Advertisement

ಹಿಂದುಳಿದ ವರ್ಗಗಳ ಆಯೋಗ ರಾಜ್ಯಗಳ ಅಧಿಕಾರಕ್ಕೆ ಭಂಗವಿಲ್ಲ

11:33 AM Aug 01, 2017 | |

ನವದೆಹಲಿ: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಸಂವಿಧಾನದ 123ನೇ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ವಿಶೇಷವೆಂದರೆ, ಕರ್ನಾಟಕದ ಪ್ರಮುಖ ಬೇಡಿಕೆಯಾದ “ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ’ ಅಂಶ, ಅಂದರೆ, 338-ಬಿ ಅನ್ನೇ ಈ ತಿದ್ದುಪಡಿ ಮಸೂದೆಯಿಂದ ಕೈಬಿಡಲಾಗಿದೆ. 

Advertisement

ಅಹಿಂದ ಮತಗಳ ಮೇಲೆ ಕಣ್ಣಿಟ್ಟ ರೂಪಿಸಲಾಗಿದ್ದ ಈ ತಿದ್ದುಪಡಿ ಮಸೂದೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ಕಾಂಗ್ರೆಸ್‌ ನಾಯಕರು ಹಾಗೂ ರಾಜ್ಯಸಭೆಯ ಪರಿಶೀಲನಾ ಸಮಿತಿ ಸದಸ್ಯರಾದ ದಿಗ್ವಿಜಯ ಸಿಂಗ್‌, ಕರ್ನಾಟಕದ ಬಿ.ಕೆ. ಹರಿಪ್ರಸಾದ್‌ ಮತ್ತು ಹುಸೇನ್‌ ದಳವಾಯಿ ಅವರು ಸೂಚಿಸಿದ್ದ ತಿದ್ದುಪಡಿಗಳಿಗೆ ಮನ್ನಣೆ ದೊರೆಯುವ ಮೂಲಕ, ರಾಜ್ಯಗಳ ಶಿಫಾರಸಿನ ಅಧಿಕಾರ ಮರಳಿ ಸಿಕ್ಕಿದೆ. 

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಹೆಚ್ಚಿನ ಶಕ್ತಿ ನೀಡುವ ಸಂಬಂಧ ಸಂವಿಧಾನದ 123ನೇ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. ಈಗಾಗಲೇ ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ರಾಜ್ಯಸಭೆಯ ಅಂಗೀಕಾರ ಮಾತ್ರ ಬಾಕಿ ಇತ್ತು. ಆದರೆ ಇದನ್ನು ಈ ಹಿಂದೆಯೇ ಮೇಲ್ಮನೆಯಲ್ಲಿ ಮಂಡಿಸಲಾಗಿತ್ತಾದರೂ, ಇದನ್ನು ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಇತ್ತೀಚೆಗಷ್ಟೇ ಈ ಸಮಿತಿ ವರದಿ ನೀಡಿದ್ದರಿಂದ, ಸೋಮವಾರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿತ್ತು. 

ಈ ವೇಳೆ ಕಾಂಗ್ರೆಸ್‌ ನಾಯಕರು ಹಾಗೂ ಪರಿಶೀಲನಾ ಸಮಿತಿಯ ಸದಸ್ಯರಾದ ದಿಗ್ವಿಜಯ ಸಿಂಗ್‌, ಬಿ.ಕೆ. ಹರಿಪ್ರಸಾದ್‌ ಮತ್ತು ಹುಸೇನ್‌ ದಳವಾಯಿ ಅವರು ಅನುಚ್ಛೇದ 3ರಲ್ಲಿನ ನಾಲ್ಕು ಅಂಶಗಳಿಗೆ ತಿದ್ದುಪಡಿಗೆ ಸೂಚಿಸಿದರು. ಅಲ್ಲದೆ ಇದನ್ನು ಮತಕ್ಕೆ ಹಾಕುವಂತೆಯೂ ಸಭಾಪತಿಗೆ ಒತ್ತಾಯಿಸಿದರು. ಸಭಾಪತಿ ಅವರ ಅನುಮತಿ ಮೇರೆಗೆ ಇವುಗಳನ್ನು ಮತಕ್ಕೆ ಹಾಕಲಾಯಿತು. ಆದರೆ, ಇವು 74-52 ಮತಗಳ ಅಂತರದಲ್ಲಿ ಅನುಮೋದನೆ ಪಡೆದವು. ಇದೀಗ ರಾಜ್ಯಸಭೆಯಲ್ಲಿ ಈ ಮಸೂದೆಗೆ ಬದಲಾವಣೆ ಸೂಚಿಸಿರುವುದರಿಂದ ಮತ್ತೆ ಲೋಕಸಭೆಗೆ ಹೋಗಲಿದೆ. ಅಲ್ಲಿ ಮತ್ತೆ ಅನುಮೋದನೆ ದೊರೆಯಬೇಕಿದೆ. 

ಸೋಮವಾರ ಈ ಮಸೂದೆ ಕುರಿತಂತೆ ಚರ್ಚೆಯನ್ನು ಕೈಗೆತ್ತಿಕೊಂಡಾಗ ಸರ್ಕಾರದ ಪರ ಸದಸ್ಯರ ಕೊರತೆ ಇದ್ದುದು ಕಂಡು ಬಂದಿತು. ಅಲ್ಲದೆ 245 ಸದಸ್ಯ ಬಲದ ಮೇಲ್ಮನೆಯಲ್ಲಿ ಮೂರನೇ ಎರಡು ಭಾಗದಷ್ಟು ಬೆಂಬಲ ಬೇಕಿತ್ತು. ಜೆಡಿಯುವನ್ನೂ ಸೇರಿಸಿಕೊಂಡರೆ, ಒಟ್ಟು 89 ಮಂದಿಯ ಬೆಂಬಲವಿದೆ ಎಂದೇ ಭಾವಿಸಲಾಗಿತ್ತು. ಆದರೆ ಆಡಳಿತ ಪಕ್ಷದ ಕಡೆ ಸದಸ್ಯರ ಕೊರತೆ ಇದ್ದುದರಿಂದ ಕಾಂಗ್ರೆಸ್‌ ಸದಸ್ಯರು ಮಂಡಿಸಿದ್ದ ತಿದ್ದುಪಡಿಗಳಿಗೆ ಒಪ್ಪಿಗೆ ಸಿಕ್ಕಿತು. 

Advertisement

ಪ್ರತಿಪಕ್ಷಗಳ ತಿದ್ದುಪಡಿಯಲ್ಲಿ ಪ್ರಸ್ತಾವಿತ ಆಯೋಗದ ಸದಸ್ಯರ ಸಂಖ್ಯೆ 3 ರಿಂದ 5ಕ್ಕೆ ಏರಬೇಕು. ಇದರಲ್ಲಿ ಅಲ್ಪಸಂಖ್ಯಾತರೊಬ್ಬರು ಮತ್ತು ಮಹಿಳೆಯೊಬ್ಬರಿಗೆ ಮೀಸಲಾತಿ ನೀಡಬೇಕು ಎಂಬುದು ಸೇರಿದೆ. ಇನ್ನೊಂದು ತಿದ್ದುಪಡಿಯಲ್ಲಿ ರಾಜ್ಯಗಳ ಹಿತ ಕಾಯುವ ವಿಚಾರ ಸೇರಿದೆ. ಈ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಅರುಣ್‌ ಜೇಟಿÉ ಅವರ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೇ, ಇವುಗಳನ್ನು ನಾಳೆ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಈ ಮೂಲಕ ಮಸೂದೆಯೇ ಅರ್ಥ ಕಳೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತಪಡಿಸಿದರು. 

ಇದಕ್ಕೂ ಮುನ್ನ ತಾವರ್‌ಚಂದ್‌ ಗೆಹೊಟ್‌ ಅವರು, ಪ್ರತಿಪಕ್ಷಗಳ ತಿದ್ದುಪಡಿಗಳಿಗೆ ನಂತರದಲ್ಲಿ ಮಾನ್ಯತೆ ನೀಡಲಾಗುವುದು. ಈಗ ಇದಕ್ಕೆ ಒಪ್ಪಿಗೆ ನೀಡ ಎಂದರು. ಆದರೆ ದಿಗ್ವಿಜಯ್‌ ಸಿಂಗ್‌ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಕಡೆಗೆ ಈ ತಿದ್ದುಪಡಿಗಳ ಜತೆಗೆ 124-0 ಮತಗಳ ಅಂತರದಲ್ಲಿ 123ನೇ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸಿಕ್ಕಿತು. ಆದರೆ ಇದಕ್ಕೆ ಸಂಬಂಧಿಸಿದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ರದ್ದತಿ)-2017 ಅನ್ನು ತೆಗೆದುಕೊಳ್ಳಲೇ ಇಲ್ಲ.

338-ಬಿಗೆ ಏಕೆ ವಿರೋಧ?
ಈ ಕಲಂನಲ್ಲಿರುವ 338-ಬಿ(9), ರಾಜ್ಯಗಳ ಅಧಿಕಾರವನ್ನೇ ಕಿತ್ತುಕೊಳ್ಳುತ್ತದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಒಪ್ಪಿಗೆ ಕೇಳಬೇಕಾಗುತ್ತದೆ. ಅಲ್ಲದೆ ಇದು ನೀತಿ ನಿರೂಪಣೆಗಳ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಧಿಕಾವರನ್ನೇ ಕಿತ್ತುಕೊಳ್ಳುತ್ತದೆ.

ರಾಜ್ಯಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೇ ಹೆಚ್ಚಿನ ಅಧಿಕಾವಿರಬೇಕು. ಪ್ರತಿಯೊಂದಕ್ಕೂ ರಾಷ್ಟ್ರೀಯ ಆಯೋಗವನ್ನೇ ಕೇಳುವ ಸ್ಥಿತಿ ಉದ್ಭವಿಸಬಾರದು ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.

ಯಾವ ರಾಜ್ಯಗಳ ವಿರೋಧ?
ಕರ್ನಾಟಕ, ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳ. ಆದರೆ ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಿದ್ದರೆ, ಕೆಲವು ಶಿಫಾರಸುಗಳನ್ನು ನೀಡಿ ತಮಿಳುನಾಡು ಮಸೂದೆಗೆ ವಿರೋಧವಿಲ್ಲ ಎಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next