Advertisement

ಡಿಸಿಎಂಗೆ ಅನ್ವಯವಾಗಲ್ಲ ಸ್ವಚ್ಛತೆ ನಿಯಮ

11:40 AM Nov 24, 2018 | |

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಸ್ವಚ್ಛತೆಯ ಪಾಠ ಮಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪಾಲಿಕೆ ಆಸ್ಪತ್ರೆಯಲ್ಲಿ ಪಾದರಕ್ಷೆ ಹಾಕಿಕೊಂಡೇ ಶಸ್ತ್ರ ಚಿಕಿತ್ಸಾ ಘಟಕ ಪ್ರವೇಶಿಸುವ ಮೂಲಕ ಸ್ವಚ್ಛತಾ ನಿಯಮ ಉಲ್ಲಂ ಸಿದರು.

Advertisement

ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆಗೆ ಶುಕ್ರವಾರ ದಿಢೀರ್‌ ನಗರದ ಪ್ರದಕ್ಷಿಣೆ ನಡೆಸಿದ ಡಿಸಿಎಂ, ಗಂಗಾನಗರದ ಪಾಲಿಕೆ ಆಸ್ಪತ್ರೆಯ ಸ್ವಚ್ಛತೆ ಪರಿಶೀಲಿಸುವ ವೇಳೆ ಪಾದರಕ್ಷೆಗಳನ್ನು ಧರಿಸಿಯೇ ಶಸ್ತ್ರಚಿಕಿತ್ಸಾ ಘಟಕ ಪ್ರವೇಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಮೊದಲು ಭೇಟಿ ನೀಡಿ, ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಪರಿಶೀಲಿಸಿದ ಪರಮೇಶ್ವರ್‌, 10 ರೂ. ಕೊಟ್ಟು ಟೋಕನ್‌ ಪಡೆದು ಇಡ್ಲಿ ಮತ್ತು ಬಿಸಿಬೇಳೆ ಬಾತ್‌ ಸವಿದರು. ಬಳಿಕ ಸಲಹಾ ಪುಸ್ತಕ ಪರಿಶೀಲಿಸಿದ ಅವರು, ಸಾರ್ವಜನಿಕರ ಅಭಿಪ್ರಾಯ ಓದಿದರು.

ಜತೆಗೆ ತಿಂಡಿ ತಿನ್ನುತ್ತಿದ್ದ ಸಾರ್ವಜನಿಕರಿಂದ ಆಹಾರದ ಗುಣಮಟ್ಟದ ಮಾಹಿತಿ ಪಡೆದರು. ಬಳಿಕ ಇಂದಿರಾ ಅಡುಗೆ ಮನೆಗೆ ಭೇಟಿ ನೀಡಿ, ಲಕ್ಷಾಂತರ ಜನರಿಗೆ ಇಲ್ಲಿಂದ ಆಹಾರ ಹೋಗುತ್ತಿದೆ. ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡಬೇಕು ಎಂದು ಸಿಬ್ಬಂದಿಗೆ ಹೇಳಿದರು.

ಆನಂತರ ಸಮೀಪದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ಗ್ರಂಥಪಾಲಕರಿಂದ ಮಾಹಿತಿ ಪಡೆದುಕೊಂಡರು. ಜತೆಗೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದರು. ಪರಿಶೀಲನೆಯ ವೇಳೆ ಮೇಯರ್‌ ಗಂಗಾಂಬಿಕೆ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

Advertisement

ಡಿಸಿಎಂಗೂ ವಾಹನ ದಟ್ಟಣೆ ಬಿಸಿ: ಸದಾ ಜೀರೋ ಟ್ರಾಫಿಕ್‌ನಲ್ಲಿ ಸಂಚರಿಸುವ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರಿಗೆ ಶುಕ್ರವಾರ ಸಂಚಾರ ದಟ್ಟಣೆಯ ಬಿಸಿ ಮುಟ್ಟಿತು. ಹೆಬ್ಟಾಳ-ನಾಗವಾರ ರಿಂಗ್‌ ರಸ್ತೆಯಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿ ಪರಿಶೀಲನೆಗೆ ಜೀರೋ ಟ್ರಾಫಿಕ್‌ನಲ್ಲಿ ಹೋದರೂ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಜತೆಗೆ ಸಾರ್ವಜನಿಕರು ತೀವ್ರ ದಟ್ಟಣೆ ಸಮಸ್ಯೆ ಎದುರಿಸುವಂತಾಯಿತು. ನಂತರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆಯ ಅನುಭವ ನನಗೂ ಇದೆ. ನಾನೇನು ಆಕಾಶದಿಂದ ಇಳಿದು ಬಂದಿಲ್ಲ. ಸಂಚಾರ ದಟ್ಟಣೆ ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ಕ್ಯಾಂಟೀನ್‌ ಆಹಾರ ಉತ್ತವಾಗಿದೆ – ಪರಮೇಶ್ವರ್‌: ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದ್ದು, ಜನರು ಆಹಾರ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಹೆಣ್ಣೂರು-ನಾಗಾವರ ವರ್ತುಲ ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಇನ್ನು ಖಾಸಗಿ ಆಸ್ಪತ್ರೆಗಳಿಗೆ ಕಮ್ಮಿಯಿಲ್ಲದಂತಹ ಆಸ್ಪತ್ರೆಯನ್ನು ಪಾಲಿಕೆಯಿಂದ ನಿರ್ಮಿಸಲಾಗಿದ್ದು, ಸಾರ್ವಜನಿಕರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪರಮೇಶ್ವರ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next