ಹೊಸದಿಲ್ಲಿ: ಸುಮಾರು 5 ತಾಸು ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ಚುನಾವಣಾ ಆಯೋಗವು, “ನಿಜವಾದ ಸಮಾಜವಾದಿ ಪಕ್ಷ ಯಾವುದು?’ ಹಾಗೂ “ಸೈಕಲ್ ಚಿಹ್ನೆ ಯಾರಿಗೆ ಸೇರಿದ್ದು?’ ಎಂಬ ವಿಷಯಗಳ ಬಗ್ಗೆ ತೀರ್ಪು ಕಾಯ್ದಿರಿಸಿದೆ.
ಶುಕ್ರವಾರ ಆಯೋಗವು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಬಣಗಳನ್ನು ವಿಚಾರಣೆಗೆ ಆಹ್ವಾನಿಸಿತ್ತು.
ಈ ವೇಳೆ ಅಖೀಲೇಶ್ ಪರ ಹಾಜರಾದ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, “ಅಖೀಲೇಶ್ ಅವರ ಪರ ಹೆಚ್ಚಿನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಪಕ್ಷದ ಪ್ರತಿನಿಧಿಗಳು ಇದ್ದಾರೆ’ ಎಂದು ವಾದಿಸಿದರು.
ಇದಕ್ಕೆ ಮುಲಾಯಂ ತಂಡವು ತಿರುಗೇಟು ನೀಡಿ, “ಅಖೀಲೇಶ್ ಅವರನ್ನು ಪಕ್ಷಾಧ್ಯಕ್ಷರನ್ನಾಗಿ ಚುನಾಯಿಸಿದ ಸಭೆಯೇ ಸಂವಿಧಾನಬಾಹಿರ. ಅಲ್ಲದೆ, ಅವರಿಗೆ ಬೆಂಬಲ ನೀಡಿದ್ದಾಗಿ ಶಾಸಕರು ಸಲ್ಲಿಸಿದ ಪ್ರಮಾಣಪತ್ರಗಳ ಅಸಲಿತನವೂ ಅನುಮಾನಾಸ್ಪದ’ ಎಂದು ಹೇಳಿತು.
5 ತಾಸಿನ ವಾದ-ಪ್ರತಿವಾದದ ಬಳಿಕ ಆಯೋಗವು ತೀರ್ಪು ಕಾಯ್ದಿರಿಸಿತು. ಜನವರಿ 17ರಂದು ಉತ್ತರಪ್ರದೇಶ ಚುನಾವಣೆಯ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಷ್ಟರೊಳಗೆ ಚುನಾವಣಾ ಆಯೋಗ ತೀರ್ಪು ಪ್ರಕಟಿಸಬೇಕಿದೆ. ಒಂದು ವೇಳೆ ಎರಡೂ ಬಣಗಳ ವಾದ ಆಯೋಗಕ್ಕೆ ತೃಪ್ತಿ ತರದಿದ್ದರೆ ಸೈಕಲ್ ಚಿಹ್ನೆಯನ್ನು ಅಮಾನತುಗೊಳಿಸಿ ಉಭಯ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡುವ ಸಂಭವವಿದೆ.
ಅಖೀಲೇಶ್ ಪರ ಸಿಬಲ್ ವಾದ
ಅಖೀಲೇಶ್ ಯಾದವ್ ಬಣದ ಪರ ಕಾಂಗ್ರೆಸ್ ಮುಖಂಡ, ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು ಅಚ್ಚರಿ ಮೂಡಿಸಿತು. ಅಖೀಲೇಶ್ ಬಣವು ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧತೆ ನಡೆಸಿರುವುದರ ಮುನ್ಸೂಚನೆ ಇದಾಗಿದೆ ಎಂದು ಹೇಳಲಾಗಿದೆ.