Advertisement

ಭಾವನೆಗಳ ಹಿಂದೆ ಬಣ್ಣದ ಪಯಣ

06:17 PM Aug 17, 2018 | |

ಕೆಲಸದ ಒತ್ತಡದಿಂದ ಬೇಸತ್ತ ಮೂವರು ಯುವಕರು ಎಲ್ಲಾದರೂ ದೂರದ ಊರಿಗೆ ಮೂರ್‍ನಾಲ್ಕು ದಿನ ಪ್ರವಾಸ ಹೋಗಿ ಬರಲು ನಿರ್ಧರಿಸುತ್ತಾರೆ. ಸರಿ, ಎಲ್ಲಿಗೆ ಹೋಗೋದು, ಒಬ್ಟಾತ ಬಾದಾಮಿ ಅನ್ನುತ್ತಾನೆ, ಮತ್ತೂಬ್ಬ ಹುಬ್ಬಳ್ಳಿ, ಇನ್ನೊಬ್ಬ ಮಂಗಳೂರಿಗೆ ಹೋಗೋಣವೆನ್ನುತ್ತಾನೆ. ಯಾರಿಗೂ ಬೇಜಾರಾಗಬಾರದೆಂದು ಮೂವರು ಒಂದು ನಿರ್ಧಾರಕ್ಕೆ ಬರುತ್ತಾರೆ. ಮೊದಲು ಬಾದಾಮಿಗೆ ಹೋಗಿ, ಅಲ್ಲಿಂದ ಹುಬ್ಬಳ್ಳಿ ನೋಡಿಕೊಂಡು ಕೊನೆಯದಾಗಿ ಮಂಗಳೂರಿಗೆ ಬರೋದೆಂದು ನಿರ್ಧರಿಸುತ್ತಾರೆ.

Advertisement

ಅದರಂತೆ ಅವರ ಪಯಣ ಆರಂಭವಾಗುತ್ತದೆ. ಎಲ್ಲಾ ಓಕೆ, ಮೂವರು ಸ್ನೇಹಿತರು ಮೂರು ವಿಭಿನ್ನ ಜಾಗಗಳನ್ನು ಹೇಳಲು ಕಾರಣವೇನೆಂಬ ಕುತೂಹಲ ಸಹಜವಾಗಿಯೇ ಬರಬಹುದು. ಆ ಪ್ರದೇಶಗಳಲ್ಲಿ ಬಗ್ಗೆ ಅವರಿಗೊಂದು ಭಾವನಾತ್ಮಕ ಸಂಬಂಧವಿದೆ, ಎದೆಯಲ್ಲಿ ಬಚ್ಚಿಟ್ಟುಕೊಂಡ ನೆನಪಿದೆ, ಕನಸಿದೆ. ಅದೇನು ಎಂದು ನೋಡುವ ಕುತೂಹಲವಿದ್ದರೆ ನೀವು “ಒಂಥರಾ ಬಣ್ಣಗಳು’ ಸಿನಿಮಾ ನೋಡಿ. ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟಾಗಿ ಜರ್ನಿ ಹೊರಡುವ ಕಥೆಯನ್ನು ಹೊಂದಿರುವ “ಒಂಥರಾ ಬಣ್ಣಗಳು’ ಸಿನಿಮಾದ ಇಡೀ ಕಥೆ ನಡೆಯೋದು ಕೂಡಾ ಜರ್ನಿಯಲ್ಲಿ.

ನಿರ್ದೇಶಕರು ಕಥೆಯ ಪ್ರಮುಖ ಅಂಶಗಳು ಮೂರು ಕಡೆಗಳಲ್ಲಿ ಹರಡಿರುವುದರಿಂದ ಇಡೀ ಸಿನಿಮಾ ಜರ್ನಿಯಲ್ಲಿ ಆರಂಭವಾಗಿ ಜರ್ನಿಯಲ್ಲೇ ಮುಗಿದುಹೋಗುತ್ತದೆ. ಯುವಕ-ಯುವತಿಯರು ಒಟ್ಟಾಗಿ ಲಾಂಗ್‌ ಡ್ರೈವ್‌ ಹೊರಡುವ ಬಹುತೇಕ ಸಿನಿಮಾಗಳ ಸಮಸ್ಯೆ ಎಂದರೆ ಅಲ್ಲಿ  ಕ್ಲೈಮ್ಯಾಕ್ಸ್‌ವರೆಗೆ ನಿಮಗೊಂದು ಗಟ್ಟಿಕಥೆ ಸಿಗೋದಿಲ್ಲ. “ಒಂಥರಾ ಬಣ್ಣಗಳು’ ಒಂದು ನೀಟಾದ ಪ್ರಯತ್ನವಾದರೂ ಇಲ್ಲಿ ನಿಮ್ಮನ್ನು ತುಂಬಾನೇ ಕಾಡುವ ಅಥವಾ ಭಾವತೀವ್ರತೆಗೆ ದೂಡುವಂತಹ ಸನ್ನಿವೇಶಗಳು ಸಿಗೋದಿಲ್ಲ.

ಗಂಭೀರ ಸ್ವಭಾವದ ಒಂದು ತಂಡ ಲಾಂಗ್‌ ಡ್ರೈವ್‌ ಹೋದಾಗ ಯಾವ ರೀತಿಯ ಮಾತುಗಳು ಬರಬಹುದು, ಅವರ ತಮಾಷೆ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟವೇನಲ್ಲ. ಇಲ್ಲಿ ಅದೇ ಮುಂದುವರಿದಿದೆ. ಈ ಸಿನಿಮಾದಲ್ಲೂ ಕಥೆ ಬಿಚ್ಚಿಡಲು ನಿರ್ದೇಶಕರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ತಣ್ಣಗೆ ಸಾಗುವ ಸಿನಿಮಾಕ್ಕೆ ಹೊಸ ಚಲನೆ ಸಿಗೋದು ಮೂವರು ಯುವಕರ ಫ್ಲ್ಯಾಶ್‌ಬ್ಯಾಕ್‌ ತೆರೆದುಕೊಳ್ಳುವ ಮೂಲಕ. ಈ ಮೂಲಕ ಸಿನಿಮಾ ಮಗ್ಗುಲು ಬದಲಿಸುತ್ತದೆ.

ಆದರೆ, ಆ ಫ್ಲ್ಯಾಶ್‌ಬ್ಯಾಕ್‌ಗಳು ಆರಂಭವಾದಷ್ಟೇ ಬೇಗ ಮುಗಿದು, ಪ್ರೇಕ್ಷಕ ಮತ್ತೇನೋ ಹೊಸ ಅಂಶಕ್ಕಾಗಿ ಎದುರು ನೋಡುತ್ತಾನೆ. ಸಿನಿಮಾದ ಎಲ್ಲಾ ವಿಷಯಗಳು ಕ್ಲೈಮ್ಯಾಕ್ಸ್‌ಗಿಂತ ಮುಂಚೆ ಬಿಚ್ಚಿಕೊಳ್ಳುತ್ತಾ ಸಿನಿಮಾ ಗಂಭೀರವಾಗುತ್ತದೆ. ಈ ಮೂಲಕ ಎಲ್ಲರ “ಬಣ್ಣ ಬಯಲು’ ಆಗುತ್ತದೆ. ಪ್ರೇಕ್ಷಕನ ಊಹೆಗೆ ನಿಲುಕದ ಕೆಲವು ಅನಿರೀಕ್ಷಿತ ಅಂಶಗಳು ಇಷ್ಟವಾಗುತ್ತವೆ. ಅದರಲ್ಲೂ ಪ್ರೀತಿ ವಿಚಾರದಲ್ಲಿ ಚಿತ್ರ ಬಿಚ್ಚಿಕೊಳ್ಳುವ ಅಂಶ ಚೆನ್ನಾಗಿದೆ ಮತ್ತು ಅದೇ ಸಿನಿಮಾದ ಹೈಲೈಟ್‌ ಎನ್ನಬಹುದು.

Advertisement

ಅದು ಬಿಟ್ಟರೆ ಇದೊಂಥರ ಹೆಚ್ಚು ಕಾಡದ ಹಾಗೂ ಪ್ರೇಕ್ಷಕರಿಗೆ ಕಿರಿಕಿರಿಯೂ ಕೊಡದ ಸಿನಿಮಾ. ನಿರ್ದೇಶಕರು ಕಥೆಯ ಟ್ರ್ಯಾಕ್‌ ಬಿಟ್ಟು ಹೋಗಿಲ್ಲ. ಅನಾವಶ್ಯಕ ಅಂಶಗಳನ್ನು ಸೇರಿಸಿಲ್ಲ. ಚಿತ್ರದಲ್ಲಿ ಸಾಧುಕೋಕಿಲ ಬರುತ್ತಾರೆ. ಆದರೆ, ಬಂದಷ್ಟೇ ವೇಗದಲ್ಲಿ ಮಾಯವಾಗಿ ಕಥೆ ಮತ್ತೆ ಟ್ರ್ಯಾಕ್‌ಗೆ ಬರುತ್ತದೆ. ಆದರೆ, ಕಥೆಯನ್ನು ಮತ್ತಷ್ಟು ಬೆಳೆಸಿದ್ದರೆ ಒಂದೊಳ್ಳೆಯ ಸಿನಿಮಾವಾಗುತ್ತಿತ್ತು. ಚಿತ್ರದಲ್ಲಿ ಕಿರಣ್‌, ಹಿತಾ ಚಂದ್ರಶೇಖರ್‌, ಸೋನುಗೌಡ, ಪ್ರತಾಪ್‌ನಾರಾಯಣ್‌, ಪ್ರವೀಣ್‌ ಜೈನ್‌ ಪ್ರಮುಖ ಪಾತ್ರ ಮಾಡಿದ್ದಾರೆ.

ಇವರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವಂತಿಲ್ಲ. ಏಕೆಂದರೆ ಎಲ್ಲರೂ ತಮ್ಮ ಪಾತ್ರವನ್ನು ನಿಭಾಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಲೋಹಿತಾಶ್ವ, ಶರತ್‌ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಸುಚೇಂದ್ರಪ್ರಸಾದ್‌ ಹಾಗೆ ಬಂದು ಹೀಗೆ ಹೋಗುತ್ತಾರೆ. ಮನೋಹರ್‌ ಜೋಶಿ ಛಾಯಾಗ್ರಹಣದಲ್ಲಿ ಕೆಲವು ಪರಿಸರಗಳು ಕಂಗೊಳಿಸಿದರೆ, ಬಿ.ಜೆ. ಭರತ್‌ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಒಂಥರಾ ಬಣ್ಣಗಳು
ನಿರ್ಮಾಣ: ಯೋಗೇಶ್‌ ಬಿ ದೊಡ್ಡಿ
ನಿರ್ದೇಶನ: ಸುನೀಲ್‌ ಭೀಮರಾವ್‌
ತಾರಾಗಣ: ಕಿರಣ್‌, ಹಿತಾ ಚಂದ್ರಶೇಖರ್‌, ಸೋನುಗೌಡ, ಪ್ರತಾಪ್‌ನಾರಾಯಣ್‌, ಪ್ರವೀಣ್‌ ಜೈನ್‌, ಲೋಹಿತಾಶ್ವ, ಶರತ್‌ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಸುಚೇಂದ್ರಪ್ರಸಾದ್‌ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next