ಆಳಂದ: ಹಾಲಿ, ಮಾಜಿ ಶಾಸಕರ ಸ್ವಾರ್ಥ ಸಾಧನೆಯಿಂದಾಗಿ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಬಡವರ, ನಿರ್ಗತಿಕರ, ರೈತರ ಸಮಸ್ಯೆಗಳನ್ನು ಗಾಳಿಗೆ ತೂರಲಾಗಿದೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಆರೋಪಿಸಿದರು.
ಪಟ್ಟಣದ ತಾಪಂ ಕಚೇರಿ ಎದುರು ಕೊಡಲಂಗರಗಾ ಗ್ರಾಪಂ ವ್ಯಾಪ್ತಿಯ ಎಲೆನಾವದಗಿ ಗ್ರಾಮಸ್ಥರು ಗ್ರಾಪಂ ಅವ್ಯವಹಾರ ಖಂಡಿಸಿ ಸೋಮವಾರ ಪ್ರಾರಂಭಿಸಿದ ಅಹೋರಾತ್ರಿ ಸರಣಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ, ಸತ್ಯಾಗ್ರಹಕ್ಕೆ ಬೆಂಬಲಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಭಾವದಿಂದ ತಾಲೂಕಿನ ಅಭಿವೃದ್ಧಿಗೆ ಮುಂದಾಗಬೇಕು. ಅಧಿಕಾರಿಗಳ ಅಭಿವೃದ್ಧಿ ಕಾರ್ಯಕ್ಕಾಗಿ ಅವರ ಮೇಲೆ ಹಿಡಿತವಿಡುವುದನ್ನು ಬಿಟ್ಟು ಸ್ವಕಾರ್ಯಗಳಿಗೆ ಹಿಡಿತ ಸಾಧಿಸುವಲ್ಲಿ ಮಗ್ನವಾಗಿದ್ದಾರೆ. ಎಲ್ಲೆಡೆ ಗ್ರಾಪಂಗಳಲ್ಲಿ ಇವರಿಬ್ಬರ ಹಗ್ಗ ಜಗ್ಗಾಟದಿಂದಾಗಿ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಹಣ ಲೂಟಿಯಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಎಲೆನಾವದಿ ಗ್ರಾಮದ ನ್ಯಾಯಯುತ ಬೇಡಿಕೆಗಳಿಗೆ ಮೇಲಾಧಿಕಾರಿಗಳು ಸ್ಪಂದಿಸದಿದ್ದರೆ ಪಕ್ಷದಿಂದ ಹೋರಾಟಕ್ಕೆ ಇಳಿಯಬೇಕಾಗುತ್ತದೆ.
ಅವ್ಯವಹಾರವಾಗಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು. ನಂತರ ತಾಪಂ ಇಒ ಡಾ| ಸಂಜಯ ರಡ್ಡಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಲಿಖೀತ ಭರವಸೆ ಕೊಟ್ಟ ನಂತರ ಉಪವಾಸ ಸತ್ಯಾಗ್ರಹ ಕೈಬಿಡಲಾಯಿತು.
ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮಲ್ಲಾ ಮುಲ್ಲಾ, ಪ್ರಕಾಶ ಮೂಲಭಾರತಿ, ಜಯ ಕರ್ನಾಟಕ ಸಂಘಟನೆ ತಾಲೂಕು ಬಸವರಾಜ ಎಸ್. ಕೊರಳ್ಳಿ, ನಮ್ಮ ಕರುನಾಡ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಬಾರ, ಗಜಾನಂದ ವಡಗಾಂವ, ಗುರು ಬಂಗರ ಮುಂತಾದವರು ಸತ್ಯಾಗ್ರಹಕ್ಕೆ ಬೆಂಬಲಿಸಿದರು.