ಹುಣಸೂರು: ನಗರಸಭೆಯ ಗುತ್ತಿಗೆ ಪೌರಕಾರ್ಮಿಕರಿಗೆ ಕಳೆದ 5 ತಿಂಗಳಿಂದ ವೇತನ ನೀಡದಿರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಹಾಗೂ ಗುತ್ತಿಗೆ ನೌಕರರು ಗುರುವಾರ ಹುಣಸೂರು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಪೌರಕಾರ್ಮಿಕರು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಧರಣಿಯಲ್ಲಿ ಮಾತನಾಡಿದ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್, ನಗರದ ಸ್ವತ್ಛತೆಗೆ ಹಗಲಿರುಳು ದುಡಿಯುವ ನಮಗೆ ಕಳೆದ 5 ತಿಂಗಳಿನಿಂದ ವೇತನ ನೀಡದೇ ನಗರಸಭೆ ನಮ್ಮನ್ನು ದುಡಿಸಿಕೊಳ್ಳುತ್ತಿದೆ.
ನಮ್ಮ ಕುಟುಂಬ ಸಾಗಿಸುವುದು ಕಷ್ಟವಾಗಿದೆ. ಈ ಕುರಿತಂತೆ ಹಲವಾರು ಬಾರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಗರಸಭೆಯಲ್ಲಿ ನಿವೃತ್ತರಾದ ಪೌರಕಾರ್ಮಿಕರನ್ನು ಗೌರವಯುತವಾಗಿ ಸನ್ಮಾನಿಸಿಯೂ ಕಳಹಿಸದೇ ನಗರಸಭೆ ನಮ್ಮನ್ನು ಅಪಮಾನಿಸಿದೆ. ನಗರಸಭೆಯ ಅಧಿಕಾರಿಗಳು ಅನುಸರಿಸುತ್ತಿರುವ ಈ ತಾರತಮ್ಯ ನಿಲ್ಲಬೇಕು ಹಾಗೂ ಕೂಡಲೇ ನಮಗೆ ಬಾಕಿಯಿರುವ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.
ಸೂಕ್ತ ಕ್ರಮದ ಭರವಸೆ: ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ನಗರಸಭಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ರಾಜಾÂದ್ಯಂತ ಈ ಸಮಸ್ಯೆ ಎದುರಾಗಿದ್ದು, ಪ್ರತಿಭಟನಾಕಾರರು ಸಲ್ಲಿಸಿರುವ ಮನವಿಯನ್ನು ಕೂಡಲೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ನಂತರ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದೆಂದರು. ಪೌರಾಯುಕ್ತ ಶಿವಪ್ಪನಾಯ್ಕ ಇದ್ದರು. ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ರಾಮ, ಉಪಾಧ್ಯಕ್ಷ ರಮೇಶ್, ಮುಖಂಡರಾದ ನಾಗರಾಜ್, ಮುತ್ತಯ್ಯ, ಮಾಗಳಿ ದಿನೇಶ್, ಸುನಿಲ್ ಕುಮಾರ್, ಕೆ.ರವಿ, ಎಚ್.ಎಂ.ಕೃಷ್ಣ ಸೇರಿದಂತೆ ವಾಹನ ಚಾಲಕರು ಭಾಗವಹಿಸಿದ್ದರು.