Advertisement

ಟರ್ಫ್ ಕ್ಲಬ್‌-ಸರ್ಕಾರದನಡುವೆ ಮುಸುಕಿನ ಗುದ್ದಾಟ

10:36 AM Oct 13, 2017 | Team Udayavani |

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್‌ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟದಿಂದ
ಸುಮಾರು ಐದು ಸಾವಿರ ನೌಕರ, ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟರ್ಫ್ ಕ್ಲಬ್‌ ಅನುಮತಿ ನವೀಕರಣ ಮಾಡದ ಕಾರಣ 45 ದಿನಗಳಿಂದ ರೇಸ್‌ ಸೇರಿದಂತೆ ಟರ್ಫ್ ಕ್ಲಬ್‌ನ ಎಲ್ಲ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಚಳಿ ಗಾಲದ ರೇಸ್‌ ಅನಿಶ್ಚಿತತೆಯಲ್ಲಿದೆ. ಟರ್ಫ್ ಕ್ಲಬ್‌ನ ಸದಸ್ಯತ್ವ ಹೆಚ್ಚಿಸುವ ಸಂಬಂಧ ಸರ್ಕಾರ ಮತ್ತು ಟರ್ಫ್ ಕ್ಲಬ್‌ನ ನಡುವೆ ಗುದ್ದಾಟ ನಡೆಯುತ್ತಿದೆ. ಪ್ರಸ್ತುತ ಕ್ಲಬ್‌ನಲ್ಲಿ 350 ಸದಸ್ಯರಿದ್ದು, ಇನ್ನೂ 150 ಸದಸ್ಯರನ್ನು ಹೊಸದಾಗಿ ಸೇರಿಸಿ ಆ ಪೈಕಿ 75 ಸದಸ್ಯತ್ವಗಳನ್ನು ತಾನು ಸೂಚಿದವರಿಗೇ ನೀಡಬೇಕು ಎಂಬುದು ಸರ್ಕಾರದ ಬೇಡಿಕೆ. ಆದರೆ, ಇದಕ್ಕೆ ಬಿಟಿಸಿ (ಬೆಂಗಳೂರು ಟರ್ಫ್ ಕ್ಲಬ್‌ ಕಮಿಟಿ) ಒಪ್ಪುತ್ತಿಲ್ಲ ಎಂದು ಹೇಳಲಾಗಿದ್ದು, ಇದು ತಿಕ್ಕಾಟಕ್ಕೆ ಕಾರಣವಾಗಿದೆ.

Advertisement

ರಾಜ್ಯ ಸರ್ಕಾರವನ್ನೇ ಎದುರು ಹಾಕಿ ಕೊಂಡಿರುವ ಟರ್ಫ್ ಕ್ಲಬ್‌ ಕಮಿಟಿ, ಸರ್ಕಾರ ಹೇಳಿದವರಿಗೆ ಸದಸ್ಯತ್ವ ಕೊಟ್ಟರೆ
ಕ್ಲಬ್‌ ನಿಯಂತ್ರಣ ಎಲ್ಲಿ ಸರ್ಕಾರದ ತೆಕ್ಕೆಗೆ ಹೋಗುತ್ತೋ ಎಂಬ ಆತಂಕದಲ್ಲಿದೆ. ಆದರೆ, ಕ್ಲಬ್‌ನ ಸದಸ್ಯರಲ್ಲಿ ಕೆಲವರು
ಸರ್ಕಾರದ ಪರವಾಗಿದ್ದಾರೆ. ಸರ್ಕಾರದ ನಿಯಂತ್ರಣದಲ್ಲಿ ರುವ ಕ್ಲಬ್‌ನಲ್ಲಿ ಸದಸ್ಯತ್ವ ಕೊಟ್ಟರೆ ಏನೂ ನಷ್ಟವಿಲ್ಲ ಎಂಬ ವಾದ ಮಂಡಿಸುತ್ತಾರೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಟರ್ಫ್ ಕ್ಲಬ್‌ಗ ಸರ್ಕಾರವೇ ಜಾಗ ಕೊಟ್ಟಿರುವುದರಿಂದ ಹಾಗೂ ಪರವಾನಗಿ
ನವೀಕರಣ ಸರ್ಕಾರ ಮಾಡುವ ಅಧಿಕಾರ ಹೊಂದಿರುವುದರಿಂದ ಸದಸ್ಯತ್ವ ವಿಚಾರ ದಲ್ಲಿ ಸರ್ಕಾರದ ಶಿಫಾರಸಿಗೆ ಬೆಲೆ ಇರಬೇಕು. ಸರ್ಕಾರ ಯಾವುದೇ ರೀತಿಯಲ್ಲೂ ಕ್ಲಬ್‌ನ ಮೇಲೆ ನಿಯಂತ್ರಣ ಹೊಂದಿರಬಾರದು ಎಂದರೆ ಹೇಗೆ ಎಂಬುದು ಮುಖ್ಯಮಂತ್ರಿ ಯವರ ವಾದ ಎನ್ನಲಾಗಿದೆ. 1978 ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಇದೇ ರೀತಿ ನವೀಕರನ ಸಂದರ್ಭದಲ್ಲಿ
ಸರ್ಕಾರದ ಪರವಾಗಿ ಸದಸ್ಯತ್ವ ಬೇಡಿಕೆ ಇಟ್ಟು 250 ಇದ್ದ ಸದಸ್ಯತ್ವ ಸಂಖ್ಯೆ 350 ಕ್ಕೆ ಹೆಚ್ಚಿಸಿದ್ದರು. ಆಗ 100 ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗಿತ್ತು. ಆ ನಂತರ 40 ವರ್ಷಗಳಲ್ಲಿ ಒಂದೇ ಒಂದು ಹೊಸ ಸದಸ್ಯತ್ವ ಆಗಿಲ್ಲ.

2014ರಲ್ಲಿ ಪ್ರಸ್ತಾವಕ್ಕೆ ಹಿನ್ನಡೆ: ಕ್ಲಬ್‌ನಲ್ಲಿ ಹೊಸದಾಗಿ ಸದಸ್ಯತ್ವ ಆಗಬೇಕಾದರೆ ಮಹಾಸಭೆ ಕರೆಯಬೇಕು. ಅಲ್ಲಿ ಚರ್ಚಿಸಿ ಮತದಾನ ನಡೆಸಿ ಒಪ್ಪಿಗೆ ಪಡೆಯಬೇಕು. 2014ರಲ್ಲಿ ಸದಸ್ಯತ್ವ ಹೆಚ್ಚಳ ಸಂಬಂಧ ಮಹಾಸಭೆ ನಡೆಸಿದ್ದರೂ, ಒಪ್ಪಿಗೆ ಸಿಗದ ಕಾರಣ ಪ್ರಸ್ತಾಪ ಕೈ ಬಿಡಲಾಗಿತ್ತು. ಇತ್ತೀಚೆಗೆ ಕ್ವೀನ್‌ ಲತೀಫಾ ಉದ್ಧೀಪನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.  ತನಿಖೆ ಮುಗಿಯುವವರೆಗೆ ಪರವಾನಗಿ ನವೀಕರಣ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಎರಡು ಬಾರಿ ನವೀಕರಣಕ್ಕೆ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದರೂ ನಿರಾಕರಿಸಲಾಗಿದೆ. 

ಜಿಎಸ್‌ಟಿ ವಿನಾಯಿತಿ ಆಶ್ವಾಸನೆ: ಕ್ಲಬ್‌ನ ಸದಸ್ಯತ್ವ ಹೆಚ್ಚಿಸಿದರೆ ಜಿಎಸ್‌ಟಿ ಹೊರೆಯಿಂದಲೂ ಸ್ವಲ್ಪ ಮಟ್ಟಿಗೆ ವಿನಾಯಿತಿ ಕೊಡಿಸುವ ಆಶ್ವಾಸನೆ ಸಹ ಮುಖ್ಯಮಂತ್ರಿಯವರಿಂದ ದೊರೆತಿತ್ತು. ಆದರೆ, ಬಿಟಿಸಿ ಸಮಿತಿ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರೇಸ್‌ ಬಗ್ಗೆ ಆಸಕ್ತಿ
ಇರುವವರಿಗೆ ಸದಸ್ಯತ್ವ ಕೊಡುವುದರಲ್ಲಿ ತಪ್ಪೇನಿಲ್ಲ.ಬಿಟಿಸಿ ಕಮಿಟಿಯು ಬೇರೆ ಯಾರೂ ಕ್ಲಬ್‌ಗ ಹೊಸದಾಗಿ ಬರಬಾರದು ಎಂಬ ಮನಸ್ಥಿತಿ ಹೊಂದಿದೆ ಎಂದು ಅಲ್ಲಿನ ಸಿಬ್ಬಂದಿ ವಾದಿಸುತ್ತಾರೆ. ಕ್ವೀನ್‌ ಲತೀಫಾ ರೇಸ್‌ ಕುದುರೆ ಉದ್ಧೀಪನಾ ಮದ್ದು ಸೇವಿಸಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದ್ದು, ಅದನ್ನೇ ನೆಪಮಾಡಿಕೊಂಡು ರಾಜ್ಯ ಸರ್ಕಾರ ಕ್ಲಬ್‌ನ ಪರವಾನಗಿ ನವೀಕರಣ ಮಾಡುತ್ತಿಲ್ಲ ಎಂದು ಹೇಳಲಾಗಿದೆ.

Advertisement

ಮುಚ್ಚುವ ಭೀತಿ: ಈ ಹಿಂದೆ ನಗರದ ಮಧ್ಯ ಭಾಗದಲ್ಲಿರುವ ಟರ್ಫ್ ಕ್ಲಬ್‌ ಮುಚ್ಚಿ ಹೊರವಲಯಕ್ಕೆ ಸ್ಥಳಾಂತರ ಮಾಡುವ ಪ್ರಸ್ತಾಪವೂ ಇತ್ತು. ಟರ್ಫ್ ಕ್ಲಬ್‌ ಮುಚ್ಚಿ ಅಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಹೆಸರಘಟ್ಟ ಬಳಿ ಸ್ಥಳ ಸಹ
ಗುರುತಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next