Advertisement

Sulya: ಗ್ರಾಮೀಣ ಭಾಗದಲ್ಲಿ ಬಸ್‌ ತಂಗುದಾಣದ ಸ್ಥಿತಿ ಶೋಚನೀಯ

02:43 PM Aug 24, 2023 | Team Udayavani |

ಸುಳ್ಯ: ಗ್ರಾಮೀಣ ಭಾಗದಲ್ಲಿ ಸ್ಥಳೀಯ ಗ್ರಾ.ಪಂ. ಅನುದಾನದಲ್ಲಿ ನಿರ್ಮಿಸಲಾದ ಬಸ್‌ ತಂಗುದಾಣಗಳು ಇಂದು ಶೋಚನೀಯ ಸ್ಥಿತಿಯಲ್ಲಿದ್ದು, ನಿರ್ವಹಣೆ, ಕಾಯಕಲ್ಪ ನೀಡದ ಹಿನ್ನೆಲೆ ಜನತೆಯ ಬಳಕೆಯಿಂದ ದೂರವಾಗುತ್ತಿದೆ.

Advertisement

ಸುಳ್ಯ ತಾಲೂಕಿನ ಹಲವೆಡೆ ಇಂತಹ ಬಸ್‌ ತಂಗುದಾಣಗಳು ಕಾಣಬಹುದಾಗಿದೆ. ಅದರಲ್ಲೂ ಸ್ಥಳೀಯ ಸಂಪರ್ಕ ರಸ್ತೆಗಳ ಸಮೀಪ ಇರುವ ಬಸ್‌ ತಂಗುದಾಣಗಳೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಿಂದ ದೂರವಿರುವುದು ಕಾಣಬಹುದಾಗಿದೆ.

ಹಳೆಯ ಬಸ್‌ ತಂಗುದಾಣಗಳು

ಶೋಚನೀಯ ಸ್ಥಿತಿಯಲ್ಲಿರುವ ಬಸ್‌ ತಂಗುದಾಣಗಳಲ್ಲಿ ಹೆಚ್ಚಿನವು ದಶಕಗಳ ಹಿಂದೆ ನಿರ್ಮಿಸಲಾದ ಬಸ್‌ ತಂಗುದಾಣಗಳೇ ಆಗಿವೆ ಎನ್ನುತ್ತಾರೆ ಸ್ಥಳೀಯರು. ಅವುಗಳ ನಿರ್ವಹಣೆ ಸರಿಯಾಗಿ ಮಾಡದೆ ಜನರು ತಂಗುದಾಣಗಳನ್ನು ಬಳಸುತ್ತಿಲ್ಲ.

ಕಸದ ರಾಶಿ

Advertisement

ಹಲವೆಡೆ ಬಸ್‌ ತಂಗುದಾಣಗಳು ಉತ್ತಮ ರೀತಿಯಲ್ಲಿ ಇದ್ದು, ಜನರು ಬಳಸುತ್ತಿದ್ದರೂ ಕೆಲವು ಅನಾಗರಿಕ ವರ್ತನೆಯ ಜನರಿಂದ ಬಸ್‌ ತಂಗುದಾಣದಲ್ಲಿ ಕಸದ ರಾಶಿ ಕಾಣಬಹುದಾಗಿದೆ. ಅಲ್ಲದೇ ಮದ್ಯದ ಬಾಟಲಿ, ತಿಂಡಿ-ತಿನಿಸುಗಳ ಪ್ಯಾಕೆಟ್‌ ಮತ್ತಿತರ ವಸ್ತುಗಳು ಬಸ್‌ ತಂಗುದಾಣದಲ್ಲಿ ಅಲ್ಲಲ್ಲಿ ಬಿದ್ದಿದ್ದು, ಪ್ರಯಾಣಿಕರು ತಂಗುದಾಣದ ಪ್ರಯೋಜನ ಪಡೆಯಲು ಮುಜುಗರಪಡಬೇಕಾಗಿದೆ.

ನಿರ್ವಹಣೆಯೇ ಸವಾಲು

ಸ್ಥಳೀಯಾಡಳಿತ ಜನತೆಯ ಬೇಡಿಕೆಯಂತೆ ಅನುದಾನ ಹೊಂದಿಸಿ ಬಸ್‌ ತಂಗುದಾಣ ನಿರ್ಮಿಸಿದರೂ ಅದರ ನಿರ್ವಹಣೆ ಮಾತ್ರ ಸವಾಲಿನ ಕೆಲಸ. ಎಷ್ಟೋ ಕಡೆಗಳಲ್ಲಿ ಬಸ್‌ ತಂಗುದಾಣದ ಮೇಲ್ಛಾವಣಿಗಳು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದೆ. ಹಲವೆಡೆ ತಂಗು ದಾಣ ಬಳಕೆಯಿಲ್ಲದೆ ಪಾಳುಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಹೆಚ್ಚಿನ ಕಡೆಗಳಲ್ಲಿ ಬಸ್‌ ತಂಗುದಾಣದ ಬಳಿ ಗಿಡಗಂಟಿಗಳು ಬೆಳೆದು, ಜನರು ಬಳಕೆಗೆ ಹಿಂದೇಟು ಹಾಕುತ್ತಾರೆ.

ಇಂದು ಆಧುನಿಕ ಮಾದರಿಯ(ಫ್ಯಾಬ್ರಿಕೇಶನ್‌ ಆಧಾರಿತ) ಬಸ್‌ ತಂಗುದಾಣಗಳು ನಿರ್ಮಾಣ ಗೊಂಡಿದ್ದರೂ, ಹಳೆಯ ತಂಗುದಾಣಗಳ ಕಾಯಕಲ್ಪಕ್ಕೆ ಸ್ಥಳೀಯಾಡಳಿತ ಮುಂದಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಬಸ್‌ ತಂಗುದಾಣದ ಬಳಿ ವಾಣಿಜ್ಯ ಉದ್ದೇಶದ ಕೊಠಡಿಯನ್ನೂ ತೆರೆಯಲಾಗಿದ್ದರೂ ಅದು ಕೂಡ ಕೆಲವೆಡೆ ಉಪಯೋಗವಾಗುತ್ತಿಲ್ಲ. ಹಲವೆಡೆ ಜನರು ಬಸ್‌ ತಂಗುದಾಣದ ಹೊರ ಭಾಗದಲ್ಲಿ ನಿಂತು ಕಾಯಬೇಕಾದ ಸ್ಥಿತಿ ಇದೆ. ಸರಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಬಸ್‌ ತಂಗುದಾಣಗಳು ವಿವಿಧ ಕಾರಣ ಗಳಿಂದ ಶೋಚನೀಯ ಸ್ಥಿತಿ ಹಾಗೂ ಜನರ ಬಳಕೆಯಿಂದ ದೂರವಿದ್ದು, ಸ್ಥಳೀಯಾಡಳಿತ ಗಮನ ಹರಿಸಿ ಜನ ಬಳಕೆಗೆ ಪೂರಕವಾಗುವಂತೆ ನಿರ್ವಹಣೆ, ಕಾಯಕಲ್ಪ ಮಾಡಬೇಕಾಗಿದೆ. ಶಿಥಿಲಗೊಂಡಿರುವ ತಂಗುದಾಣ ಗಳ ದುರಸ್ತಿ, ಬೇಡಿಕೆ ಇರುವಲ್ಲಿ ತಂಗುದಾಣ ನಿರ್ಮಿಸುವ ಕೆಲಸವೂ ಆಗಲಿ ಎಂಬುದು ಸಾರ್ವಜನಿಕರ ಆಗ್ರಹ.

ಅನುದಾನ ಇರಿಸಲಾಗಿದೆ: ಶಿಥಿಲಗೊಂಡಿರುವ ಬಸ್‌ ತಂಗುದಾಣಗಳ ದುರಸ್ತಿಗೆ ಕ್ರೀಯಾಯೋಜನೆಯಲ್ಲಿ ಅನುದಾನ ಇರಿಸಲಾಗಿದೆ. ಮುಂದೆ ದುರಸ್ತಿ ಕಾರ್ಯ ನಡೆಸಲಾಗುವುದು. -ಪುರುಷೋತ್ತಮ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಹರಿಹರ ಪಲ್ಲತ್ತಡ್ಕ

ಗ್ರಾ.ಪಂ. ಜವಾಬ್ದಾರಿ: ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಬಸ್‌ ತಂಗುದಾಣಗಳ ನಿರ್ವಹಣೆ ಜವಾ ಬ್ದಾರಿ ಗ್ರಾ.ಪಂ.ಗಳಾಗಿದೆ. ಅವರೇ ಅದರ ನಿರ್ವಹಣೆ ಮಾಡಬೇಕು. –ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ತಾ.ಪಂ. ಸುಳ್ಯ

„ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next