಬಂದಂತಿಲ್ಲ.
ದುರಂತಕ್ಕೆ ಸಂಬಂಧಿಸಿ 10.90 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದು, ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಾಗಿದೆ. ಶಾಸಕರು ತಾತ್ಕಾಲಿಕ ಮನೆ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಅದೂ ಕೈಗೂಡಿಲ್ಲ. ಸದ್ಯ ಲಕ್ಷ್ಮೀ ದೇವಿ ಬೆಟ್ಟದವರು ನೀಡಿದ ಒಂದು ಕೋಣೆಯಲ್ಲಿ ಸಂತ್ರಸ್ತ ಮನೆ ಮಂದಿ ಆಶ್ರಯ ಪಡೆದಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್ ಮೊದಲಾದವರು ಭೇಟಿ ನೀಡಿದ್ದರು. ಯಾರು ಬಂದರೂ ಪರಿಸ್ಥಿತಿ ಸುಧಾರಿಸಿಲ್ಲ. ಮೇಲ್ಭಾಗದ ಎರಡು ಮನೆಯವರು ಈ ಆವರಣ ಗೋಡೆಯನ್ನು ನಿರ್ಮಿಸಿದ್ದರು. 90 ಡಿಗ್ರಿ ಕೋನದಲ್ಲಿ ಆವರಣ ಗೋಡೆ ಕಟ್ಟುವುದು ಅಪಾಯಕಾರಿ ಎಂದು ಆಗಲೇ ಹೇಳಲಾಗಿತ್ತು. ಇದಕ್ಕೆ ತಲೆಕೆಡಿಸಿಕೊಳ್ಳದ ಅವರು ಅಪಾಯ ಸಂಭವಿಸಿದರೆ ನಾವೇ ಜವಾಬ್ದಾರರು ಎಂದು ಹೇಳಿದ್ದರಂತೆ. ಆದರೆ ಆ ಎರಡೂ ಮನೆಯವರು ಇದುವರೆಗೆ ಸ್ಪಂದಿಸಿಲ್ಲವಂತೆ. ಮನೆ ಮೇಲ್ಭಾಗಕ್ಕೆ ಬಿದ್ದಿರುವ ಆವರಣ ಗೋಡೆ, ಪಿಲ್ಲರ್ ತೆರವು ಮಾಡಿಕೊಡಿ ಎಂದು ನಗರಸಭೆಗೆ 2 ಬಾರಿ ಮನವಿ ನೀಡಿದರೂ ಸ್ಪಂದನೆ ಇಲ್ಲ ಎಂದು ಮನೆಮಂದಿ ಅಳಲು ತೋಡಿಕೊಳ್ಳುತ್ತಾರೆ.
Related Articles
ದುರಂತ ಸಂಭವಿಸುವ 1 ತಿಂಗಳ ಮೊದಲು ಮನೆ ಯಜಮಾನ ವಿಶ್ವನಾಥ್ ಸಾಲ್ಯಾನ್ ಮೃತಪಟ್ಟಿದ್ದರು. ಈ ಶೋಕದ ನಡುವೆಯೇ ಮತ್ತೊಂದು ದುರಂತ ಬಂದೆರಗಿತ್ತು. ಘಟನೆ ಸಂಭವಿಸುವಾಗ ಮನೆಯೊಳಗೆ ಒಟ್ಟು 8 ಮಂದಿ ನಿದ್ರಿಸುತ್ತಿದ್ದರು. ಇಬ್ಬರು ದುರಂತಕ್ಕೆ ಬಲಿಯಾಗಿದ್ದರು. ಮಗನನ್ನು ಕಳೆದುಕೊಂಡ ಮಹೇಶ್-ಶಾಲಿನಿ ದಂಪತಿ ಮಾನಸಿಕ ಆಘಾತದಿಂದ ಇನ್ನೂ ಹೊರಬಂದಿಲ್ಲ.
Advertisement
ಹೀಗಿದೆ ಮನೆಎರಡಂತಸ್ತಿನಷ್ಟು ಎತ್ತರದ ಆವರಣ ಗೋಡೆ ಮನೆಯನ್ನು ಪೂರ್ಣವಾಗಿ ನಾಶ ಪಡಿಸಿತು. ಅಳಿದುಳಿದ ಹೆಂಚನ್ನು ತೆಗೆದು ಇಡಲಾಗಿದೆ. ದೈವ, ದೇವರನ್ನು ಒಂದು ಸಣ್ಣ ತಾತ್ಕಾಲಿಕ ಶೆಡ್‌ನಲ್ಲಿ ಇಡಲಾಗಿದೆ. ಮನೆಮಂದಿ ಹೊಸ ಜೀವನ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಕ್ಯಾಂಟೀನ್ ದುಡಿಮೆ ಮತ್ತೆ ಆರಂಭಿಸಿದ್ದಾರೆ. ದೂರು ನೀಡಿದರೂ ಕ್ರಮವಿಲ್ಲ
ಮನೆ ಹಿಂದಿನ ಬರೆ ಮತ್ತೆ ಬೀಳುವ ಸ್ಥಿತಿಯಲ್ಲಿದೆ. ಇದನ್ನು ತೆಗೆಯದೇ ನಾವಲ್ಲಿ ಕುಳಿತುಕೊಳ್ಳುವುದು ಹೇಗೆ? ಹೆಂಚನ್ನು ತೆಗೆದು ಬದಿಗಿಟ್ಟಿದ್ದೇವಷ್ಟೇ. ಬರೆಯ ಮೇಲೆ ಶೌಚಾಲಯ ಪಿಟ್ ಇರುವುದರಿಂದ ಇನ್ನೂ ಅಪಾಯವಿದೆ. ದುರಂತಕ್ಕೆ ಕಾರಣವಾದ ಮನೆಯವರ ವಿರುದ್ಧ ದೂರು ನೀಡಿದ್ದೇವೆ. ಇದುವರೆಗೆ ಯಾವುದೇ ಸ್ಪಂದನೆ ಇಲ್ಲ. ಪತ್ನಿ ಶಾಲಿನಿ ಇನ್ನೂ ಚೇತರಿಸಿಕೊಂಡಿಲ್ಲ.
– ಮಹೇಶ್
ಸಂತ್ರಸ್ತ ಮನೆ ಯಜಮಾನ ದೂರು ದಾಖಲಿಸಲು ಹೇಳಿರುವೆ
ದುರಂತಕ್ಕೆ ಕಾರಣವಾದ ಎರಡೂ ಮನೆಗಳ ವಿರುದ್ಧ ದೂರು ದಾಖಲಿಸಲು ನಗರಸಭೆ ಪೌರಾಯುಕ್ತೆಗೆ ಸೂಚಿಸಿದ್ದೇನೆ. ಬಿದ್ದಿರುವ ಆವರಣ ಗೋಡೆ, ಮಣ್ಣನ್ನು ತೆರವು ಮಾಡಿ ಕೊಡಲು ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳಬಹುದಷ್ಟೇ.
– ಎಚ್.ಕೆ. ಕೃಷ್ಣಮೂರ್ತಿ
ಸಹಾಯಕ ಆಯುಕ್ತರು, ಪುತ್ತೂರು ಗಣೇಶ್ ಎನ್. ಕಲ್ಲರ್ಪೆ