Advertisement
ಬೆಂಗಳೂರು: ಶಾಲೆ, ಕಾಲೇಜು, ಕಚೇರಿಗೆ ಹೋಗುವ ಬದಲಿಗೆ ಮನೆಗೆ ನುಗ್ಗಿದ್ದ ನೀರು ಹೊರ ಹಾಕುತ್ತಿದ್ದ ಕುಟುಂಬ ಸದಸ್ಯರು, ಅಡಿಗಟ್ಟಲೇ ನೀರು ನಿಂತು ಜಲಾವೃತವಾದ ಬಡಾವಣೆಗಳು. ದಿನವಿಡೀ ಉಕ್ಕಿ ಹರಿದ ಮ್ಯಾನ್‌ಹೋಲ್‌ಗಳು. ಕೆಸರು ಗದ್ದೆಯಂತಾದ ರಸ್ತೆಗಳು. ಕೆರೆಗಳಂತಾದ ಸುರಂಗ ಮಾರ್ಗಗಳು…
Related Articles
Advertisement
ಮತ್ತೆ ಕೋಡಿಚಿಕ್ಕನಹಳ್ಳಿ ಜಲಾವೃತ: 2016ರಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ್ದ ಬೊಮ್ಮನಹಳ್ಳಿ ವಲಯದ ಕೋಡಿಚಿಕ್ಕನಹಳ್ಳಿಯಲ್ಲಿ ಮಳೆ ಮತ್ತೆ ಅವಾಂತರಗಳನ್ನು ಸೃಷ್ಟಿಸಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೋಡಿಚಿಕ್ಕನಹಳ್ಳಿಯ ಅನೇಕ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿತ್ತು. ಆಹಾರ ಪದಾರ್ಥ ಸೇರಿದಂತೆ ಗೃಹ ಬಳಕೆ ವಸ್ತುಗಳೆಲ್ಲಾ ನೀರಿನಲ್ಲಿ ಮುಳುಗಿ ನಷ್ಟ ಅನುಭವಿಸುವಂತಾಗಿತ್ತು.
ಬಿಡಿಎ ಬಡಾವಣೆಗೆ ನುಗ್ಗಿದ ನೀರು: ಹುಳಿಮಾವು ಕೆರೆ ಬಳಿಯ ರಾಜಕಾಲುವೆಯಲ್ಲಿ ಮಳೆ ನೀರಿನ ಹರಿವು ಹೆಚ್ಚಾಗಿ ಉಕ್ಕಿದ್ದರಿಂದ ಸಮೀಪದ ಬಿಡಿಎ ಬಡಾವಣೆಗಳ ರಸ್ತೆಗಳು ಜಲಾವೃತವಾಗಿದ್ದವು. ಧಾರಾಕಾರ ಮಳೆಗೆ ಬೆದರಿದ ನಿವಾಸಿಗಳು ನೆಲಮಹಡಿಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ಮೊದಲ ಮಹಡಿ, ತಾರಸಿಗೆ ಸಾಗಿಸಿ ಸಂರಕ್ಷಿಸಿಟ್ಟುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಮಳೆ ತಗ್ಗಿದ ಬಳಿಕ ನೆಲಮಹಡಿಗೆ ತೆರಳಿ ಮನೆಗಳಿಗೆ ನುಗ್ಗಿದ್ದ ನೀರು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಮೋಟಾರು ಸದ್ದು: ಕೋಡಿ ಚಿಕ್ಕನಹಳ್ಳಿ, ಹುಳಿಮಾವು ಬಿಡಿಎ ಬಡಾವಣೆ, ಕಾಳೇನ ಅಗ್ರಹಾರ, ಎಚ್‌ಎಸ್‌ಆರ್ ಬಡಾವಣೆ, ಎಂಎಲ್‌ಎ ಬಡಾವಣೆ ಸೇರಿ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸೋಮವಾರ ಬೆಳಗ್ಗೆ ಜನರೇಟರ್‌ಗಳ ಸದ್ದು ಜೋರಾಗಿ ಕೇಳಿ ಬರುತ್ತಿತ್ತು. ಮನೆ ಒಳ, ಹೊರ ಆವರಣ, ನೀರಿನ ಸಂಪ್, ಪಾರ್ಕಿಂಗ್ ಸ್ಥಳಕ್ಕೆ ಮಳೆನೀರು, ಒಳಚರಂಡಿ ನೀರು ನುಗ್ಗಿದ್ದರಿಂದ ನಿವಾಸಿಗಳು ಮೋಟಾರು ಬಳಸಿ ನೀರು ಹೊರ ಹಾಕಿ ಸ್ವತ್ಛಗೊಳಿಸುವಂತಾಗಿತ್ತು.
ತಳಮಹಡಿ ಜಲಾವೃತ: ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಹಲವು ಬಡಾವಣೆಗಳಲ್ಲಿನ ಅಪಾರ್ಟ್‌ಮೆಂಟ್‌ಗಳ ತಳಮಹಡಿಯಲ್ಲಿ (ಪಾರ್ಕಿಂಗ್ ತಾಣ) ಅಡಿಗಟ್ಟಲೇ ನೀರು ನಿಂತಿತ್ತು. ಕೋಡಿಚಿಕ್ಕನಹಳ್ಳಿಯ ಶಿವಗಿರಿ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ನಲ್ಲಿ ಮಳೆನೀರು ಹೋಗಲು ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಯಾಗಿದ್ದ ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಿದ್ದವು.
ಜೆ.ಪಿ.ನಗರದ ಸೌಪರ್ಣಿಕ, ವೇಗಾಸಿಟಿ, 8ನೇ ಘಟ್ಟದ ರಸ್ತೆಯ ಆರ್‌ಜೆಆರ್ ಹಾಗೂ ಕೊತ್ತನೂರಿನ ಲೇಕ್ ವ್ಯೂ ಬಡಾವಣೆ, ಬನ್ನೇರುಘಟ್ಟ ಮುಖ್ಯರಸ್ತೆಯ ದಾರಾನಿ ಕಂಫರ್ಟ್ಸ್ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ವಲಯದ ಸಾಕಷ್ಟು ಬಡಾವಣೆಗಳ ಅಪಾರ್ಟ್‌ಮೆಂಟ್‌ಗಳ ತಳಮಹಡಿಗಳಲ್ಲಿ ನೀರು ನಿಂತಿದ್ದರಿಂದ ನಿವಾಸಿಗಳು ವಾಹನಗಳನ್ನು ಹೊರತೆಗೆಯಲಾಗದೆ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಧರೆಗುರುಳಿದ 60 ವರ್ಷದ ಮರ: ಅಗ್ರಹಾರ ದಾಸರಹಳ್ಳಿಯಲ್ಲಿ ಸುಮಾರು 60 ವರ್ಷದ ಅರಳಿ ಮರವೊಂದು ಭಾನುವಾರ ರಾತ್ರಿ ಧರೆಗುರುಳಿದೆ. ಜಯನಗರ ನಾಲ್ಕನೇ ಮುಖ್ಯರಸ್ತೆ, ಕೊಡವ ಸಮಾಜ ಸುಬ್ಬಯ್ಯ ಬ್ಲಾಕ್, ಜ್ಞಾನ ಜ್ಯೋತಿ ನಗರ, ನಾಗರಬಾವಿ ವೃತ್ತ ಹಾಗೂ ವಸಂತನಗರದಲ್ಲಿ ಮರಗಳು ಉರುಳಿ ಬಿದ್ದವು. ಮಳೆಯ ನಡುವೆಯೇ ಮರಗಳನ್ನು ಶೀಘ್ರ ತೆರವುಗೊಳಿಸಲಾಗದ ಹಿನ್ನೆಲೆಯಲ್ಲಿ ಸೋಮವಾರ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.
ಮಣ್ಣು ಕುಸಿತ: ನಾಗವಾರ ಹೊರ ವರ್ತುಲ ರಸ್ತೆಯ ವಿದ್ಯಾಗಿರಿ ಬಡಾವಣೆಯಲ್ಲಿ ಮಳೆಯಿಂದಾಗಿ ಮಣ್ಣು ಕುಸಿತ ಉಂಟಾಗಿದ್ದರಿಂದ ಕೆಲವೆಡೆ ಗೋಡೆಗಳು ಕುಸಿದಿವೆ. ಇದರಿಂದಾಗಿ ಸಮೀಪದ ಜನವಸತಿ ಪ್ರದೇಶಗಳಲ್ಲಿ ಆತಂಕ ಎದುರಾಗಿದೆ. ಘಟನೆಯಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರಾಜಕಾಲುವೆ ಒತ್ತುವರಿ ಅವಾಂತರ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಕೋಡಿಚಿಕ್ಕನಹಳ್ಳಿಯಲ್ಲಿ ಈ ವರ್ಷವೂ ಮನೆಗಳಿಗೆ ನೀರು ನುಗ್ಗಿ, ಜನ ಪರದಾಡುವಂತಾಗಿದೆ. 2016ರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇದೇ ಭಾಗದಿಂದ ಆರಂಭಿಸಿದರೂ, ಪೂರ್ಣಗೊಳಿಸದ ಪರಿಣಾಮ ರಾಜಕಾಲುವೆ ನೀರು ಬಡಾವಣೆಗಳಿಗೆ ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ.
ಪಾಲಿಕೆ ಹಿಂದೆ, ಅಗ್ನಿಶಾಮಕ ಮುಂದು: ಮಳೆಯಿಂದ ಬಹುಳಷ್ಟು ಬಡಾವಣೆಗಳು ಜಲಾವೃತಗೊಂಡು ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ ದೂರು ನೀಡಿದರೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೋಡಿಚಿಕ್ಕನಹಳ್ಳಿಯ ಬಡಾವಣೆಗಳಲ್ಲಿ ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದು, ಮಳೆನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕಂಡುಬಂತು.
ಕೋಡಿ ಬಿದ್ದ ಅಂಜನಾಪುರ ಕೆರೆ: ಭಾರಿ ಮಳೆಯಿಂದಾಗಿ ಅಂಜನಾಪುರ ಕೆರೆ ತುಂಬಿ ಕೋಡಿ ಹರಿದಿದೆ. ಕೆರೆಯಲ್ಲಿ ಕಳೆದ ಕೆಲವು ತಿಂಗಳಿಂದ ಹೂಳೆತ್ತುವ ಕಾಮಗಾರಿ ನಡೆಸುತ್ತಿದ್ದರಿಂದ ಕೆರೆ ಬಹುತೇಕ ಖಾಲಿಯಾಗಿತ್ತು. ಆದರೆ, ಭಾನುವಾರ ಇಡೀರಾತ್ರಿ ಸುರಿದ ಮಳೆಗೆ ಅಂಜನಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಹೊರಕ್ಕೆ ಹರಿಯಿತು. ಅಂಜನಾಪುರ ವಾರ್ಡ್‌ನಲ್ಲಿ 206 ಮಿ.ಮೀ. ಮಳೆಯಾಗಿದ್ದು, ಬ್ಯಾಂಕ್ ಕಾಲೋನಿ, ಹರಿನಗರ ಹಾಗೂ ರಾಯಲ್ ಉದ್ಯಾನ ಸುತ್ತಮುತ್ತಲಿರುವ ಮನೆಗಳಿಗೆ ನೀರು ನುಗ್ಗಿದ್ದ ಬಗ್ಗೆ ವರದಿಯಾಗಿದೆ.
ದೇವಾಲಯಕ್ಕೆ ನುಗ್ಗಿದ ಮಳೆನೀರು: ಕಳೆದ ಬಾರಿ ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ ಬಳಿಯ ರಾಜಕಾಲುವೆ ಹಳೆಯ ತಡೆಗೋಡೆ ಕುಸಿದಿದ್ದರಿಂದ ದೇವಾಲಯಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ತಡೆಗೋಡೆಯನ್ನು ಎತ್ತರಿಸಿತ್ತು.
ಆದರೂ ಭಾನುವಾರ ಕಾಲುವೆಯಲ್ಲಿ ಮಳೆ ನೀರು, ಕೊಳಚೆ ನೀರು ಪ್ರವಾಹೋಪಾದಿಯಲ್ಲಿ ಹರಿದಿದ್ದರಿಂದ ದತ್ತ ಪೀಠದಲ್ಲಿ ವೇದಾಭ್ಯಾಸ ಮಾಡುತ್ತಿರುವ ಸುಮಾರು 20 ಮಕ್ಕಳಿಗೆ ರಾತ್ರಿಯಿಡೀ ನಿದ್ದೆಯಿಲ್ಲದಂತಾಗಿತ್ತು. ಘಟನೆಯ ಕುರಿತು ಮಾಹಿತಿ ನೀಡಿದರೂ ಪಾಲಿಕೆಯ ಅಧಿಕಾರಿಗಳು ಸ್ಪಂದಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ ಮಕ್ಕಳೇ ದೇವಾಲಯದ ಆವರಣದಲ್ಲಿದ್ದ ನೀರನ್ನು ಹೊರಕ್ಕೆ ಹಾಕಿ ಸ್ವತ್ಛಗೊಳಿಸಿದರು.
ಎರಡು ವರ್ಷಗಳಿಂದ ಸಾಮಾನ್ಯ ಮಳೆಗೂ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಭಯದಲ್ಲಿ ಜೀವನ ನಡೆಸುವ ಪರಿಸ್ಥಿತಿಯಿದೆ.-ರಮೇಶ್, ಕೋಡಿಚಿಕ್ಕನಹಳ್ಳಿ ಭಾನುವಾರ ತಡರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಘಟನೆಯ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ನೆರವಿಗೆ ಧಾವಿಸಿಲ್ಲ.
-ನಾಗರಾಜ್, ಕೆಂಗೇರಿ