ವಿಜಯಪುರ: ಹಾವೇರಿ ಜಿಲ್ಲೆ ಚೌಡದಾನಪುರ ಅಂಬಿಗರ ಚೌಡಯ್ಯನವರ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಶ್ರೀಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಅಂಬಿಗ ಸಮುದಾಯದ ಜನರು ಪ್ರತಿಭಟನೆ ನಡೆಸಿದರು.
ಅಂಬಿಗರ ಚೌಡಯ್ಯ ಧಾರ್ಮಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಾಹೇಬಗೌಡ ಬಿರಾದಾರ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಸಮುದಾಯದ ಧರ್ಮಗುರುಗಳಾದ ಶಾಂತಭೀಷ್ಮ ಚೌಡಯ್ಯ ಶ್ರೀಗಳ ಮೇಲೆ ಸ್ಥಳೀಯರಾದ ಚಿತ್ರಶೇಖರ ಒಡೆಯರ ಹಲ್ಲೆ ನಡೆಸಿದ್ದಾರೆ. ಅಂಬಿಗರ ಸಮುದಾಯದ ಗುರುವಿನ ಐಕ್ಯ ಮಂಟಪವನ್ನು ಅತಿಕ್ರಮಿಸುವ ಅನ್ಯ ಸಮುದಾಯದ ವ್ಯಕ್ತಿ ಸಮಾಜದ ಕುಲಗುರುವಿನ ಮೇಲೆ ಹಾಗೂ ಶ್ರೀಗಳ ಜೊತೆ ಇದ್ದ ಕೃಷ್ಣಮೂರ್ತಿ ಒಡ್ನಿಕೊಪ್ಪ ಇವರ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ ಎಂದು ಕಿಡಿಕಾರಿದರು.
ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸಮಾಜದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವ ಜೊತೆಗೆ ಚೌಡಯ್ಯದಾನಪುರ ಚಲೋ ಚಳವಳಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಇದಲ್ಲದೇ ಅಂಬಿಗ ಸಮುದಾಯದ ಕುಮಟಗಿ ಗ್ರಾಮದ ಗಂಗೂಬಾಯಿ ಸುಕಾನಂದ ಬೆಳ್ಳುಬ್ಬಿ ಎಂಬ ಮಹಿಳೆಯನ್ನು ಕೊಲೆಮಾಡಿ ಆರೋಪಿಗಳನ್ನು ಬಂಧಿಸಬೇಕು. ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದ ರಾಮಣ್ಣ ಗೋವಿಂದ ಮಣೂರ ಅವರನ್ನು ಹತ್ಯೆ ಮಾಡಲು ಯತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ಭರತ ಎಸ್. ಕೋಳಿ, ಪ್ರಕಾಶ ಸೊನ್ನದ, ಪ್ರದೀಪ ಭುಂಯ್ನಾರಕರ, ಶಂಕರ ವಾಲಿಕಾರ, ರಾಜು ಅಂಬಿಗೇರ, ಶ್ರೀಶೈಲ ದೊಡಮನಿ, ಮಾದೆವ ಗದ್ಯಾಳ, ಆನಂದ ಬಸರಕೋಡ, ಗುರು ವಾಲಿಕಾರ, ಯಲ್ಲಪ್ಪ ಕೋಳಿ, ದೇವೆಂದ್ರ ವಾಲಿಕಾರ, ನಾಗಪ್ಪ ಹೊಳೆಪ್ಪಗೋಳ, ಸಂಗಮೇಶ ಕೋಲಕಾರ, ರವಿ ಭುಯ್ನಾರ, ಭೀಮು ಕೋಲಕಾರ, ಅಶೋಕ ಅಂಬಿಗೇರ, ಬಸವರಾಜ ಬಸರಕೋಡ, ದುಂಡಪ್ಪ ಮಾಗಣಗೇರಿ, ರಾಜೇಂದ್ರ ತಳವಾರ, ರವಿ ವಾಲಿಕಾರ, ಮಹೇಶ ಯರನಾಳ, ಪ್ರವೀಣ ಗಣಿ, ಮಾನೇಶ ಸಗರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.