ಸುರತ್ಕಲ್: ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸದಿರುವುದರಿಂದ, ಮುನ್ಸೂಚನೆ ಇಲ್ಲದೆ ದಿಢೀರ್ ಎದುರಾಗುವ ಟೋಲ್ ಬೂತ್ ನಿಂದ ವಾಹನ ಅವಘಡಗಳು ನಡೆದು, ಪ್ರಾಣಹಾನಿಗಳು ಈಗಾಗಲೆ ಸಂಭವಿಸಿದೆ.
ಮತ್ತಷ್ಟು ದುರಂತಗಳು ಸಂಭವಿಸುವ ಮುನ್ನ ಟೋಲ್ ಬೂತ್ ಅನ್ನು ತತ್‌ಕ್ಷಣವೇ ತೆರವುಗೊಳಿಸಬೇಕು ಎಂದು ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಆಗ್ರಹಿಸಿದೆ.
ಟೋಲ್ ಬೂತ್ ತೆರವುಗೊಳಿಸುವಂತೆ ಹೋರಾಟ ಸಮಿತಿಯು ಹಲವು ಬಾರಿ ಒತ್ತಾಯ ಮಾಡಿತ್ತು. ಅನಗತ್ಯವಾಗಿ ನಿರುಪಯುಕ್ತ ಟೋಲ್ ಬೂತ್ ಉಳಿಸಿಕೊಂಡು ಟೋಲ್ ಕೇಂದ್ರದ ಪರಿಸರದಲ್ಲಿ ರಸ್ತೆ ಅಭಿವೃದ್ಧಿ ಪಡಿಸುತ್ತಿರುವುದು ಜನರ ತೆರಿಗೆಯ ಹಣದ ದುರುಪಯೋಗವಾಗಿದೆ ಎಂದು ಸಮಿತಿ ಆರೋಪಿಸಿದೆ.
ಏಳು ವರ್ಷಗಳ ಕಾಲ ಜನರ ಸತತ ಹೋರಾಟದಿಂದ ಅಧಿಕೃತವಾಗಿ ಮುಚ್ಚಲ್ಪಟ್ಟಿರುವ ಸುರತ್ಕಲ್ ಟೋಲ್ ಗೇಟ್‌ನ ನಿರುಪಯೋಗಿ ಬೂತ್‌ಗಳನ್ನು ಒಂಬತ್ತು ತಿಂಗಳು ಕಳೆದರೂ ತೆರವುಗೊಳಿಸದಿರುವುದು ಖಂಡನೀಯ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರು, ಶಾಸಕರು ಟೋಲ್ ಕೇಂದ್ರ ತೆರವು ಮಾಡಲು ಯಾಕೆ ಮುಂದಾಗಿಲ್ಲ. ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಕೇಂದ್ರದಲ್ಲಿ, ಅಥವಾ ಮರಳಿ ಸುರತ್ಕಲ್ ಟೋಲ್ ಕೇಂದ್ರದಲ್ಲೋ ಸಂಗ್ರಹ ಮಾಡುವುದು ಅಸಾಧ್ಯ. ಹೋರಾಟ ಸಮಿತಿ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ,ಪುರುಷೋತ್ತಮ್ ಚಿತ್ರಾಪುರ ಮತ್ತಿತರರು ಒತ್ತಾಯಿಸಿದರಲ್ಲದೆ, ಇಲ್ಲಿನ ನಿರುಪಯೋಗಿ ಟೋಲ್ ಬೂತ್ ಅನ್ನು ತೆರವುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಬೂತ್ ತೆರವಿಗಾಗಿ ಹೋರಾಟವನ್ನು ಆರಂಭಿಸುವುದಾಗಿ ಎಚ್ಚರಿಸಿದರು.