ಮಂಗಳೂರು: ದ.ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿಕೊಂಡಿರುವ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರ ರಜತ ಸಂಭ್ರಮ, ನವೋದಯ ಸ್ವಸಹಾಯಸಂಘಗಳ ವಿಂಶತಿ ಸಮಾವೇಶ ಜ. 19 ರಂದು ಜರಗಲಿದ್ದು, ನಗರದ ನಾಗರಿಕರು ಸಹಕಾರ ಸಂಭ್ರಮಕ್ಕೆ ಸಹಕರಿಸುವಂತೆ ಅಭಿನಂದನಾ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ದೇಶದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಸಹಕಾರಿಗಳೆಲ್ಲ ಒಂದು ಕಡೆ ಸೇರಿ ತಮ್ಮ ಏಕತೆ ಮತ್ತು ಬದ್ಧತೆ
ಯನ್ನು ಎತ್ತಿ ಹಿಡಿಯುವ ಸಹಕಾರಿ ಸಮಾವೇಶ ಇದಾಗ ಲಿದ್ದು, 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈ ಸಂದರ್ಭ ಸಾರ್ವಜನಿಕರಿಗೆ ವಾಹನ ಮಾರ್ಗದಲ್ಲಾಗುವ ಬದಲಾವಣೆ ಮತ್ತು ಸಂಘಟನೆಗೆ ಜನತೆಯ ಸಹಕಾರ ಕೋರಿದ್ದಾರೆ.
ಜ. 18ಕ್ಕೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಿಂದ 10 ಸಾವಿರ ಜನ ನಗರಕ್ಕೆ ಬರುವವರಿದ್ದು, ಸಮಿತಿ ಇವರ ಅತಿಥಿ ಸತ್ಕಾರಕ್ಕಾಗಿ 21 ಛತ್ರಗಳನ್ನು ಕಾಯ್ದಿರಿಸಿದೆ. ಜ. 19ರಂದು ಕುಂದಾಪುರ, ಕಾರ್ಕಳ, ಉಡುಪಿ ಕಡೆಯಿಂದ ಆಗಮಿಸುವವರಿಗೆ ಸುರತ್ಕಲ್ ಕುಲಾಲ ಭವನದ ಬಳಿ ಪ್ಯಾಕಿಂಗ್ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಂದ ಕೊಟ್ಟಾರಚೌಕಿಯಾಗಿ ಪಿ.ವಿ.ಎಸ್. ಸರ್ಕಲ್ -ನವಭಾರತ ಸರ್ಕಲ್‌ನಲ್ಲಿ ಸಹಕಾರಿಗಳನ್ನು ಇಳಿಸಿ ಬಸ್ಸುಗಳು ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಿಲುಗಡೆಗೊಳ್ಳಲಿವೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳದಿಂದ ಆಗಮಿಸುವವರಿಗೆ ಅಡ್ಯಾರ್ ಗಾರ್ಡನ್ ಬಳಿ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಂದ ಪಂಪ್‌ವೆಲ್ ಸರ್ಕಲ್ ಆಗಿ ಕಂಕನಾಡಿ, ಜ್ಯೋತಿ ಸರ್ಕಲ್ ಮೂಲಕ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಕಾರ್ಪೊರೇಶನ್ ಬ್ಯಾಂಕ್ ಹತ್ತಿರ ಸಹಕಾರಿಗಳನ್ನು ಇಳಿಸಿ, ಮಂಗಳಾದೇವಿಯಾಗಿ ಗೋಲ್ಡ್ ಪಿಂಚ್ ಮೈದಾನದಲ್ಲಿ ಬಸ್ಸುಗಳ ನಿಲುಗಡೆ. ಕಾರ್ಕಳ, ಮೂಡುಬಿದಿರೆ, ಬಜ್ಪೆ, ಗುರುಪುರಗಳಿಂದ ಆಗಮಿಸುವವರಿಗೆ ಗುರುಪುರ ಕೈಗಾರಿಕಾ ಪ್ರದೇಶದ ಬಳಿ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಂದ ನಂತೂರು ಮೂಲಕ ಜ್ಯೋತಿ ಸರ್ಕಲ್‌ನಿಂದ ಎ. ಬಿ. ಶೆಟ್ಟಿ ಸರ್ಕಲ್ ಇಳಿಸಿ ಗೋಲ್ಡ್ ಪಿಂಚ್ ಮೈದಾನದಲ್ಲಿ ಬಸ್ಸುಗಳ ನಿಲುಗಡೆ.
ಅತಿಥಿಗಳಿಗೆ ಟೌನ್ ಹಾಲ್ ಮತ್ತು ಸರಕಾರಿ ಕಾಲೇಜು ಮೈದಾನ, ಉಭಯ ಜಿಲ್ಲೆಗಳ ಸಹಕಾರಿ ಸಂಸ್ಥೆಗಳ ಅಧ್ಯಕ್ಷರ ವಾಹನ ನಿಲುಗಡೆಗೆ ಅಲೋಶಿಯಸ್ ಮೈದಾನ, ವಿವಿಧ ಜಿಲ್ಲೆಗಳ ಸಹಕಾರಿ ಮತ್ತು ಆಮಂತ್ರಿತರ ವಾಹನ ನಿಲುಗಡೆಗೆ ಬಂಟ್ಸ್ ಹಾಸ್ಟೆಲ್ ಮೈದಾನ, ಶಾಂತಿ ನಿಲಯ ಮೈದಾನ ಮತ್ತು ಎಮ್ಮೆಕೆರೆ ಮೈದಾನ ಹಾಗೂ ಕದ್ರಿ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸಮಾವೇಶವನ್ನು ಶಿಸ್ತುಬದ್ಧವಾಗಿ ನಡೆಸಲು ಕೇಂದ್ರೀಯ ಅಭಿನಂದನಾ ಸಮಿತಿಯೊಂದಿಗೆ 16 ಉಪ ಸಮಿತಿ ರಚಿಸಿ ಕೊಂಡು ಜವಾಬ್ದಾರಿ ಹಂಚಿಕೊಳ್ಳಲಾಗಿದೆ. ಜ. 19ರಂದು ಬೆಳಗ್ಗೆ 9.30ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕಿನಿಂದ ಮೆರವಣಿಗೆ ನಡೆ ಯಲಿದೆ. ಮೆರವಣಿಗೆ ಉದ್ದಕ್ಕೂ ಸ್ವಚ್ಚತಾ ತಂಡದೊಂದಿಗೆ ವಾಹನವಿದ್ದು, ರಸ್ತೆಯಲ್ಲಿ ಯಾವುದೇ ರೀತಿಯಲ್ಲಿ ಸ್ವಚ್ಚತೆಗೆ ತೊಡಕಾಗದ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದರು.