ಮಡಿಕೇರಿ: ಕಾಸರಗೋಡಿನ ಚೂರಿ ಗ್ರಾಮದಲ್ಲಿ ನಡೆದ ಮದ್ರಸ ಅಧ್ಯಾಪಕ ರಿಯಾಜ್ ಮುಸ್ಲಿಯಾರ್ ಹತ್ಯೆ ಪ್ರಕರಣವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾಕರ ಘಟಕ ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಮಕ್ಕಳಿಗೆ ಶಿಕ್ಷಣದ ಮೌಲ್ಯವನ್ನು ತಿಳಿಸುತ್ತಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮದ್ರಸ ಅಧ್ಯಾಪಕರ ಮೇಲಿನ ದಾಳಿ ಅತ್ಯಂತ ಅಮಾನ ವೀಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೃತ್ಯದ ಹಿಂದಿನ ಶಕ್ತಿಯನ್ನು ಬಯಲಿಗೆಳೆದು ಕಠಿನ ಶಿಕ್ಷೆಗೆ ಗುರಿ ಪಡಿಸಬೇಕೆಂದು ಅವರು ಒತ್ತಾಯಿಸಿದರು.
ಮದ್ರಸ ಅಧ್ಯಾಪಕರ ಹತ್ಯೆಯಿಂದಾಗಿ ದೇಶದಲ್ಲಿ ಅಲ್ಪಸಂಖ್ಯಾಕರಿಗೆ ರಕ್ಷಣೆ ಇಲ್ಲ ಎನ್ನುವ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬೆಳವಣಿಗೆ ವಿರುದ್ಧ ಕೇಂದ್ರ ಸರಕಾರ ಕಠಿನ ಕ್ರಮ ಕೈಗೊಳ್ಳಬೇಕಾಗಿದೆ. ಆಯಾ ರಾಜ್ಯ ಸರಕಾರಗಳು ಅಲ್ಪಸಂಖ್ಯಾಕರ ರಕ್ಷಣೆಗೆ ಮುಂದಾಬೇಕು ಮತ್ತು ರಾಜಕೀಯ ಲಾಭಕ್ಕಾಗಿ ಮುಸಲ್ಮಾನರನ್ನು ಕೆಣಕಿ ಅಮಾಯಕರ ಜೀವ ತೆಗೆ ಯುವ ಹುನ್ನಾರ ನಡೆಸುತ್ತಿರುವ ಕೋಮು ಶಕ್ತಿಗಳನ್ನು ಮಟ್ಟ ಹಾಕಲು ಮುಂದಾಗಬೇಕೆಂದು ಕೆ.ಎ. ಯಾಕೂಬ್ ಆಗ್ರಹಿಸಿದರು.
ಅಲ್ಪಸಂಖ್ಯಾಕರು ಕೋಮು ಸೌಹಾರ್ದವನ್ನು ಬಯಸುವ ಸಂದರ್ಭ ಗಳಲ್ಲಿ ಕೋಮು ಗಲಭೆಯ ವಿಷ ಬೀಜವನ್ನು ಬಿತ್ತಿ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಯಾವುದೇ ರೀತಿಯ ಹೇಯ ಕೃತ್ಯಕ್ಕೂ ಸಿದ್ಧ ಎನ್ನುವುದನ್ನು ಕೆಲವು ದುಷ್ಟ ಸಂಘಟನೆಗಳು ಸಾಬೀತು ಪಡಿಸುತ್ತಲೇ ಬಂದಿವೆ. ಈ ಬೆಳವಣಿಗೆಯಿಂದ ನಿತ್ಯ ಅಲ್ಪಸಂಖ್ಯಾಕರು ಭಯದ ವಾತಾವರಣದಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದರು. ಪೊಲೀಸ್ ಇಲಾಖೆ ತತ್‌ಕ್ಷಣ ಎಚ್ಚೆತ್ತುಕೊಂಡು ಧಾರ್ಮಿಕ ಕೇಂದ್ರಗಳು ಹಾಗೂ ಅಲ್ಪಸಂಖ್ಯಾಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಬೇಕೆಂದು ಒತ್ತಾಯಿಸಿದರು.
ಕಾಸರಗೋಡಿನ ಚೂರಿ ಗ್ರಾಮದಲ್ಲಿ ನಡೆದಿರುವ ಹತ್ಯಾ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಕೇಂದ್ರ ಸರಕಾರ ಹಾಗೂ ಕೇರಳ ಸರಕಾರವನ್ನು ಆಗ್ರಹಿಸುವುದಾಗಿ ತಿಳಿಸಿದ ಯಾಕೂಬ್ ಮೃತರ ಕುಟುಂಬಕ್ಕೆ ಕೇರಳ ಸರಕಾರ ರೂ.25 ಲಕ್ಷ ಪರಿಹಾರ ನೀಡಬೇಕೆಂದರು.