ಕಲಬುರಗಿ: ಭಾರತೀಯ ಭವ್ಯ ಸಂಸ್ಕೃತಿಯಲ್ಲಿ ಸಮಾಧಾನ-ಶಾಂತಿಗೆ ಉತ್ತಮ ಸ್ಥಾನವಿದೆ. ಮನುಷ್ಯನಿಂದು ಯಾಂತ್ರಿಕ ಬದುಕಿನ ನಡುವೆ ನೆಮ್ಮದಿ ಹುಡುಕಾಡುವಂತೆ ಆಗಿರುವುದರಿಂದ ಸಮಾಧಾನ ಪರಿಕಲ್ಪನೆ ಅರಿತು ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ.ಮಹೇಶ್ವರಯ್ಯ ಹೇಳಿದರು.
ನಗರದ ಆಕಾಶವಾಣಿ ಕೇಂದ್ರದ ಹಿಂದುಗಡೆಯಕೆಸರಟಗಿ ರಸ್ತೆಯ ಸಮಾಧಾನದಲ್ಲಿ ಫೆ. 3ರಂದು ನಡೆಯುವ ಧ್ಯಾನ ಮಂದಿರ ಉದ್ಘಾಟನೆ ಹಾಗೂ 4ರಂದು ನಡೆಯುವ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ 75ನೇ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಪುರಾಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಲಬುರಗಿ ಪ್ರವಾಸಿ ತಾಣಕ್ಕೆ ಧ್ಯಾನ ಮಂದಿರ ಸ್ಫೂರ್ತಿಯಾಗಲಿದೆ ಎಂದು ಹೇಳಿದರು. ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ, ತಾವು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಪಾಸಾಗಿ ಐಎಫ್‌ಎಸ್ ಅಧಿಧಿಕಾರಿ ಎಂದು ತಮಿಳುನಾಡಿಗೆ ನಿಯೋಜಿತವಾಗಿದ್ದೆವು. ಆದರೆ ಜನ್ಮ ಕೊಟ್ಟಿದ ನಾಡಿಗೆ ಏನನ್ನಾದರೂ ಕೆಲಸ ಮಾಡಬೇಕೆಂಬ ಮಹಾದಾಸೆಯಿಂದ ರಾಜೀನಾಮೆ ನೀಡಿ ಕೆಎಎಸ್ ಪರೀಕ್ಷೆ ಪಾಸಾದೆವು.
ಈಗ ಘತ್ತರಗಾ ಭಾಗ್ಯವಂತಿ ದೇವಸ್ಥಾನ, ರೇವಗ್ಗಿ ಮುಂತಾದ ಕ್ಷೇತ್ರಗಳನ್ನು ಮಾದರಿ ಎನ್ನುವಂತೆ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅಲ್ಲದೇ ಬಡವರ ಪರ ಕೆಲಸ ಮಾಡುತ್ತಿದ್ದೇವೆ ಎಂದರು. ಕಾಶೀ ಜಗದ್ಗುರುಗಳಾದ ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮ ಉದ್ಘಾಟಿಸಿದರು. ಮಸೂತಿ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು. ಶಿರಸಿಯ ಶಿವಲಿಂಗ ಮಹಾಸ್ವಾಮಿಗಳಿಂದ ಪ್ರವಚನ ನಡೆಯಿತು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡ ಕಾಶೀನಾಥ ಸ್ವಾಮಿಗಳು, ಶಖಾಪುರ ಸಿದ್ಧರಾಮ ಶಿವಾಚಾರ್ಯರು, ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯರು, ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕ್ಯಾಸನೂರ ಶ್ರೀಗಳು, ಎಚ್‌ಕೆಇ ಅಧ್ಯಕ್ಷ ಬಸವರಾಜ ಭೀಮಳ್ಳಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಮಸ್ವಾಮಿ ಇದ್ದರು.
ಸ್ವತ್ಛತಾ ಜಾಗೃತಿ ಪಾದಯಾತ್ರೆ: ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ 75ನೇ ಅಮƒತ ಮಹೋತ್ಸವ ಫೆಬ್ರುವರಿ 4ರಂದು ಸಮಾಧಾನದಲ್ಲಿ ಜರುಗಲಿರುವ ನಿಮಿತ್ತ ಬುಧವಾರ ನಗರದ ಗೋದುತಾಯಿ ಕಾಲೋನಿಯಲ್ಲಿ ಸಂಸ್ಕಾರ ಭಾರತ ಹಾಗೂ ಸ್ವತ್ಛತಾ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಗುರುದೇವಾ ಸೇವಾ ಸಂಸ್ಥೆ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವತ್ಛತಾ ಪಾದಯಾತ್ರೆಗೆ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಕಸವನ್ನು ಎತ್ತಿ ಹಾಕುವುದರ ಮೂಲಕ ಚಾಲನೆ ನೀಡಿದರು. ಇದೆ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.