“ಕಾಲೇಜ್ ಕುಮಾರ್’ ಚಿತ್ರವು ಇದೇ ತಿಂಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಸ್ಥಳ ಮಾತ್ರ ವಿಶೇಷ. ಸಾಮಾನ್ಯವಾಗಿ ಟೀಸರ್‌ಗಳು ಹೋಟೆಲ್‌ಗಳಲ್ಲೋ ಅಥವಾ ಯೂಟ್ಯೂಬ್‌ನಲ್ಲೋ ಬಿಡುಗಡೆಯಾಗುವುದು ವಾಡಿಕೆ. ಆದರೆ, “ಕಾಲೇಜ್ ಕುಮಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದಲ್ಲಿ.
ಅಂದು ಅವರ ಮನೆಗೆ ಜಯ ಕರ್ನಾಟಕದ ನೂರಾರು ಸದಸ್ಯರು ಬಂದಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಬೇಕೆಂಬುದು ಮುತ್ತಪ್ಪ ರೈ ಅವರ ಆಸೆಯಾಗಿತ್ತಂತೆ. ಅದೇ ಕಾರಣಕ್ಕೆ ಅಲ್ಲೇ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಅಂದು ಬಿಡದಿಗೆ ಹೋಗುವ ವೇಳೆ ಜೋರು ಮಳೆ. ಮಳೆ ನಿಲ್ಲುವಷ್ಟರಲ್ಲೇಢ ಸಮಾರಂಭ ಶುರುವಾಗಿ ಹೋಗಿತ್ತು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ಪದ್ಮನಾಭ್, ನಿರ್ದೇಶಕ ಸಂತು, ನಾಯಕ ವಿಕ್ಕಿ ಮುಂತಾದವರು ನಾಲ್ಕಾಲ್ಕು ಮಾತುಗಳನ್ನಾಡಿದರು. ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಮುನ್ನ ಮುತ್ತಪ್ಪ ರೈ ಚಿತ್ರ ನೋಡಬೇಕೆಂದು ಎಲ್ಲರೂ ಕರೆ ನೀಡಿದರು. “ಇದು ನಮ್ಮ ಎಂ.ಆರ್. ಪಿಕ್ಚರ್ ಸಂಸ್ಥೆಯ ಎರಡನೆಯ ಚಿತ್ರ. ನಾನು ಮೂರು ಹೈಸ್ಕೂಲ್‌ಗಳನ್ನು, ಐದು ಕಾಲೇಜ್‌ಗಳನ್ನು ಬದಲಿಸಿದವನು.
ಏಕೆಂದರೆ, ನನಗೆ ಜನ ಬೇಕು. ಹಾಗಾಗಿ ಪ್ರತಿ ವರ್ಷ ಒಂದೊಂದು ಕಾಲೇಜಿಗೆ ಹೋಗಿದ್ದೆ. ಈ ಕಾರ್ಯಕ್ರಮವನ್ನು ಬೇರೆ ಕಡೆ ಆಯೋಜಿಸಬೇಕು ಎಂದು ನಮ್ಮ ಪದ್ದು ಹೇಳುತ್ತಿದ್ದರು. ನಾನು ನಮ್ಮ ಜಯ ಕರ್ನಾಟಕದ ಸದಸ್ಯರ ಜೊತೆಗೆ ಆಚರಿಸಬೇಕು ಎಂದೆ. ಇಡೀ ರಾಜ್ಯದಲ್ಲಿ ನಮ್ಮ ಸಂಘಟನೆಯ 25-30 ಲಕ್ಷ ಮಂದಿ ಇದ್ದಾರೆ. ಅವರೆಲ್ಲಾ ಕುಟುಂಬ ಸಮೇತ ಈ ಚಿತ್ರವನ್ನು ನೋಡಬೇಕು. ನಾವೆಲ್ಲಾ ಈ ಚಿತ್ರತಂಡಕ್ಕೆ ಸಹಕಾರ ಕೊಡಬೇಕು’ ಎಂದು ಹೇಳಿದರು.
ಚಿತ್ರದ ಬಗ್ಗೆ ಮಾತನಾಡಿದ ಅವರು. ಎಲ್ಲರೂ ತಮ್ಮ ಮಕ್ಕಳು ಅದಾಗಬೇಕು, ಇದಾಗಬೇಕು ಎಂದು ತುಂಬಾ ಆಸೆ ಪಡುತ್ತಾರೆ. ಹಾಗೆ ನೂರಾರು ಕನಸು ಕಂಡಾಗ, ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥೆ. ಚಿತ್ರದಲ್ಲಿ ಬಹಳ ಒಳ್ಳೆಯ ಸಂದೇಶವಿದೆ. “ಅಲೆಮಾರಿ’ ಸಂತು ಮತ್ತು ಹಠಮಾರಿ ಪದ್ದು ಒಟ್ಟಿಗೆ ಸೇರಿ ಈ ಚಿತ್ರ ಮಾಡಿದ್ದಾರೆ. ಬಹಳ ಚೆನ್ನಾಗಿರುತ್ತದೆ ಎಂಬ ನಂಬಿಕೆ ನನ್ನದು’ ಎಂದು ಮಾತು ಮುಗಿಸಿದರು. ಟ್ರೇಲರ್ ಬಿಡುಗಡೆಯಾಯಿತು. ಹಾಡುಗಳನ್ನು ತೋರಿಸಲಾಯಿತು. ಸಮಾರಂಭ ಮುಗಿಯಿತು.