Advertisement

ಅವೈಜ್ಞಾನಿಕ ನಡೆಗೆ ಖಂಡನೆ

12:18 PM Nov 05, 2018 | |

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪೊ›. ರಾಜೇಶ್‌ ಅವರು ಅವೈಜ್ಞಾನಿಕ ನಡೆಯನ್ನು ಅನಸರಿಸುತ್ತಿದ್ದು, ಇದರ ಪರಿಣಾಮ ಸಂಗೀತ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಸಂಗೀತ ವಿವಿ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Advertisement

ಸಂಗೀತ ವಿಶ್ವವಿದ್ಯಾನಿಲಯವನ್ನು ಕಳೆದ ತಿಂಗಳು ಮಂಡಕಳ್ಳಿಯ ಕೆಎಸ್‌ಒಯು ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಆದರೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಹತ್ತು ದಿನಗಳಲ್ಲೇ ಸಂಗೀತ ವಿವಿಯನ್ನು ನಗರದ ಬಲ್ಲಾಳ್‌ ವೃತ್ತದ ಬಳಿಯಲ್ಲಿದ್ದ ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಪ್ರಭಾರ ಕುಲಪತಿಗಳು ಸಮಿತಿಯನ್ನು ರಚಿಸಿದ್ದಾರೆ.

ಇದರ ಪರಿಣಾಮ ಸಂಗೀತ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಇನ್ನು ಕೆಎಸ್‌ಒಯು ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಪ್ರಭಾರ ಕುಲಪತಿಗಳು ವಿಫ‌ಲರಾಗಿದ್ದು, ಗ್ರಂಥಾಲಯ, ಕಂಪ್ಯೂಟರ್‌ ವ್ಯವಸ್ಥೆ, ಪೀಠೊಪಕರಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಪ್ರಭಾರ ಕುಲಪತಿ ಪೊ›. ರಾಜೇಶ್‌ ಅವರು ಆಸಕ್ತಿ ತೋರುತ್ತಿಲ್ಲ ಎಂದು ಸಂಗೀತ ವಿವಿ ವಿದ್ಯಾರ್ಥಿ ಸೂರಜ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ಇನ್ನೂ ಕೆಎಸ್‌ಒಯು ಕಟ್ಟಡಕ್ಕೆ ಸಂಗೀತ ವಿವಿ ಸ್ಥಳಾಂತರಗೊಂಡ 15 ದಿನಗಳಿಂದ ಈವರೆಗೆ ಪ್ರಭಾರ ಕುಲಪತಿಗಳು ಕೇವಲ ಮೂರು ಬಾರಿ ಮಾತ್ರವೇ ಸಂಗೀತ ವಿವಿಗೆ ಬೇಟಿ ನೀಡಿದ್ದಾರೆ. ಪೊ›. ರಾಜೇಶ್‌ ಅವರ ಈ ನಡೆಯೂ ಸಂಗೀತ ವಿವಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಬೇಸರ ಮೂಡಿಸಿದೆ. ಜತೆಗೆ ಲೋಕೋಪಯೋಗಿ ಇಲಾಖೆಯು ಬಲ್ಲಾಳ್‌ ವೃತ್ತದಲ್ಲಿ ಕಟ್ಟಡ ನಿರ್ಮಿಸಲು 4.5 ಕೋಟಿ ರೂ. ಅನುದಾನ ನೀಡಲು ಮುಂದಾಗಿದ್ದರೂ, ಪ್ರಭಾರ ಕುಲಪತಿಗಳು ಈ ಪ್ರಕ್ರಿಯೆಯನ್ನು ಮುಂದುವರಿಸದೆ ಕೈ ಚೆಲ್ಲಿದ್ದಾರೆ ಎಂದು ದೂರಿದರು. 

ರಾಜ್ಯಪಾಲರಿಗೆ ಪತ್ರ: ಪ್ರಭಾರ ಕುಲಪತಿ ಪ್ರೊ. ರಾಜೇಶ್‌ ಅವರ ನಡೆಯಿಂದ ಸಂಗೀತ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ 213 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಇದೆಲ್ಲದರಿಂದ ಬೇಸತ್ತ ನೂರಕ್ಕೂ ಹೆಚ್ಚು ವರ್ಗಾವಣೆ ಪತ್ರ(ಟಿಸಿ) ನೀಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಕುರಿತು ರಾಜ್ಯಪಾಲರಿಗೆ ವೈಯಕ್ತಿಕವಾಗಿ ಪತ್ರವನ್ನು ಸಹ ಬರೆದಿದ್ದಾರೆ.

Advertisement

ಆದ್ದರಿಂದ ಪ್ರಭಾರ ಕುಲಪತಿ ಪೊ›. ರಾಜೇಶ್‌ ಅವರನ್ನು ಅವರ ಮಾತೃಹುದ್ದೆಗೆ ವರ್ಗಾಯಿಸುವ ಮೂಲಕ, ಕಲೆ-ಸಂಗೀತದ ಜ್ಞಾನ ಹೊಂದಿರುವವರನ್ನು ಸಂಗೀತ ವಿವಿ ಕುಲಪತಿಯನ್ನಾಗಿ ನೇಮಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಗೀತ ವಿವಿ ವಿದ್ಯಾರ್ಥಿಗಳಾದ ಸರಸ್ವತಿ, ಸಿದ್ದೇಶ್ವರ್‌, ವಸಂತಕುಮಾರ್‌ ಇತರರಿದ್ದರು.

ಪಠ್ಯದ ಬದಲಾವಣೆ: ಮುಂದಿನ ಕೆಲವೇ ದಿನಗಳಲ್ಲಿ ಪರೀಕ್ಷೆ ಎದುರಾಗಲಿದ್ದು, ಈ ನಡುವೆ ಪ್ರಭಾರ ಕುಲಪತಿಗಳು ಸಿಂಡಿಕೇಟ್‌ ಸಭೆ ಅನುಮತಿ ಇಲ್ಲದೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ವಿಷಯಗಳನ್ನು ಸೇರಿಸುತ್ತಿದ್ದಾರೆ. ಇದರ ಪರಿಣಾಮ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕುವಂತಾಗಿದೆ.

ಇನ್ನೂ ಪ್ರದರ್ಶಕ ಕಲೆಗಳ ಜತೆಗೆ ಅವೈಜ್ಞಾನಿಕವಾಗಿ ಸೈನ್ಸ್‌ ಅಂಡ್‌ ಟೆಕ್ನಾಲಜಿ ಎಂಬ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಯುಜಿಸಿ ನಿಯಮದಂತೆ 36 ತರಗತಿಗಳನ್ನೂ ನಡೆಸದೆ ಕೇವಲ 14 ತರಗತಿಗಳನ್ನು ಮಾತ್ರವೇ ನಡೆಸಲಾಗಿದೆ. ಈ ಸಂಬಂಧ ಪರೀಕ್ಷೆಯನ್ನು ನಡೆದಿದ್ದು, ಅನ್ಯ ವಿಷಯದ ಬೋಧಕರಿಂದ ಮೌಲ್ಯಮಾಪನ ಮಾಡಿಸಿ, ಶೇ.100 ಫ‌ಲಿತಾಂಶವನ್ನೂ ನೀಡಿದ್ದಾರೆ ಎಂದು ಆರೋಪಿಸಿದರು. 

ಸಂಗೀತ ವಿವಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಬೋಧಕ ಸಿಬ್ಬಂದಿ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ಇನ್ನು ತರಗತಿಗಳಿಗೆ ಬಾರದ ವಿದ್ಯಾರ್ಥಿಗಳಿಗೂ ಪೂರ್ಣ ಹಾಜರಾತಿ ನೀಡಲಾಗುತ್ತಿದೆ. ಜತೆಗೆ ಪರೀಕ್ಷೆಯಲ್ಲೂ ಇವರುಗಳಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ಪ್ರತಿನಿತ್ಯ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.
-ಸೂರಜ್‌, ನೊಂದ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next