Advertisement

ಕೇಂದ್ರಕ್ಕೆ ವಿದೇಶಿ ಕೋಲ್‌ನ ಏಟು

06:00 AM Dec 01, 2017 | |

ಬೆಂಗಳೂರು: ಕೇಂದ್ರ ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಕಲ್ಲಿದ್ದಲು ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ವಿದೇಶದಿಂದ ನೇರವಾಗಿ ಕಲ್ಲಿದ್ದಲು ಖರೀದಿ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶದಿಂದ 10 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಖರೀದಿಸಲು ಹಸಿರು ನಿಶಾನೆ ತೋರಿರುವುದರಿಂದ ಟೆಂಡರ್‌ ಕರೆಯುವ ಪ್ರಕ್ರಿಯೆಯೂ ಆರಂಭವಾಗಿದೆ.

Advertisement

ಈಗಾಗಲೇ ರಾಜ್ಯ ಸರ್ಕಾರ ಅಗತ್ಯವಿರುವಷ್ಟು ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರದ ಬಳಿ ಹಲವಾರು ಮನವಿ ಮಾಡಿದೆ. ಆದರೂ ಬಾರಂಜಾ ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಲ್ಲಿದ್ದಲು ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ಹೀಗಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲಿನ ಅವಲಂಬನೆ ಬಿಟ್ಟು ವಿದೇಶದಿಂದ ಕಲ್ಲಿದ್ದಲು ತರಿಸಿಕೊಳ್ಳಲು ಮುಂದಾಗಿದೆ. ಜತೆಗೆ ಯಾವುದೇ ಕಾರಣಕ್ಕೂ ಕಲ್ಲಿದ್ದಿಲಿನ ಕೊರತೆಯಿಂದಾಗಿ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳು ಉತ್ಪಾದನೆ ಸ್ಥಗಿತ ಮಾಡಬಾರದು ಎಂಬ ಉದ್ದೇಶವೂ ಈ ನಿರ್ಧಾರದ ಹಿಂದೆ ಅಡಗಿದೆ. ಈ ಮಧ್ಯೆ, ವಿದೇಶದಿಂದ ನೇರವಾಗಿ ಕಲ್ಲಿದ್ದಲು ಖರೀದಿ ಮಾಡಲು ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವೂ ಇಲ್ಲ ಎಂದು ಸ್ವತಃ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರೇ ಹೇಳಿದ್ದಾರೆ.

ಅಲ್ಲದೆ, ವಿದ್ಯುತ್‌ ವಿಚಾರ ಈಗಾಗಲೇ ರಾಜ್ಯದಲ್ಲಿ ರಾಜಕೀಯ ವಸ್ತುವಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆ ಇಳಿಮುಖವಾದಲ್ಲಿ ಬಿಜೆಪಿ ಇದನ್ನೇ ಲಾಭವನ್ನಾಗಿ ಮಾಡಿಕೊಳ್ಳಬಹುದು ಎಂಬುದು ರಾಜ್ಯದ ಕಾಂಗ್ರೆಸ್‌ ನಾಯಕರ ಚಿಂತನೆ. ಹೀಗಾಗಿ ಬಿಜೆಪಿಯ ಪ್ಲಾನ್‌ ಅನ್ನು ವಿಫ‌ಲ ಮಾಡುವ ಸಂಬಂಧ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರ ಮನವೊಲಿಕೆ ಮಾಡಿ ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಸುತ್ತಿನ ಮಾತು ಪೂರ್ಣ
ಈ ಸಂಬಂಧ ಇಂಧನ ಇಲಾಖೆ ಅಧಿಕಾರಿಗಳ ಜತೆಗೆ ಸಿಎಂ ಸಿದ್ದರಾಮಯ್ಯ ಅವರು ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಸದ್ಯ ರಾಜ್ಯದಲ್ಲಿ ಅಂದಾಜು 9000 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಇದೆ. ಆದರೆ, ಉತ್ಪಾದನೆಯಾಗುತ್ತಿರುವುದು 6000 ಮೆಗಾ ವ್ಯಾಟ್‌ ವಿದ್ಯುತ್‌ ಮಾತ್ರ. ಅಲ್ಲದೆ ಕೇಂದ್ರದ ಗ್ರಿಡ್‌ನಿಂದ ಸಿಗುತ್ತಿರುವುದು 2000 ಮೆಗಾ ವ್ಯಾಟ್‌. ಹೀಗಾಗಿ ರಾಜ್ಯ ಸುಮಾರು ಒಂದು ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಕೊರತೆ ಎದುರಿಸುತ್ತಿದೆ. 900 ಮೆಗಾ ವ್ಯಾಟ್‌ ವಿದ್ಯುತ್ತನ್ನು ಖಾಸಗಿಯವರಿಂದ ಖರೀದಿ ಮಾಡಲಾಗುತ್ತಿದೆ. ಗ್ಲೋಬಲ್‌ ಎನರ್ಜಿ ಮತ್ತು ಸೆಂಬ್‌ ಕಾರ್ಪ್‌ ಪವರ್‌ ಲಿಮಿಟೆಡ್‌ನಿಂದ  500 ಮೆ.ವ್ಯಾ. ಜಿಂದಾಲ್‌ನಿಂದ 200 ಮೆ. ವ್ಯಾ. ಮಧ್ಯಪ್ರದೇಶದ ಜೆಪಿವಿಎಲ್‌ನಿಂದ 100 ಮೆ.ವ್ಯಾ. ರಾಜಸ್ಥಾನದ ಶ್ರೀ ಸಿಮೆಂಟ್‌ ಲಿ.ನಿಂದ 100 ಮೆ.ವ್ಯಾ. ವಿದ್ಯುತ್ತನ್ನು ಒಂದು ವರ್ಷದ ಅವಧಿಗೆ 4ರೂಪಾಯಿ 8 ಪೈಸೆಗೆ ಖರೀದಿ ಮಾಡಲಾಗುತ್ತಿದೆ.

Advertisement

ಖರೀದಿ ಹಿಂದೆ ಚುನಾವಣಾ ವಿಚಾರ
ರಾಯಚೂರು, ಬಳ್ಳಾರಿ ಹಾಗೂ ಉಡುಪಿ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಫೆಬ್ರವರಿಗೆ ವರೆಗೂ ಮಾತ್ರ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಲಭ್ಯವಿದೆ.  ಈಗಾಗಲೇ ರಾಯಚೂರು ಹಾಗೂ ಉಡುಪಿ ಶಾಖೋತ್ಪನ್ನ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಕೆಲ ಘಟಕಗಳು ಸ್ಥಗಿತಗೊಂಡಿವೆ. ಬೇಸಿಗೆ ಹತ್ತಿರವಾದಂತೆ ಜಲ ವಿದ್ಯುತ್‌ ಉತ್ಪಾದನೆಯೂ ಕಡಿಮೆಯಾಗುವ ಸಾಧ್ಯತೆ ಇದ್ದು, ಚುನಾವಣೆ ವೇಳೆಗೆ ರಾಜ್ಯದಲ್ಲಿ ವಿದ್ಯುತ್ತಿಗೆ ದೊಡ್ಡ ಪ್ರಮಾಣದಲ್ಲಿ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಚುನಾವಣೆ ವೇಳೆ ಪಕ್ಷಕ್ಕೆ ಕರೆಂಟ್‌ ಶಾಕ್‌ ಕೊಟ್ಟರೆ ಎಂಬ ಕಾರಣದಿಂದಾಗಿ ಖಾಸಗಿಯವರ ಜತೆಗೆ ವಿದೇಶದಿಂದಲೂ 10 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಖರೀದಿದೆ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದಾರೆ ಎನ್ನಲಾಗಿದೆ.

ಅಲ್ಲದೆ ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣ ಕೋರ್ಟ್‌ನಲ್ಲಿದ್ದರೂ ಸದ್ಯ ಚುನಾವಣೆ ನಡೆಯುತ್ತಿರುವ ಗುಜರಾತ್‌ಗೆ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಸಿದೆ ಎನ್ನಲಾಗಿದ್ದು, ರಾಜ್ಯಕ್ಕೆ ಮಾತ್ರ ಕೊಡುತ್ತಿಲ್ಲ ಎಬುದು ರಾಜ್ಯ ಸರ್ಕಾರದ ಆರೋಪವಾಗಿದೆ.

ಕಲ್ಲಿದ್ದಲು ಆಮದು ಹೇಗೆ ?
ವಿದೇಶದಿಂದ ರಾಜ್ಯ ಸರ್ಕಾರ ನೇರವಾಗಿ ಕಲ್ಲಿದ್ದಲು ಖರೀದಿಗೆ ಕೇಂದ್ರದ ನಿಯಮ ಅಡ್ಡಿಯಾದರೆ, ಅದಾನಿ ಮಾಲಿಕತ್ವದ ಯುಪಿಸಿಲ್‌ ಮೂಲಕ ಕಲ್ಲಿದ್ದಲು ಆಮದು ಮಾಡಿಕೊಂಡು, ಯುಪಿಸಿಎಲ್‌ನಿಂದಲೇ ವಿದ್ಯುತ್‌ ಖರೀದಿ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಸದ್ಯಕ್ಕೆ ನಮಗೆ ಕಲ್ಲಿದ್ದಲು ಕೊರತೆಯಾಗಿದೆ. ಅಗತ್ಯ ಕಲ್ಲಿದ್ದಲು ನೀಡುವಂತೆ ಡಿಸೆಂಬರ್‌ 7 ಕ್ಕೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮತ್ತೂಮ್ಮೆ ಮನವಿ ಮಾಡಲು ತೀರ್ಮಾನಿಸಿದ್ದೇನೆ. ಅಲ್ಲದೇ ನಮ್ಮ ಶಾಖೋತ್ಪನ್ನ ಘಟಕಗಳನ್ನು ನಡೆಸಲು 10 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಟೆಂಡರ್‌ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಿದೇಶದಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ.
– ಡಿ.ಕೆ.ಶಿವಕುಮಾರ್‌ ಇಂಧನ ಸಚಿವ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next