ಹುಬ್ಬಳ್ಳಿ: ಮಹಾನಗರದ ಸ್ವತ್ಛತೆ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಿರ್ವಹಿಸುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಆದರ್ಶನಗರದ ಕನ್ನಡ ಭವನದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ರಸ್ತೆ ಗುಂಡಿ ಮುಚ್ಚುವತ್ತ ಪಾಲಿಕೆ ಹೆಚ್ಚು ಗಮನ ಕೊಡಬೇಕು. ಟೆಂಡರ್ ಸೇರಿದಂತೆ ಯಾವುದರ ಬಗ್ಗೆಯೂ ಯೋಚಿಸದೆ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಅ. 3 ರಂದು ನಡೆಯುವ ಪ್ರಗತಿ ಪರಿಶೀಲನಾ ಸಭೆ ವೇಳೆಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಜನಪ್ರತಿನಿಧಿಗಳು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ರಸ್ತೆ ಗುಂಡಿಗಳಿಂದ ಜನರು ರೋಸಿ ಹೋಗಿದ್ದಾರೆ. ಗುಂಡಿ ಮುಚ್ಚಲು ಯಾಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು. ಅ.3 ರೊಳಗೆ ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮುಗಿಯಬೇಕು. ಇತರೆ ರಸ್ತೆಗಳ ದುರಸ್ತಿ ಬಗ್ಗೆ ಪಟ್ಟಿ ಸಿದ್ಧಪಡಿಸಿ ಒಂದೊಂದು ರಸ್ತೆಗೆ ಸಮಯ ನಿಗದಿಪಡಿಸಿ ಪಾಲಿಕೆ ಸದಸ್ಯರು ಹಾಗೂ ಜನಪ್ರತಿನಿಧಿಗಳಿಗೆ ನೀಡಬೇಕು.
ಬಿಆರ್‌ಟಿಎಸ್ ಕಾಮಗಾರಿಯಿಂದ ಹದಗೆಟ್ಟ ಹು-ಧಾ ರಸ್ತೆಯನ್ನು ಕೂಡಲೇ ಬಿಆರ್‌ಟಿಎಸ್ ಅಧಿಕಾರಿಗಳು ದುರಸ್ತಿ ಮಾಡಬೇಕು ಎಂದು ಸೂಚಿಸಿದರು. ರಸ್ತೆ ಗುಂಡಿ ಮುಚ್ಚುವ ತ್ವರಿತಗತಿ ಕೆಲಸಕ್ಕೆ ಯಂತ್ರಗಳ ಬಳಕೆಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. 15 ದಿನಗಳಿಂದ ಮಳೆ ಹೆಚ್ಚಾಗಿರುವುದರಿಂದ ಮತ್ತಷ್ಟು ಗುಂಡಿ ಬಿದ್ದಿವೆ.
ಟೆಂಡರ್ ಕರೆಯದೆ ತುರ್ತಾಗಿ ಪ್ರಮುಖ ರಸ್ತೆಗಳ ದುರಸ್ತಿ ನಡೆಯುತ್ತಿದೆ. ಸ್ವತ್ಛತೆ ನಿಟ್ಟಿನಲ್ಲಿ ಹೊಸದಾಗಿ 20 ಹೆಲ್ತ್ ಇನ್‌ಸ್ಪೆಕ್ಟರ್ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಮಹಾಪೌರ ಡಿ.ಕೆ.ಚವ್ಹಾಣ, ಉಪಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಡಿಸಿ ಡಾ|ಎಸ್.ಬಿ. ಬೊಮ್ಮನಹಳ್ಳಿ, ಬಿಆರ್‌ಟಿಎಸ್ ಎಂಡಿ ಎಂ.ಜಿ. ಹಿರೇಮಠ ಇತರರಿದ್ದರು.