Advertisement

ಚಿಣ್ಣರಿಗೆ ಬಣ್ಣದ ಮುದ

03:45 AM Apr 28, 2017 | Team Udayavani |

ಬಣ್ಣಗಳು ಕಿರಿಯರಿಂದ ಹಿರಿಯರ ತನಕ, ಅನಕ್ಷರಸ್ಥ ರಿಂದ ಅಕ್ಷರಸ್ಥರವರೆಗೆ ಎಲ್ಲರನ್ನೂ ಆಕರ್ಷಿಸುವ ಸಾಮರ್ಥ್ಯ ಹೊಂದಿವೆ. ಇತಿಹಾಸದ ಪುಟಗಳು ಕಲೆಯ ಮೂಲಕ ವಿಶ್ವಶಾಂತಿ, ಏಕತೆ, ಸ್ವಾತಂತ್ರ್ಯ, ಸಂಸ್ಕೃತಿ ಇತ್ಯಾದಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದದ್ದನ್ನು ತಿಳಿಸುತ್ತವೆ. ಮಾನವನ ಜೀವನದಲ್ಲಿ ಕಲೆಗೆ ಮಹತ್ವದ ಸ್ಥಾನವಿದೆ. ಅದು ಭಾವನೆ ಯನ್ನು ವ್ಯಕ್ತಪಡಿಸುವ ಮಾಧ್ಯಮವೂ ಆಗಬಹುದು, ವ್ಯಕ್ತಿತ್ವ ಬೆಳವಣಿಗೆಗೂ ಸಹಕರಿಸಬಹುದು. ಜೀವನದಲ್ಲಿ ಊರುಗೋಲಾಗಿ ಮುನ್ನಡೆಸಬಹುದು.

Advertisement

ಈ ಎಲ್ಲ ಉತ್ತಮಾಂಶಗಳನ್ನು ಪರಿಗಣಿಸಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಾದ ಉಡುಪಿಯ “ಆಶಾನಿಲಯ’ದಲ್ಲಿ, ಆರ್ಟಿಸ್ಟ್ಸ್  ಫೋರಂ ಉಡುಪಿ ಮತ್ತು ರೋಟರಿ ಮಣಿಪಾಲ ಹಿಲ್ಸ್‌ ವಿಶ್ವ ದೃಶ್ಯಕಲಾ ದಿನಾಚರಣೆಯನ್ನು ಆಚರಿಸಿತು. ಫೋರಂನ ಕಲಾವಿದರು ಡೂಡಲ್ಸ್‌, ಮುಖವರ್ಣಿಕೆ, ಟಾಟೂ, ಟೆಸ್ನಿಲ್‌, ಒರಿಗಾಮಿ, ಕ್ಲೇ ಮೊಡೆಲ್‌ ಇತ್ಯಾದಿ ಕಲಾ ಕಾರ್ಯಾಗಾರ ನಡೆಸಿದರು. ರಜಾಕಾಲವಾದರೂ ಮಕ್ಕಳೊಂದಿಗೆ ರಕ್ಷಕರು, ಶಿಕ್ಷಕರು ಭಾಗವಹಿಸಿದ್ದರು. ಕಲಾವಿದರಾದ ರಮೇಶ್‌ ರಾವ್‌, ಸಂಪತ್‌, ಲಿಯಕತ್‌ ಅಲಿ, ಜೀವನ್‌, ಶ್ರೀನಾಥ್‌, ಪ್ರಕಾಶ್‌, ಜನಾರ್ದನ, ಪವನ್‌, ವಿಘ್ನೇಶ್‌, ಮುಸ್ತಾಫ್, ರಾಧಾಕೃಷ್ಣ, ವಸಂತ್‌ ವಿವಿಧ ಕಲಾಪ್ರಕಾರಗಳನ್ನು ನಡೆಸಿಕೊಟ್ಟರು. ಈ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸು ವಲ್ಲಿ, ಅಂಗಾಂಗಗಳ ಸುಲಲಿತ ಚಲನೆಗೆ, ಕಣ್ಣು ಮತ್ತು ಕೈಗಳ ಸಂಯೋಜನೆಗೆ ಈ ಚಟುವಟಿಕೆ ಗಳು ಸಹಕಾರಿ. ಆಸಕ್ತಿ ಯನ್ನು ಹೆಚ್ಚಿಸಿ, ಮನಸ್ಸಿಗೆ ಮುದ ನೀಡುವಲ್ಲಿ ಪರಿಣಾಮಕಾರಿಯಾಗಿವೆ. ರಕ್ಷಕರು, ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದುದರಿಂದ ಈ ಚಟುವಟಿಕೆಗಳು ಮುಂದುವರಿದು ಮಕ್ಕಳಲ್ಲಿ ಸೃಜನಶೀಲತೆ, ಕೌಶಲಗಳು, ಸೌಂದರ್ಯಪ್ರಜ್ಞೆ ಬೆಳವಣಿಗೆ ಸಾಧ್ಯ.

ಸಕು ಪಾಂಗಾಳ
 

Advertisement

Udayavani is now on Telegram. Click here to join our channel and stay updated with the latest news.

Next