Advertisement

ದಶಕದ ಬಳಿಕ ರೆಡ್ಡಿ ಸಹೋದರರ ಒಗ್ಗಟ್ಟು

11:23 PM Apr 10, 2022 | Team Udayavani |

ಬಳ್ಳಾರಿ: ರಾಜ್ಯ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ರೆಡ್ಡಿ ಸಹೋದರರು ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ದಶಕದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪುನಃ ಒಗ್ಗಟ್ಟು ಪ್ರದರ್ಶಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಈ ಹಿಂದೆ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನರೆಡ್ಡಿ ಬಂಧನದಿಂದ ಅಧಿಕಾರ ಕಳೆದುಕೊಂಡ ಬಳಿಕ ರೆಡ್ಡಿ ಸಹೋದರರ ನಡುವೆ ಬಿರುಕು ಮೂಡಿತ್ತು. ಕುಟುಂಬ ಕಾರ್ಯಕ್ರಮಗಳಲ್ಲೂ ಸೇರಿ ಬಹುತೇಕ ಎಲ್ಲಿಯೂ ಸಹೋದರರು ಜತೆಯಾಗಿ ಕಾಣಿಸಿಕೊಂಡಿರಲೇ ಇಲ್ಲ. ಈಗ ಹರಪನಹಳ್ಳಿಯಲ್ಲಿ ಶಾಸಕ ಕರುಣಾಕರ ರೆಡ್ಡಿ 60ನೇ ಜನ್ಮದಿನ ನಿಮಿತ್ತ ರವಿವಾರ ನಡೆದ ಸೀತಾರಾಮ ಕಲ್ಯಾಣ ಮಹೋತ್ಸವ ಈ ಸಹೋದರರು ಒಂದೇ ವೇದಿಕೆಗೆ ಬರುವಂತೆ ಮಾಡಿದೆ. ಜತೆಗೆ ಮುಂಬರುವ ದಿನಗಳಲ್ಲಿ ರಾಜಕೀಯದಲ್ಲೂ ಮಹತ್ವದ ಪಾತ್ರ ವಹಿಸುವ ಸುಳಿವು ನೀಡಿದ್ದಾರೆ.

ಕಮಲ ಅರಳಿಸಿದ್ದರು
ದಶಕಗಳ ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಸಚಿವ ಶ್ರೀರಾಮುಲು, ಶಾಸಕರಾದ ಜಿ. ಕರುಣಾಕರ ರೆಡ್ಡಿ, ಜಿ. ಸೋಮಶೇಖರ ರೆಡ್ಡಿ ಹಾಗೂ ಜಿ. ಜನಾರ್ದನ ರೆಡ್ಡಿ ತಮ್ಮ ಒಗ್ಗಟ್ಟಿನ ಬಲದಿಂದ ಕಮಲ ಅರಳಿಸಿದ್ದರು. 2008ರಲ್ಲಿ ಹರಪನಹಳ್ಳಿ ಸೇರಿ ಬಳ್ಳಾರಿ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದರು. ರಾಜ್ಯ ರಾಜಕೀಯದ ಮೇಲೂ ಪ್ರಾಬಲ್ಯ ಮೆರೆದಿದ್ದ ರೆಡ್ಡಿ ಸಹೋದರರು ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದರು.

ಸಂಪುಟ ದರ್ಜೆ ಸಚಿವರಾಗಿದ್ದರು
ಅಂದಿನ ಸರಕಾರದಲ್ಲಿ ಕರುಣಾಕರ ರೆಡ್ಡಿ ಕಂದಾಯ, ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಹಾಗೂ ಬಿ. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರೆ, ಶಾಸಕ ಜಿ. ಸೋಮಶೇಖರ ರೆಡ್ಡಿ ಸಂಪುಟ ದರ್ಜೆಯ ಕೆಎಂಎಫ್‌ ಅಧ್ಯಕ್ಷರಾಗಿದ್ದರು.

ಜನಾರ್ದನ ರೆಡ್ಡಿ 2016ರಲ್ಲಿ ಅದ್ಧೂರಿಯಾಗಿ ಮಗಳ ಮದುವೆ ಮಾಡಿದರೂ ತಮ್ಮ ಹಿರಿಯಣ್ಣ ಕರುಣಾಕರ ರೆಡ್ಡಿ ಅವರನ್ನು ನೇರವಾಗಿ ಆಹ್ವಾನಿಸಿರಲಿಲ್ಲ. ಅವರೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗೆ ಒಗ್ಗಟ್ಟಿನಲ್ಲಿ ಮೂಡಿದ ಬಿರುಕಿನಿಂದ ರಾಜಕೀಯವಾಗಿ ಕುಗ್ಗಿ ಅ ಧಿಕಾರ ಕಳೆದುಕೊಂಡ ರೆಡ್ಡಿ ಸಹೋದರರು, ಪುನಃ ರಾಜಕೀಯ ಪ್ರಾಬಲ್ಯ ಮೆರೆಯಲು ವೇದಿಕೆ ರೂಪಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

ಆನಂದ್‌ ಸಿಂಗ್‌ ಮಾತ್ರ ಗೈರು
ಇನ್ನೊಂದೆಡೆ ರೆಡ್ಡಿ ಸಹೋದರರ ಮೂಲಕವೇ ರಾಜಕೀಯ ಪ್ರವೇಶ ಮಾಡಿ, ರೆಡ್ಡಿ ಬಳಗದಲ್ಲೇ ಗುರುತಿಸಿಕೊಂಡಿದ್ದ ಸಚಿವ ಆನಂದ್‌ಸಿಂಗ್‌, ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕರುಣಾಕರ ರೆಡ್ಡಿ ಜನ್ಮದಿನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಕುತೂಹಲ ಮೂಡಿಸಿದೆ. ವೈಯಕ್ತಿಕ ಕಾರಣಗಳಿಂದ ಸಿಂಗ್‌ ಬಂದಿಲ್ಲ ಎನ್ನಲಾಗುತ್ತಿದ್ದರೂ, ವಿಜಯನಗರ ಜಿಲ್ಲೆ ರಚನೆ ಬಳಿಕ ರಾಜಕೀಯವಾಗಿ ಅವಿಭಜಿತ ಬಳ್ಳಾರಿ ಬಿಜೆಪಿಯಲ್ಲಿ ರೆಡ್ಡಿ-ಸಿಂಗ್‌ ಬಣಗಳು ಹುಟ್ಟಿಕೊಂಡಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next