“ಗಂಡ ಸರಿ ಇಲ್ಲ. ಹೊಟ್ಟೆ ಪಾಡು ನಡೆಯಲೇಬೇಕು. ಅದಕ್ಕಾಗಿ ಬಣ್ಣ ಹಚ್ಚಿಕೊಂಡೇ ಬದುಕಿನ ಬಂಡಿ ಸಾಗಿಸಬೇಕು…’ ಇದು ನಟಿ ಅನಿತಾಭಟ್ ಹೇಳಿಕೊಂಡ ಮಾತು! ಹಾಗಂತ, ಇದು ರಿಯಲ್ ಲೈಫ್ನ ಮಾತಲ್ಲ. ರೀಲ್ ಲೈಫ್ನ ಮಾತು. ಹೌದು, ಅನಿತಾಭಟ್ ಇದೇ ಮೊದಲ ಬಾರಿಗೆ ಗ್ಲಾಮರ್‌ನಿಂದ ಹೊರ ಬಂದಿದ್ದಾರೆ. ಅಷ್ಟೇ ಆಗಿದ್ದರೆ, ಇಷ್ಟೊಂದು ಹೇಳುವ ಅಗತ್ಯವಿರಲಿಲ್ಲ. ಅವರು ವಿತೌಟ್ ಮೇಕಪ್‌ನಲ್ಲೇ ಕ್ಯಾಮೆರಾ ಮುಂದೆ ನಿಂತು ನಟಿಸಿದ್ದಾರೆ.
ಆ ಚಿತ್ರದ ಹೆಸರು “ಡೇಸ್ ಆಫ್ ಬೋರಾಪುರ’. ಈ ಚಿತ್ರದಲ್ಲಿ ಅನಿತಾಭಟ್ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಡ್ರಾಮಾ ಆರ್ಟಿಸ್ಟ್. ಅದರಲ್ಲೂ ಇದೇ ಮೊದಲ ಸಲ, ಅಂಥದ್ದೊಂದು ಪಾತ್ರ ನಿರ್ವಹಿಸಿದ್ದಾರೆ. ಅನಿತಾಭಟ್ ಅಂದಾಕ್ಷಣ, ಗ್ಲಾಮರ್ ನೆನಪಾಗುತ್ತೆ. ಆದರೆ, ಅವರಿಗಿಲ್ಲಿ ನಿರ್ದೇಶಕರು ಪಕ್ಕಾ ಡಿ ಗ್ಲಾಮ್ ಪಾತ್ರ ಕೊಟ್ಟಿದ್ದಾರೆ. ಯಾವುದೇ ಮೇಕಪ್ ಇಲ್ಲದೆಯೇ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರಂತೆ.
ಹಾಗಾಗಿ, ಅನಿತಾಭಟ್ ಅವರ ಅನೇಕ ಚಿತ್ರಗಳ ಪೈಕಿ “ಡೇಸ್ ಆಫ್ ಬೋರಾಪುರ’ ವಿಭಿನ್ನವಾಗಿ ಕಾಣುವ ಚಿತ್ರವಂತೆ. ಇಲ್ಲಿ ಅನಿತಾಭಟ್ ಅಷ್ಟೇ ಅಲ್ಲ, ಬಹುತೇಕ ಪಾತ್ರಗಳೂ ಕೂಡ ಮೇಕಪ್ ಇಲ್ಲದೆಯೇ ನಟಿಸಿರುವುದು ವಿಶೇಷ. ಇದೊಂದು ತ್ರಿಕೋನ ಪ್ರೇಮಕಥೆವುಳ್ಳ ಚಿತ್ರ. ಅನಿತಾಭಟ್ ಇಲ್ಲಿ ಭಗ್ನಪ್ರೇಮಿಯೊಬ್ಬನಿಗೆ ಜೋಡಿಯಾಗಿದ್ದಾರಂತೆ. ಅಂದಹಾಗೆ, ಇಡೀ ಚಿತ್ರದಲ್ಲಿ ತಿರುವು ಕೊಡುವಂತಹ ಪಾತ್ರವೇ ಅವರದ್ದಂತೆ.
ಹೆಣ್ಣು, ಹೊನ್ನು, ಮಣ್ಣು ಈ ಮೂರು ಋಣ ಇರುವವರಿಗೆ ಮಾತ್ರ ಸಿಗುತ್ತೆ ಎಂಬ ಅಂಶ ಚಿತ್ರದ ಹೈಲೈಟ್ ಅಂತೆ. ಸಮಾಜ ಹೆಣ್ಣನ್ನು ಹೇಗೆ ನೋಡುತ್ತೆ. ಹೆಣ್ಣು ಮುನಿದರೆ, ಏನೆಲ್ಲಾ ಆಗಿಹೋಗುತ್ತೆ ಎಂಬಂತಹ ಸನ್ನಿವೇಶಗಳು ಚಿತ್ರದಲ್ಲಿ ಗಮನಸೆಳೆಯಲಿವೆ ಎಂಬುದು ಅನಿತಾಭಟ್ ಮಾತು. ಇದೇ ಮೊದಲ ಸಲ ಹಳ್ಳಿಸೊಗಡಿನ ಚಿತ್ರ ಮಾಡಿರುವ ಅನಿತಾಭಟ್‌ಗೆ, ಪಾತ್ರವೂ ಹೊಸದಾಗಿದೆಯಂತೆ.
ಮೊದಲು ಚಿತ್ರದ ಕಥೆ, ಪಾತ್ರ ಕೇಳಿದಾಗ, ಸಿನಿಮಾದೊಳಗೆ ಡ್ರಾಮಾ ಆರ್ಟಿಸ್ಟ್ ಅಂದಾಗ, ನಾಟಕ ಮಾಡೋದನ್ನೇ ತೋರಿಸಿದರೆ, ಜನರಿಗೆ ಬೋರ್ ಆಗೋದಿಲ್ಲವಾ ಎಂಬ ಪ್ರಶ್ನೆ ಎದುರಾಯಿತಂತೆ. ಆದರೆ, ಸಿನಿಮಾ ಚಿತ್ರೀಕರಣ ನಡೆದಾಗಲಷ್ಟೇ, ಆ ಪಾತ್ರದಲ್ಲಿ ಎಷ್ಟೊಂದು ಮಹತ್ವ ಇದೆ ಅಂತ ಗೊತ್ತಾಯ್ತು. ಮಂಡ್ಯ ಸುತ್ತ ಮುತ್ತ ಹೇಗೆ ನಾಟಕ ಮಾಡುತ್ತಾರೋ ಅದೇ ರೀತಿ ನಾಟಕದ ದೃಶ್ಯಗಳು ಮೂಡಿ ಬಂದಿವೆ.
ಡ್ರಾಮಾ ಆರ್ಟಿಸ್ಟ್ ಅಂದಾಕ್ಷಣ, ಅವರ ಬದುಕು, ಬವಣೆಯ ಚಿತ್ರಣ ಇಲ್ಲಿದೆ ಎನ್ನುತ್ತಾರೆ ಅನಿತಾಭಟ್. ಬಹುತೇಕ ಮಂಡ್ಯ ಸುತ್ತಮುತ್ತಲು ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಹೊಸಬರೇ ತುಂಬಿಕೊಂಡಿದ್ದು, ಹೊಸಬರ ಜೊತೆ ಕೆಲಸ ಮಾಡಿರುವ ಅನಿತಾಭಟ್‌ಗೆ ಭರವಸೆಯೂ ಇದೆಯಂತೆ.