Advertisement
ಅಲ್ಲದೆ, ಎರಡನೇ ಹಂತದ ಯೋಜನೆಯನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸುಂತೆ ಸೂಚಿಸಿದರು. ಸಂಪಿಗೆರಸ್ತೆಯಿಂದ ಯಲಚೇನಹಳ್ಳಿ ಮಾರ್ಗ ಇನ್ನೇನು ಸಂಚಾರಕ್ಕೆ ಮುಕ್ತವಾಗಲಿದೆ. ಈ ಮಾರ್ಗದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ -ಆರ್.ವಿ. ರಸ್ತೆ ನಡುವೆ ಸಿಎಂ, ಸಚಿವರು, ಅಧಿಕಾರಿಗಳು ಪ್ರಯಾಣ ಮಾಡಿದರು. ಈ ರೈಲನ್ನು ಪೈಲಟ್ ರವಿ ಮತ್ತು ತಂಡ ಚಲಾಯಿಸಿತು.
Related Articles
Advertisement
ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮಾತನಾಡಿ, “ಮೆಟ್ರೋ ಪ್ರಯಾಣ ತುಂಬಾ ಚೆನ್ನಾಗಿದೆ ಎಂದು ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಎರಡನೇ ಹಂತವನ್ನೂ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕರು, ಕಾಮಗಾರಿ ಪ್ರಗತಿ ತ್ವರಿತ ಗತಿಯಲ್ಲಿ ಸಾಗಿರುವುದಾಗಿ ತಿಳಿಸಿದರುಮ,’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸಚಿವರಾದ ಕೆ.ಜೆ. ಜಾರ್ಜ್, ಟಿ.ಬಿ. ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮುಂಬೈ ಮೆಟ್ರೋ ನೋಡ್ಕೊಂಡು ಬನ್ನಿ; ಸಿಎಂ: ಮುಂಬೈನಲ್ಲಿರುವ ಮೆಟ್ರೋ ರೈಲು ನಿಲ್ದಾಣಗಳನ್ನು ನೋಡಿಕೊಂಡು ಬನ್ನಿ. ಅನಂತರ ಅಲ್ಲಿರುವ ಮಾದರಿಯಲ್ಲೇ ಇಲ್ಲಿನ ಎತ್ತರಿಸಿದ ಮೆಟ್ರೋ ನಿಲ್ದಾಣಗಳನ್ನೂ ಹವಾನಿಯಂತ್ರಿತ ಮಾಡಿ… ಮೆಟ್ರೋ ಉತ್ತರ-ದಕ್ಷಿಣ ಕಾರಿಡಾರ್ ಪರಿಶೀಲನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಅವರಿಗೆ ನೀಡಿದ ಸೂಚನೆ ಇದು.
ಮೆಟ್ರೋ ನಿಲ್ದಾಣಗಳ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ, ಸುರಂಗದಲ್ಲಿರುವ ನಿಲ್ದಾಣಗಳು ಮಾತ್ರ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವುದನ್ನು ಅರಿತರು. ಮುಂಬೈನಲ್ಲಿ ಎತ್ತರಿಸಿದ ಮಾರ್ಗದಲ್ಲಿರುವ ನಿಲ್ದಾಣಗಳೂ ಎಸಿ ವ್ಯವಸ್ಥೆ ಹೊಂದಿವೆ. ಅದನ್ನು ನೋಡಿಕೊಂಡು ಬನ್ನಿ. ಅದೇ ರೀತಿ, ಇಲ್ಲಿನ ನಿಲ್ದಾಣಗಳಲ್ಲೂ ಎಸಿ ಕಲ್ಪಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಅಸಮಾಧಾನದ ಬಗ್ಗೆ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರದೀಪ್‌ಸಿಂಗ್ ಖರೋಲಾ, “ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ನಾವು ಮಾಡಿಕೊಡುತ್ತೇವೆ’ ಎಂದಷ್ಟೇ ಹೇಳಿದರು.
ಅಂತಿಮವಾಗದ ವೇಳಾಪಟ್ಟಿ; ಗೊಂದಲದಲ್ಲಿ ಬಿಎಂಆರ್‌ಸಿ?: ಸದ್ಯ ಸಂಚಾರ ಆರಂಭಿಸಬೇಕಿರುವ ನೂತನ ಮಾರ್ಗದ ಮೆಟ್ರೋ ಸೇವೆಯನ್ನು ಬೆಳಿಗ್ಗೆ ಎಷ್ಟು ಗಂಟೆಯಿಂದ ಆರಂಭಿಸಬೇಕು ಎಂಬುದೇ ಇನ್ನೂ ಅಂತಿಮಗೊಂಡಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಗೊಂದಲಕ್ಕೆ ಸಿಲುಕಿದೆ.
ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಪ್ರಸ್ತುತ ನಾಗಸಂದ್ರದಿಂದ ಸಂಪಿಗೆರಸ್ತೆ ಮಂತ್ರಿಸ್ಕ್ವೇರ್ ನಿಲ್ದಾಣದ ನಡುವೆ ಬೆಳಗಿನಜಾವ 5.15ರಿಂದ ರಾತ್ರಿ 11ರವರೆಗೆ ಮೆಟ್ರೋ ಸೇವೆ ಇದೆ. ಆದರೆ, ಪೂರ್ವ-ಪಶ್ಚಿಮ ಕಾರಿಡಾರ್‌ನ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಸೇವೆ ಲಭ್ಯವಿದೆ. ಈಗ ಮೊದಲ ಹಂತ ಪೂರ್ಣಗೊಂಡಿದ್ದರಿಂದ ಏಕಕಾಲದಲ್ಲಿ ಸೇವೆಯನ್ನು ಬೆಳಿಗ್ಗೆ 5.15ರಿಂದ ಶುರು ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲ ಉಂಟಾಗಿದೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಗಮದ ಅಧಿಕಾರಿಗಳು, “ಇನ್ನೂ ಈ ಬಗ್ಗೆ ನಿರ್ಧಾರ ಆಗಿಲ್ಲ. ಮುಖ್ಯಮಂತ್ರಿಯೊಂದಿಗೂ ಈ ಕುರಿತು ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಿರ್ಧಾರ ಆಗಲಿದೆ’ ಎಂದರು. ಪೀಣ್ಯ ಕೈಗಾರಿಕಾ ಸಂಘದ ಮನವಿ ಮೇರೆಗೆ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಅನುಕೂಲಕ್ಕಾಗಿ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸುಮಾರು ದಿನಗಳಿಂದ ಬೆಳಗಿನಜಾವ 5ರಿಂದಲೇ ಮೆಟ್ರೋ ಸೇವೆ ಕಲ್ಪಿಸಲಾಗಿದೆ.
ಆದರೆ, ಇದುವರೆಗೆ ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಓಡಾಡುತ್ತಿಲ್ಲ. ಹೀಗಿರುವಾಗ, ಇಡೀ ಮೊದಲ ಹಂತದಲ್ಲಿ ಬೆಳಗಿನಜಾವ 5ರಿಂದಲೇ ಸೇವೆ ಆರಂಭಿಸುವುದು ಎಷ್ಟು ಸೂಕ್ತ’ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ಕೇಳಿಬಂದಿದೆ. ಆದರೆ, ರಾತ್ರಿ ವಿಸ್ತರಣೆ ಮಾಡಲು ಯಾವುದೇ ಅಪಸ್ವರ ಇಲ್ಲ. ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಪ್ರಯಾಣಿಕರ ದಟ್ಟಣೆ ಇರುತ್ತದೆ. ಈ ಮಧ್ಯೆ ನೈಟ್‌ಲೆçಫ್ ನಿಧಾನವಾಗಿ ಆರಂಭವಾಗತೊಡಗಿದೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ರಾತ್ರಿ ಸೇವೆ ವಿಸ್ತರಣೆಗೆ ತಕರಾರಿಲ್ಲ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರದೀಪ್‌ಸಿಂಗ್ ಖರೋಲಾ, “ಸೋಮವಾರದಿಂದ ಬೆಳಿಗ್ಗೆ 5.30ರಿಂದ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಬೆಳಿಗ್ಗೆ 5.30ರಿಂದಲೇ ಮೆಟ್ರೋ ಸೇವೆ ಆರಂಭವಾಗಲಿದೆ’ ಎಂದು ಸ್ಪಷ್ಟಪಡಿಸಿದರು.
ಮೆಜೆಸ್ಟಿಕ್ ಮೆಟ್ರೋ ಬಳಿ ಪಾರ್ಕಿಂಗ್ ಕಿರಿಕಿರಿಬೆಂಗಳೂರು: ಒಟ್ಟಾರೆ 42.3 ಕಿ.ಮೀ. ಉದ್ದದ “ನಮ್ಮ ಮೆಟ್ರೋ’ ಜಾಲದ ಕೇಂದ್ರಬಿಂದು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆಯೇ ಇಲ್ಲ. ಇದು ವಾಹನ ಸವಾರರಿಗೆ ಕಿರಿಕಿರಿಯಾಗಿ ಪರಿಣಮಿಸಲಿದೆ. ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಸಂಗೊಳ್ಳಿ ರಾಯಣ್ಣ ಸಿಟಿ ರೈಲು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳು ಬರುತ್ತವೆ. ಇದೆಲ್ಲದಕ್ಕೂ ಏಕೈಕ ವಾಹನ ನಿಲುಗಡೆ ಇರುವುದು ಸಿಟಿ ರೈಲು ನಿಲ್ದಾಣದಲ್ಲಿ ಮಾತ್ರ. ಆದರೆ, ಅದು ಸದಾ ಭರ್ತಿಯಾಗಿರುತ್ತದೆ. ನಿತ್ಯ ಲಕ್ಷಾಂತರ ಜನ ಮೆಜೆಸ್ಟಿಕ್‌ಗೆ ಬರುತ್ತಾರೆ. ಸ್ನೇಹಿತರು, ಸಂಬಂಧಿಕರನ್ನು ಕಳುಹಿಸಲು, ಕರೆದೊಯ್ಯಲು ಸಾಕಷ್ಟು ಜನ ಬಂದು ಹೋಗುತ್ತಾರೆ. ಅಷ್ಟಕ್ಕೂ ಈ ಹಿಂದೆ ಕೆಎಸ್‌ಆರ್‌ಟಿಸಿ ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇತ್ತು. ಈಗ ಅದನ್ನು ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಪರಿಣಾಮ ರೈಲು ನಿಲ್ದಾಣದಲ್ಲಿದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ದಟ್ಟಣೆ ಹೆಚ್ಚಿದೆ. ಈ ಮಧ್ಯೆ ಮೆಟ್ರೋ ಕೂಡ ಆರಂಭವಾಗುವುದರಿಂದ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಲಿದೆ. ಹಾಗಾಗಿ, ಈ ಮಾರ್ಗದಲ್ಲಿ ಮತ್ತೂಂದು ವಾಹನ ನಿಲುಗಡೆ ವ್ಯವಸ್ಥೆ ಅಗತ್ಯವಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. 40 ಮೆಟ್ರೋ ನಿಲ್ದಾಣಗಳ ಪೈಕಿ 15 ಕಡೆ ಈಗಾಗಲೇ ವಾಹನ ನಿಲುಗಡೆ ವ್ಯವಸ್ಥೆ ಇದೆ. ಇನ್ನೂ ಏಳು ಕಡೆ ಹೊಸದಾಗಿ ಮಾಡಲಾಗುತ್ತಿದೆ. ಆದರೆ ಕೇಂದ್ರ ನಿಲ್ದಾಣವಾಗಿರುವ ಮೆಜೆಸ್ಟಿಕ್‌ನಲ್ಲೇ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಅತಿ ದೊಡ್ಡ ಇಂಟರ್‌ಚೇಂಜ್ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಪ್ರಾಪರ್ಟಿ ಡೆವಲಪ್‌ಮೆಂಟ್ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮಾಲ್‌ಗಳು ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿ ಬರಲಿವೆ. ಹೀಗಾಗಿ ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿತ್ತು ಎಂಬುದು ತಜ್ಞರ ಅಭಿಪ್ರಾಯ. ಆದರೆ, ಮೆಜೆಸ್ಟಿಕ್ ಆಸುಪಾಸು ಯಾವುದೇ ವಸತಿ ಪ್ರದೇಶ ಇಲ್ಲ. ಹೊರಗಡೆಯಿಂದ ಬಂದಿಳಿಯುವ ಪ್ರಯಾಣಿಕರಿಗೆ ವಾಹನ ನಿಲುಗಡೆ ಅವಶ್ಯಕತೆಯೂ ಬರುವುದಿಲ್ಲ. ಇಲ್ಲಿ ಬಂದಿಳಿಯುವವರು ಮೆಟ್ರೋ ರೈಲಿನಲ್ಲಿ ನೇರವಾಗಿ ಮನೆಗೆ ತೆರಳುತ್ತಾರೆ. ಅದೇ ರೀತಿ, ಮುಂದಿನ ದಿನಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾದಾಗಲೂ ಮೆಟ್ರೋ ರೈಲಿನಲ್ಲೇ ಜನ ಇಲ್ಲಿಗೆ ಬರಬೇಕು ಎಂಬುದು ಇದರ ಹಿಂದಿನ ಉದ್ದೇಶ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮಜಾಯಿಷಿ. ರಾಜಾಜಿನಗರದಿಂದ ಮೆಟ್ರೋ ಸೇವೆ ಇಲ್ಲ
ಬೆಂಗಳೂರು: ಸಂಪಿಗೆರಸ್ತೆಯ ಮಂತ್ರಿ ಸ್ಕ್ವೇರ್‌ನಿಂದ ಯಲಚೇನಹಳ್ಳಿ ನಡುವೆ “ಪರೀಕ್ಷಾರ್ಥ ಸಂಚಾರ’ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರದಂದು ರಾಜಾಜಿನಗರದಿಂದ ಸಂಪಿಗೆರಸ್ತೆವರೆಗೆ ಮೆಟ್ರೋ ಸೇವೆ ಇರುವುದಿಲ್ಲ. 17ರಂದು ಸಂಪಿಗೆರಸ್ತೆ-ಯಲಚೇನಹಳ್ಳಿ ನಡುವಿನ ಮಾರ್ಗದಲ್ಲಿ ಮೆಟ್ರೋ ಸೇವೆ ಉದ್ಘಾಟನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ. ಹಾಗಾಗಿ, ರಾಜಾಜಿನಗರ-ಸಂಪಿಗೆರಸ್ತೆ ನಡುವೆ ಮೆಟ್ರೋ ಸೇವೆ ಅಲಭ್ಯವಾಗಲಿದೆ. ಆದರೆ, ನಾಗಸಂದ್ರದಿಂದ ರಾಜಾಜಿನಗರ ನಡುವೆ ಎಂದಿನಂತೆ ಮೆಟ್ರೋ ಸಂಚಾರ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.