Advertisement

ರಾಜ್ಯದ ಬಿಕ್ಕಟ್ಟಿಗೆ ಕೊಚ್ಚಿಹೋದ ಕಲಾಪ

07:24 AM Jul 11, 2019 | Lakshmi GovindaRaj |

ನವದೆಹಲಿ: ಕರ್ನಾಟಕದ ರಾಜಕೀಯ ಹೈಡ್ರಾಮಾದಿಂದಾಗಿ ರಾಜ್ಯಸಭೆ ಕಲಾಪ ಸತತ ಎರಡನೇ ದಿನವೂ ಕೊಚ್ಚಿಹೋಗಿದೆ. ರಾಜ್ಯದ ಬಿಕ್ಕಟ್ಟಿಗೆ ಸಂಬಂಧಿಸಿ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ತೀವ್ರ ಗದ್ದಲ ಮಾಡಿದ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಿಕೆ ಕಂಡ ಕಲಾಪ, ಕೊನೆಗೂ ಪರಿಸ್ಥಿತಿ ತಿಳಿಗೊಳ್ಳದ ಕಾರಣ ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ.

Advertisement

ಮಂಗಳವಾರವೂ ಪ್ರತಿಪಕ್ಷ ಸದಸ್ಯರ ಕೋಲಾಹಲಕ್ಕೆ ರಾಜ್ಯಸಭೆ ಕಲಾಪ ಬಲಿಯಾಗಿತ್ತು.
ರಾಜ್ಯಸಭೆಯಲ್ಲಿ ಬುಧವಾರ ಕಲಾಪ ಆರಂಭವಾದೊಡನೆ ಕಾಂಗ್ರೆಸ್‌ ನಾಯಕ ಆನಂದ್‌ ಸಿಂಗ್‌ ಅವರು ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಧ್ವನಿಯೆತ್ತಿದರು. ಆದರೆ, ಇದಕ್ಕೆ ಒಪ್ಪದ ಉಪಸಭಾಪತಿ ಹರಿವಂಶ್‌, ಬಜೆಟ್‌ ಹೊರತುಪಡಿಸಿ ಬೇರಾವ ವಿಚಾರದ ಕುರಿತೂ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಸದಸ್ಯರು, ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಲಾರಂಭಿಸಿದರು.

ಅವಧಿ ವಿಸ್ತರಿಸಬೇಕಾಗುತ್ತದೆ: ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯಸಭೆ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದರೆ, ಜು.26ರ ನಂತರವೂ ಅಧಿವೇಶನವನ್ನು ವಿಸ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕರ್ನಾಟಕ ರಾಜಕೀಯದ ವಿಚಾರವಾಗಲೀ, ಬೇರೆ ಯಾವ ವಿಚಾರದ ಬಗ್ಗೆಯಾಗಲೀ ಅವರು(ಕಾಂಗ್ರೆಸ್‌) ಬೇಕಾದ್ದನ್ನು ಹೇಳಲಿ, ಆದರೆ, ಕಲಾಪ ಸುಗಮವಾಗಿ ನಡೆಯಲು ಬಿಡಲಿ. ಹಲವು ಮಸೂದೆಗಳು ಅಂಗೀಕಾರವಾಗಲು ಬಾಕಿಯಿದೆ ಎಂದರು.

ಇಡೀ ದೇಶ ನಿಮ್ಮನ್ನು ನೋಡುತ್ತಿದೆ: ಇದಕ್ಕೂ ಮುನ್ನ, ಪ್ರಶ್ನೋತ್ತರ ಅವಧಿಯು ಅತ್ಯಂತ ಮಹತ್ವದ್ದು. ಗದ್ದಲ ಎಬ್ಬಿಸುವುದು ತರವಲ್ಲ. ಇದಕ್ಕಾಗಿ ಎಷ್ಟೊಂದು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಇಡೀ ದೇಶವೇ ನಮ್ಮನ್ನು ನೋಡುತ್ತಿದೆ ಎಂದು ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರೂ ಕಾಂಗ್ರೆಸ್‌ ನಾಯಕರು ಕಿವಿಗೊಡಲಿಲ್ಲ. ಗದ್ದಲ ಮುಂದುವರಿದ ಕಾರಣ 3 ಬಾರಿ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು. ನಂತರ ಸದನ ಸಮಾವೇಶಗೊಂಡಾಗಲೂ ಕಾಂಗ್ರೆಸ್‌ ಸಂಸದರ ಕೋಲಾಹಲ ತಣ್ಣಗಾಗದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಫ‌ಡ್ನವೀಸ್‌ ವಿರುದ್ಧ ಎನ್‌ಸಿಪಿ ಕಿಡಿ: ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ನೆರವಾಗುತ್ತಿದ್ದಾರೆ ಎಂದು ಎನ್‌ಸಿಪಿ ಆರೋಪಿಸಿದೆ. ಕರ್ನಾಟಕ ಸರ್ಕಾರ ಪತನಕ್ಕೆ ಏನು ಬೇಕೋ, ಅದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಸರ್ಕಾರದ ಪತನದಲ್ಲಿ ಸಿಎಂ ಫ‌ಡ್ನವೀಸ್‌ ಕೂಡ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೆ, ಡಿ.ಕೆ.ಶಿವಕುಮಾರ್‌ ಅವರನ್ನು ಮುಂಬೈನ ಹೋಟೆಲ್‌ಗೆ ಪ್ರವೇಶ ಕಲ್ಪಿಸದೇ ವಶಕ್ಕೆ ಪಡೆಯುವ ಮೂಲಕ ಫ‌ಡ್ನವೀಸ್‌ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಎನ್‌ಸಿಪಿ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next