Advertisement

ಅಧಿಕಾರಿಗಳ ಸಹಕಾರ ಉತ್ತಮವಾಗಿತ್ತು: ಬೊಮ್ಮಾಯಿ

12:23 AM May 17, 2023 | Team Udayavani |

ಬೆಂಗಳೂರು: ನನ್ನ ಆಡಳಿತ ಅವಧಿಯಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಕಾರ ನೀಡಿರುವುದಕ್ಕೆ ಧನ್ಯವಾದಗಳು ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರಕಾರದ ಅಧಿಕಾರಿಗಳಿಗೆ ಚಹಾ ಕೂಟ ಏರ್ಪಡಿಸಿ ಅನೌಪಚಾರಿಕವಾಗಿ ಮಾತನಾಡಿದ ಅವರು, ನಾವು ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಆಡಳಿತದಲ್ಲಿ ಕಾರ್ಯಾಂಗ, ಶಾಸಕಾಂಗ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಅದರಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಅಧಿಕಾರಕ್ಕೆ ಬಂದಾಗ ಕೋವಿಡ್‌, ಪ್ರವಾಹ ಸಂದರ್ಭ ಎದುರಾಯಿತು. ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಮ್ಮ ಆಡಳಿತದಲ್ಲಿ ಯಾವುದೇ ಹಿಂಸಾತ್ಮಕ ಚಟುವಟಿಕೆಗಳು ನಡೆಯಲಿಲ್ಲ. ಚುನಾವಣೆ ಸಂದರ್ಭದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದಿಲ್ಲ. ಗೃಹ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾವು ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮೀಸಲಾತಿ ಹೆಚ್ಚಳ, ಸರಕಾರಿ ನೌಕರರ ಸವಾಲು, ಹೊಸ ನೀತಿಗಳನ್ನು ಜಾರಿಗೆ ತಂದಿದ್ದೇವೆ. ಉದ್ಯೊಗ ನೀತಿ, ಕೈಗಾರಿಕಾ ನೀತಿ ಸೇರಿದಂತೆ ಎಲ್ಲ ಹೊಸ ಯೋಜನೆಗಳನ್ನು ತರಲು ಅಧಿಕಾರಿಗಳ ಪಾತ್ರ ಮಹತ್ವದ್ದು. ನಿಮ್ಮ ಸಹಕಾರ ಅತ್ಯಂತ ಮುಖ್ಯವಾಗಿತ್ತು ಎಂದರು.
ನಾವು ಐದು ವರ್ಷಕ್ಕೆ ಬರುವವರು. ನೀವು ಸುದೀರ್ಘ‌ ಅಧಿಕಾರದಲ್ಲಿ ಇರುವವರು. ರಾಜ್ಯದ ಏಳಿಗೆಗೆ ಎಲ್ಲರೂ ಶ್ರಮಿಸೋಣ. ಕೆಲಸ ವೇಗವಾಗಿ ಆಗಲಿ ಅಂತ ನಾನು ಗಟ್ಟಿ ಧ್ವನಿಯಲ್ಲಿ ಹೇಳಿರಬಹುದು. ಆದರೆ ಯಾವುದೇ ವೈಯಕ್ತಿಕ ಅಭಿಪ್ರಾಯ ಇರಲಿಲ್ಲ. ಕರ್ನಾಟಕ ಹಲವಾರು ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಎಸ್‌ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಬಂಡವಾಳ ಸೆಳೆಯುವಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಅಧಿಕಾರಿಗಳ ಪಾತ್ರ ಮುಖ್ಯವಾದದ್ದು. ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.

ಸುಧಾಕರ್‌, ಸೋಮಣ್ಣ ಭೇಟಿಯಾದ ಬೊಮ್ಮಾಯಿ
ಬೆಂಗಳೂರು: ಚುನಾವಣೆಯ ಸೋಲಿನ ಕುರಿತಂತೆ ಪರಾಮರ್ಶೆ ನಡೆಸುತ್ತೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಡಾ| ಕೆ. ಸುಧಾಕರ್‌ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ನಮ್ಮ ಜತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಹೀಗಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಸೋಮಣ್ಣ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಬಾರಿ ಸೋಲು-ಗೆಲುವು ಕಂಡಿದ್ದಾರೆ. ಹಿನ್ನಡೆಯಾದಾಗಲೆಲ್ಲ ಪುಟಿದೆದ್ದಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಉನ್ನತ ಸ್ಥಾನಮಾನಗಳು ಲಭಿಸಲಿವೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದು ಅವರ ಪಕ್ಷದ ವಿಚಾರ. ಸಿಎಂ ಯಾರಾಗುತ್ತಾರೆ ಎನ್ನುವುದನ್ನು ಕಾದು ನೋಡೊಣ ಎಂದರು.

ಡಿಜಿಪಿ ಪ್ರವೀಣ್‌ ಸೂದ್‌ ಸಿಬಿಐ ನಿರ್ದೇಶಕರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರವೀಣ್‌ ಸೂದ್‌ ಅವರನ್ನು ನಿರ್ದೇಶಕರನ್ನಾಗಿ ಮಾಡಿರುವುದು ಕೇಂದ್ರ ಸರಕಾರ. ಐಪಿಎಸ್‌ ಅಧಿಕಾರಿಗಳಿಗೆ ಅಖೀಲ ಭಾರತೀಯ ಸರ್ವಿಸ್‌ ರೂಲ್‌ ಇರುವುದರಿಂದ ಈ ನೇಮಕ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next