Advertisement

ಕಲಾವಿದರ ಕೊರತೆಯಿಂದ ಕಂಪನಿಗೆ ಬೀಗ

12:35 AM Jan 19, 2020 | Team Udayavani |

ಬೆಂಗಳೂರು: “ನಾಟಕ ಕಂಪನಿ ನಡೆಸಲು ಸಾಲ ಕೊಟ್ಟವರು ಹಾರ್ಮೋನಿಯಂ ತೆಗೆದುಕೊಂಡು ಹೋಗುವಾಗ ತಾಯಿಯೊಬ್ಬರು ತನ್ನ ತಾಳಿ ಕೊಟ್ಟು ಸಾಲ ತೀರಿಸಿದ್ದರಿಂದಲೇ ಇಂದು ಗುರು ಕುಮಾರೇಶ್ವರ ನಾಟಕ ಸಂಘ ಮುನ್ನಡೆಯುತ್ತಿದೆ’ ಎಂದು ರಂಗ ಕಲಾವಿದ ಎಲ್‌.ಬಿ.ಶೇಖ (ಮಾಸ್ತರ) ತಮ್ಮ ಮನದಾಳ ಮಾತನ್ನು ಬಿಚ್ಚಿಟ್ಟರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಮುಖ್ಯ ಅತಿಥಿಯಾಗಿ ಮಾತನಾಡಿ, ನಾಟಕ ಕಂಪನಿ ಮುನ್ನಡೆಸಲು ಮನೆಯಲ್ಲಿದ್ದ ಬಂಗಾರದ ಒಡವೆ ಅಡವಿಟ್ಟಿದ್ದೆ. ಇದ್ದ ನಾಲ್ಕು ಎಕರೆ ಜಮೀನನ್ನೂ ಮಾರಾಟ ಮಾಡಿದ್ದೆ. ಆದರೂ, ಸಾಲದ ಸುಳಿಯಲ್ಲಿ ಸಿಲುಕಿದ್ದೆ. ಸಾಲ ನೀಡಿದವರು ನನ್ನ ಹಾರ್ಮೋನಿಯಂ ಹೊತ್ತುಕೊಂಡು ಹೋಗುತ್ತಿದ್ದರು.

ಇದನ್ನು ನೋಡಿದ ಕಲಾವಿದ ರಾಜು ತಾಳಿಕೋಟೆ ಅವರ ತಾಯಿ, ಕಂಪನಿ ಮುಚ್ಚಿದರೆ ಕಲಾವಿದರು ಅನಾಥರಾಗುತ್ತಾರೆಂದು ಸಾಲ ನೀಡಿದವರಿಗೆ ತನ್ನ ತಾಳಿಯನ್ನೇ ತೆಗೆದು ಕೊಟ್ಟಿದ್ದರು. ಆ ಸನ್ನಿವೇಶ ಇಂದಿಗೂ ಕಣ್ಣಮುಂದಿದೆ ಎಂದು ಹೇಳಿದರು. ನಾಟಕ ಕಂಪನಿ ಮಾಲೀಕರು ಶ್ರೀಮಂತರಾಗಿ ರುತ್ತಾರೆ ಎಂದು ಭಾವಿಸಿದವರೇ ಹೆಚ್ಚು.

ಆದರೆ, ಒಂದೆರಡು ನಾಟಕಗಳ ಕ್ಯಾಂಪ್‌ನಲ್ಲಿ ನಷ್ಟ ಅನುಭವಿಸಿದರೆ, ಅದನ್ನು ಸುಧಾರಿಸಿಕೊಳ್ಳಲು ವರ್ಷಗಳೇ ಬೇಕು. ಕಾಡುಗಳ್ಳ ವೀರಪ್ಪನ್‌ ಹಾಗೂ ಇನ್ನಿತರ ವಂಚಕರನ್ನು ಹಿಡಿಯುವುದಕ್ಕೆ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತದೆ. ಆದರೆ ಕಲಾವಿದರಿಗೆ ಮಾಸಾಶನ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತದೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಗೀತ ಕಲಿಯಲು ಬೆಳ್ಳಿ ಡಾಬು ಮಾರಾಟ: ಇಡೀ ಊರಿನಲ್ಲಿ ನಮ್ಮದೊಂದೆ ಮುಸ್ಲಿಂ ಕುಟುಂಬ. ಐದು ವರ್ಷದವನಿದ್ದಾಗ ತಂದೆ ತೀರಿಕೊಂಡರು. ತಾಯಿ ಕೂಲಿ ಕೆಲಸ ಮಾಡಿ ಸಾಕಿದಳು. ನನಗೆ ಓದಿಗಿಂತ ಸಂಗೀತ ಕಲಿಯಬೇಕೆಂಬ ಆಸೆ ಇತ್ತು. ಏಳನೇ ತರಗತಿಯಲ್ಲಿ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಪಾತ್ರದಲ್ಲಿ ನಟಿಸಿದ್ದೆ. ಇಡೀ ಊರ ಜನರೇ “ರಾಜಕುಮಾರನಂತೆ ಕಾಣುತ್ತೀಯ’ ಎಂದಿದ್ದರು.

Advertisement

ಹೊಗಳಿಕೆ ಮಾತುಗಳಿಂದ ಪ್ರಭಾವಿತನಾಗಿ ಖಾಸಕೇಶ್ವರ ಮಠದಲ್ಲಿ ಸಂಗೀತ ಕಲಿಯಲು ನಿರ್ಧರಿಸಿದೆ. ಅದಕ್ಕಾಗಿ ಮನೆಯಲ್ಲಿರುವ ಪೆಟ್ಟಿಗೆಯಲ್ಲಿದ್ದ ಅಜ್ಜಿಯ ಬೆಳ್ಳಿ ಡಾಬು ಕಳವು ಮಾಡಿ ಅದರಲ್ಲಿ ಬಂದಿದ್ದ 25 ರೂ. ನಲ್ಲಿ 24 ರೂ.ಯನ್ನು ಪ್ರವೇಶ ಶುಲ್ಕ ಕಟ್ಟಿದ್ದೆ. ಸಂಗೀತದಲ್ಲಿ ಜೂನಿಯರ್‌, ಸೀನಿಯರ್‌ ಪರೀಕ್ಷೆಯನ್ನು ಉತೀರ್ಣಗೊಂಡೆ.

ವೃತ್ತಿರಂಗಭೂಮಿ ತರಬೇತಿ ಶಾಲೆ ತೆರೆಯಲು ಮನವಿ: ನಾಟಕ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ವೃತ್ತಿ ರಂಗ ಕಲಾವಿದರನ್ನು ತಯಾರಿಸಲು ಇಲಕಲ್‌ನಲ್ಲಿ ಶಿಬಿರ ಆಯೋಜಿಸಲಾಗಿತ್ತು. 48 ಮಂದಿ ತರಬೇತಿ ಪಡೆದರು. ಆದರೀಗ ನಾಲ್ವರು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏನೇ ಮಾಡಿದರೂ ಕಲಾವಿದರದ್ದೇ ಕೊರತೆ ಇದೆ. ವೃತ್ತಿರಂಗಭೂಮಿ ತರಬೇತಿ ಶಾಲೆ ತೆರೆಯುವುದು ನನ್ನ ದೊಡ್ಡ ಕನಸಾಗಿತ್ತು.

ಅಂದಿನ ಸಚಿವೆ ಉಮಾಶ್ರೀ ಅವರ ಜತೆ ಮಾತನಾಡಿದೆ. ಶಾಲೆ ನಿರ್ಮಾಣಕ್ಕೆ ದಾವಣಗೆರೆಯ ಕೊಂಡಜ್ಜಿಯಲ್ಲಿ ಸ್ಥಳವನ್ನೂ ಗುರುತಿಸಲಾಗಿದೆ. ಕಟ್ಟಡಕ್ಕಾಗಿ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದೆ. ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹಣ ಇಲಾಖೆಯಲ್ಲಿಯೇ ಇದೆ. ಈಗಿನ ಅಧಿಕಾರಿಗಳು ಆ ಕೆಲಸವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next