Advertisement
ಕಳೆದ ವರ್ಷ ಮಳೆಗಾಲದಲ್ಲಿ ಶಾಲಾ ಕಾಂಪೌಂಡ್ ತಾಗಿ ಖಾಸಗಿ ಕಂಪೆನಿಯವರು ಪೈಪ್‌ಲೈನ್ ಅಳವಡಿಸಲು ಹೊಂಡ ತೋಡಿದ್ದು ಅದರ ಜತೆಗೆ ವಿಪರೀತ ಮಳೆಯ ಕಾರಣ ಕಾಂಪೌಂಡ್ ಸಂಪೂರ್ಣ ಕುಸಿದು ಬಿದ್ದಿತ್ತು. ಮಳೆಯ ನೀರು ಮೈದಾನದಲ್ಲಿ ರಭಸದಿಂದ ಹರಿದ ಪರಿಣಾಮ ಶಾಲಾ ಮೈದಾನ ಕೂಡ ಕುಸಿಯುವ ಹಂತಕ್ಕೆ ತಲುಪಿದ್ದು ಕಟ್ಟಡವೂ ಕುಸಿಯುವ ಭೀತಿ ಇದೆ. ಈ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಈ ಹಿಂದೆ ಭೇಟಿ ನೀಡಿ ಪ್ರಕೃತಿ ವಿಕೋಪ ನಿಧಿಯಲ್ಲಿ ದುರಸ್ತಿ ಮಾಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ದುರಸ್ತಿ ಕಾಣದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸ್ಥಳೀಯಾಡಳಿತದವರಲ್ಲಿ ವಿಚಾರಿಸಿದಾಗ ಶಾಲಾ ಕಾಂಪೌಂಡ್ ದುರಸ್ತಿ ಮಾಡುವಷ್ಟು ಅನುದಾನ ನಮ್ಮ ಪಂಚಾಯತ್‌ನಲ್ಲಿ ಇಲ್ಲದ ಕಾರಣ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ರಸ್ತೆಯ ಬದಿಯಲ್ಲಿ ಶಾಲೆ ಇರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸುಮಾರು 20 ವರ್ಷಗಳ ಹಿಂದೆ ಸ್ಥಳೀಯರು ಸೇರಿ ಈ ಶಾಲೆಗೆ ವಿಸ್ತಾರವಾದ ಮೈದಾನ ಹಾಗೂ ಆವರಣ ಗೋಡೆಯನ್ನು ನಿರ್ಮಿಸಿದ್ದರು. ಆದರೆ ಶಾಲಾ ಆವರಣ ಗೋಡೆ ಮಳೆಗೆ ಕುಸಿದು ಬಿದ್ದು ವರ್ಷ ಕಳೆದರೂ ಅದನ್ನು ನಿರ್ಮಿಸಲು ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
Related Articles
ಈ ಬಗ್ಗೆ ಶಾಲಾ ಸಿಬಂದಿಗೆ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಪಂಚಾಯತ್‌ಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆಯಾಗಲಿ, ಆಶ್ವಾಸನೆಯಾಗಲಿ ಬಂದಿಲ್ಲ, ಶಾಲಾ ಕಾಂಪೌಂಡ್ ಕುಸಿತದಿಂದ ಶಾಲಾ ಮೈದಾನದ ಮಣ್ಣು ರಸ್ತೆಗೆ ಆವರಿಸಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ, ಆದಷ್ಟು ಬೇಗ ಸಂಬಂಧಪಟ್ಟವರು ಶಾಲಾ ಆವರಣ ಗೋಡೆಯನ್ನು ನಿರ್ಮಿಸಿಕೊಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.
Advertisement
ಅಪಾಯ ತಪ್ಪಿದ್ದಲ್ಲಶಾಲಾ ಕಾಂಪೌಂಡ್ ಸಂಪೂರ್ಣ ಕುಸಿದಿದ್ದು ಕಾಂಪೌಂಡ್‌ಗೆ ತಾಗಿದಂತೆ ಶಾಲಾ ಕಟ್ಟಡವಿದ್ದು ಪಕ್ಕದಲ್ಲಿರುವ ಶಾಲಾ ಮೈದಾನ ಕೂಡ ಮಳೆ ನೀರಿನ ಹರಿವಿನಿಂದ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅಲ್ಲದೆ ಕಳೆದ 3 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಶಾಲಾ ಕಟ್ಟಡ ಕೂಡಾ ಕುಸಿಯುವ ಭೀತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಶೀಘ್ರ ದುರಸ್ತಿ
ಕೊಂಕಣಾರಬೆಟ್ಟು ಸ.ಕಿ. ಪ್ರಾ. ಶಾಲೆಯ ಕಂಪೌಂಡ್ ದುರಸ್ತಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ 93 ಮೀ. ಉದ್ದದ ಕಂಪೌಂಡ್ ನಿರ್ಮಾಣಕ್ಕೆ 2ಲಕ್ಷ 95 ಸಾ.ರೂ. ಹಣ ಇಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಶೀಘ್ರವಾಗಿ ಶಾಲಾ ಕಾಂಪೌಂಡ್ ದುರಸ್ತಿ ಕಾರ್ಯ ನಡೆಯಲಿದೆ.
– ಶಶಿಧರ್ ಜಿ.ಎಸ್. ಕ್ಷೇತ್ರ ಶಿಕ್ಷಾಣಾಧಿಕಾರಿ, ಕಾರ್ಕಳ ಅಪಾಯ ಖಂಡಿತ
ಶಾಲಾ ಕಾಂಪೌಂಡ್ ಇನ್ನೂ ದುರಸ್ತಿಯಾಗದಿರುವುದು ಬೇಸರದ ಸಂಗತಿ. ಕಾಂಪೌಂಡ್‌ನೊಂದಿಗೆ ಶಾಲಾ ಮೈದಾನ ಕೂಡ ಅಪಾಯದಲ್ಲಿದೆ. ಈ ಬಗ್ಗೆ ಸ್ಥಳೀಯಾಡಳಿತ, ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಅಪಾಯ ಖಂಡಿತ.
– ಶ್ರೀಕರ್ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರು, ಕಬ್ಬಿನಾಲೆ ಹೆಬ್ರಿ ಉದಯಕುಮಾರ್ ಶೆಟ್ಟಿ