Advertisement

ಕಾಲೇಜು ರಸ್ತೆ ನಿರ್ಮಾಣ ವಿಚಾರ: ಸದಸ್ಯರ ವಾಗ್ವಾದ

05:28 PM Aug 02, 2018 | Team Udayavani |

ಕಾರವಾರ: ಮೆಡಿಕಲ್‌ ಕಾಲೇಜಿಗೆ ರಸ್ತೆ ನಿರ್ಮಾಣ ಹಾಗೂ ವಿದ್ಯುತ್‌ ಬಿಲ್‌, ನೂತನ ವಾಣಿಜ್ಯ ಕಟ್ಟಡಕ್ಕೆ ಪಾರ್ಕಿಂಗ್‌ ವ್ಯವಸ್ತೆ ಕಲ್ಪಿಸುವ ವಿಷಯಗಳು ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾದವು. ಮೆಡಿಕಲ್‌ ಕಾಲೇಜಿಗೆ ಸಂಪರ್ಕಿಸುವಂತೆ ರಸ್ತೆ ನಿರ್ಮಾಣ ಮಾಡಲು ಹಿರಿಯ ನಾಮ ನಿರ್ದೇಶಿತ ಸದಸ್ಯರಾದ ಎಂ.ವಿ. ಶೇಖ್‌ ಹಾಗೂ ಎಂ.ಆರ್‌. ನಾಯ್ಕ ಸಭೆಯಲ್ಲಿ ಪ್ರಸ್ತಾಪಿಸಿದರು. ನಗರಸಭೆ ರಸ್ತೆ ನಿರ್ಮಾಣದ ಕುರಿತು ನಿರ್ಣಯಿಸಿರುವುದು ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ಎತ್ತಿದ ಐದನೇ ವಾರ್ಡ್‌ ಸದಸ್ಯ ರವೀಂದ್ರ ಬಾನಾವಳೀಕರ್‌, ನಗರಸಭೆ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದ ಸ್ಥಳದಲ್ಲಿ ರಸ್ತೆಗೆ ಭೂಮಿಯೇ ಇಲ್ಲ. ಎಲ್ಲಿ ರಸ್ತೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಡಾ| ನಿತಿನ್‌ ಪಿಕಳೆ ಹಾಗೂ ಅನಿಲ್‌ ನಾಯ್ಕ ಧ್ವನಿಗೂಡಿಸಿದರು.

Advertisement

ಚರ್ಚೆಯ ಮಧ್ಯೆ 5ನೇ ವಾರ್ಡ್‌ನ ವಿಷಯದಲ್ಲಿ ನೀವು ತಲೆ ಹಾಕಬೇಡಿ ಎಂದು ರವೀಂದ್ರ ಬಾನಾವಳಿಕರ್‌ ಹೇಳುತ್ತಿದ್ದಂತೆ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ಈ ಕುರಿತು ಪರಿಶೀಲನೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

ಪಾರ್ಕಿಂಗ್‌ ಜಾಗವೆಲ್ಲಿದೆ?: ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡದ ನೀಲ ನಕ್ಷೆಯಲ್ಲಿ ಪಾರ್ಕಿಂಗ್‌ಗೆ ಕೆಳ ಅಂತಸ್ಥಿನಲ್ಲಿ ಅವಕಾಶ ನೀಡಬೇಕು ಎಂದು ಸದಸ್ಯ ಹಾಗೂ ಕೆಡಿಎ ಅಧ್ಯಕ್ಷ ಸಂದೀಪ ತಳೇಕರ್‌ ಆಗ್ರಹಿಸಿದರು. ನಗರದಲ್ಲಿ ವಿವಿಧ ವಾಣಿಜ್ಯ ಕಟ್ಟಡಗಳಿಗೆ ಅನುಮತಿ ನೀಡುವಾಗ ಪಾರ್ಕಿಂಗ್‌ ಜಾಗ ಬಿಡುವಂತೆ ನಾವೇ ಸೂಚಿಸುತ್ತೇವೆ. ಪಾರ್ಕಿಂಗ್‌ಗೆ ಜಾಗ ಬಿಡದಿದ್ದರೆ ಅನುಮತಿ ನಿರಾಕರಿಸಲಾಗುತ್ತದೆ. ಆದರೆ ನಗರಸಭೆ ಕಟ್ಟಡಕ್ಕೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿದ್ದರೆ ಹೇಗೆ ಎಂದು ಸಂದೀಪ ಪ್ರಶ್ನಿಸಿದರು. ಗಾಂಧಿ ಬಜಾರ್‌ ಹಳೆಯ ಕಟ್ಟಡ ಕೆಡಿವಿದ ಜಾಗದಲ್ಲಿಯೂ ಪಾರ್ಕಿಂಗ್‌ ಜಾಗ ಬಿಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಸಭೆಯ ನಿರ್ಣಯವನ್ನು ಮೀರಿ ನಕ್ಷೆಯಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ನಾಮಕರಣ ಸದಸ್ಯರೊಬ್ಬರು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ ಮೋಹನರಾಜ್‌, ಕಾರವಾರದ ನಗರದಲ್ಲಿ ಕೆಳ ಅಂತಸ್ತು ನಿರ್ಮಾಣಕ್ಕೆ ಭೂಮಿಯನ್ನು ಅಗೆದರೆ ಕೆಲವೇ ಅಡಿಗಳಿಗೆ ನೀರು ಉಕ್ಕುತ್ತದೆ. ಇದರಿಂದ ಕೆಳ ಅಂತಸ್ತು ನಿರ್ಮಾಣಕ್ಕೆ ವೆಚ್ಚ ಹೆಚ್ಚಾಗುತ್ತದೆ. ಆದರೆ ಬಂದಿರುವ ಅನುದಾನ ಕೇವಲ ಎರಡು ಕೋಟಿ ರೂ. ಮಾತ್ರ ಆಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ಕೆಳ ಅಂತಸ್ತು ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ಕಟ್ಟಡದ ಮುಂಭಾಗದಲ್ಲಿ ಪಾರ್ಕಿಂಗ್‌ ಗೆ ಜಾಗ ಬಿಡಲಾಗುತ್ತದೆ ಎಂದರು.

ಪ್ಯಾನಲ್‌ ಬೋರ್ಡ್‌ ಹಾಕಬೇಕು: ಹೆಸ್ಕಾಂದವರು ನಗರಸಭೆ ಬಳಕೆಯ ವಿದ್ಯುತ್‌ ಬಿಲ್ಲನ್ನು ಅಂದಾಜಿಗೆ ನೀಡುತ್ತಿದ್ದಾರೆ . ಪ್ರತಿ ತಿಂಗಳು ಮೂರು ಲಕ್ಷ ರೂ. ವಿದ್ಯುತ್‌ ಬಿಲ್‌ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಬಳಕೆಯನ್ನು ಲೆಕ್ಕ ಹಾಕಲು ಪ್ಯಾನಲ್‌ಗ‌ಳನ್ನು ಅಳವಡಿಸಬೇಕಿದೆ ಎಂದು ಪೌರಾಯುಕ್ತ ಎಸ್‌. ಯೋಗೇಶ್ವರ ಹೇಳಿದರು. ಪ್ಯಾನಲ್‌ ಬೋರ್ಡ್‌ ಅಳವಡಿಸಲು ಸದಸ್ಯರು ಅನುಮತಿ ನೀಡಿದರು. ಸದಸ್ಯ ರಮೇಶ ಗೌಡ ಮಾತನಾಡಿ, ಬೈತಖೋಲ್‌ ಘಟ್ಟದಲ್ಲಿ 43 ಬೀದಿ ದೀಪದ ಕಂಬಗಳಿವೆ. ಆದರೆ ಹೆಚ್ಚಿನ ಕಂಬಗಳಿಗೆ ದೀಪದ ವ್ಯವಸ್ಥೆ ಇಲ್ಲ. ಬಲ್ಬ್ ಅಳವಡಿಸಿ ಬೀದಿ ದೀಪ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

Advertisement

ವೀರಯೋಧನ ಪುತ್ಥಳಿ: ಇತ್ತೀಚೆಗೆ ಛತ್ತೀಸಗಡದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಬಿಎಸ್‌ಎಫ್‌ ಯೋಧ ವಿಜಯಾನಂದ ನಾಯ್ಕ ಅವರ ಪುತ್ಥಳಿಯನ್ನು ನಗರಸಭೆ ಉದ್ಯಾನದಲ್ಲಿ ನಿರ್ಮಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಎಸ್‌. ಯೋಗೇಶ್ವರ ತಿಳಿಸಿದರು.

ಹಳೆಯ ಮರ ಮುಟ್ಟಿಗೆ ಬೆಲೆ ನಿರ್ಣಯಿಸಿ: ನಗರಸಭೆ ಹಳೆಯ ಕಟ್ಟಡವು 1864ರಲ್ಲಿ ನಿರ್ಮಾಣಗೊಂಡಿದ್ದು, ಬೆಲೆ ಬಾಳುವ ಮರ ಮುಟ್ಟುಗಳನ್ನು ಹೊಂದಿದೆ. ಅಲ್ಲದೇ ಪ್ರಚ್ಯ ವಸ್ತುಗಳೂ ಇವೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಳೆಯ ಕಟ್ಟಡ ಕೆಡುವುದಕ್ಕೂ ಮುನ್ನ ಅರಣ್ಯ ಇಲಾಖೆ ಹಾಗೂ ತಜ್ಞರಿಂದ ಪರಿಶೀಲನೆ ನಡೆಸಿ ಮರ ಮುಟ್ಟುಗಳ ಬೆಲೆಯನ್ನು ಅಂದಾಜು ಮಾಡಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next