Advertisement
ಮಂಗಳವಾರ ರಾತ್ರಿಯಿಡೀ ರಚ್ಚೆ ಹಿಡಿದು ಸುರಿದ ಮಳೆ ನಗರದ ಹಲವೆಡೆ ಸೃಷ್ಟಿಸಿದ ಅವಾಂತರಗಳ ಸ್ಯಾಂಪಲ್‌ಗಳಿವು. ಸೆಪ್ಟೆಂಬರ್ ತಿಂಗಳ ಮೊದಲ ದಿನದಿಂದಲೂ ಬಿಟ್ಟೂ ಬಿಡದಂತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೇರಾಯ. ಅಕ್ಷರಶಃ ಉದ್ಯಾನನಗರಿ ನಿವಾಸಿಗಳ ನಿದ್ರಾಭಂಗ ಮಾಡಿದ್ದಾನೆ. ಸಣ್ಣ ಮಳೆಗೂ ಕೆರೆಗಳಂತೆ ನೀರಿನಲ್ಲಿ ತೇಲುವ ನಗರದ ಬಹುತೇಕ ಬಡಾವಣೆಗಳ ನಿವಾಸಿಗಳು ಕಳೆದೊಂದು ತಿಂಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಮಾಡುತ್ತಿದ್ದಾರೆ.
Related Articles
Advertisement
ಮನೆಗಳಿಗೆ ಅಡ್ಡವಾಗಿ ಬಿದಿದ್ದ ಗೊಡೆಯ ಅವಶೇಷಗಳನ್ನು ತೆರವುಗೊಳಿಸಲು ಬಿಬಿಎಂಪಿ ಮತ್ತು ಅಗ್ನಿ ಶಾಮಕ ಪಡೆಗಳ ಸಿಬ್ಬಂದಿ ರಾತ್ರಿಯಿಡೀ ಶ್ರಮಿಸಿದ್ದಾರೆ. ಅಪಾರ್ಟ್‌ಮೆಂಟ್ ಮಾಲೀಕರಿಗೆ ಈ ಹಿಂದೆ ಕಾಂಪೌಂಡ್ ಬಿರುಕು ಬಿಟ್ಟಿರುವ ಕುರಿತು ಮಾಹಿತಿ ನೀಡಿ ಸರಿಪಡಿಸುವಂತೆ ಸೂಚಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಅನಾಹುತ ಸಂಭವಸಿದೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಮಾಲತಿ ಆರೊಪಿಸಿದ್ದಾರೆ.
ಇಬ್ಬರ ಸಾವು: ಕೃಷ್ಣರಾಜಪುರದ ವಿಧಾನಸಭಾ ಕ್ಷೇತ್ರದ ಭಟ್ಟರಹಳ್ಳಿಯ ಆರ್‌ಎಂಎಸ್ ಕಾಲೋನಿಯ ಮನೆಗೆ ರಾತ್ರಿ ಮಳೆ ನೀರು ನುಗ್ಗಿದ್ದು, ಯುಪಿಎಸ್ ಸಂಪರ್ಕ ಕಡಿತಗೊಳಿಸಲು ತೆರಳಿದ ಜೋಸ್ ಮೀನಮ್ಮ (60) ಎಂಬುವರು ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೇ ಮಾದನಾಯಕನಹಳ್ಳಿಯ ಆಲೂರುಪಾಳ್ಯದಲ್ಲಿ ಗೋಡೆ ಕುಸಿದು ನಾರಾಯಣಪ್ಪ (48) ಎಂಬುವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕೆ.ಆರ್.ಪುರದ ಐಟಿಐ ಕಾಲೋನಿಯ ಮನೆಯೊಂದರಲ್ಲಿ ಶಾರ್ಟ್ ಸರ್ಕ್ನೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯಲ್ಲಿನ ಟಿವಿ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಒಂಬತ್ತು ವಾಹನ ಜಖಂ: ಚಂದ್ರಾಲೇಔಟ್‌ನ ಮಾರುತಿ ಬಡಾವಣೆಯ ವಿದ್ಯಾರ್ಥಿಗಳ ವಸತಿಗೃಹ ಕಟ್ಟಡ 100 ಅಡಿ ಉದ್ದ ಹಾಗೂ 13 ಎತ್ತರದ ಕಾಪೌಂಡ್ ರಾತ್ರಿ 12.30ರ ಸುಮಾರಿಗೆ ಕುಸಿದಿದೆ. ಪರಿಣಾಮ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಆರು ಕಾರು, 1 ಬೈಕ್, 2 ಆಟೋಗಳು ಸಂಪೂರ್ಣ ಜಖಂಗೊಂಡಿವೆ. ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಶಿಥಿಲಗೊಂಡಿದ್ದು, ಹಲವಾರು ಬಾರಿ ಸ್ಥಳೀಯರು ಮಾಹಿತಿ ನೀಡಿದರೂ ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎಂದು ಬುಧವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಉಕ್ಕಿ ಹರಿದ ಕೆರೆಗಳು: ಮಳೆಯಿಂದಾಗಿ ರಾಜಕಾಲುವೆ ಹಾಗೂ ಚರಂಡಿ ನೀರಿನ ಹರಿವು ಹೆಚ್ಚಾದ ಪರಿಣಾಮ ನಗರದ ಕೆಲ ಕೆರೆಗಳು ಉಕ್ಕಿ ಹರಿದಿವೆ. ಇದರೊಂದಿಗೆ ವೃಷಭಾವತಿ, ಕೋರಮಂಗಲ – ಚಲ್ಲಘಟ್ಟ ಕಣಿವೆಗಳ ರಾಜಕಾಲುವೆಗಳು ಉಕ್ಕಿ ಅಕ್ಕಪಕ್ಕದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ, ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೀಡಾಗಿವೆ.
50ಕ್ಕೂ ಹೆಚ್ಚು ಮರಗಳು ಧರೆಗೆ: ಮಂಗಳವಾರದ ಮಳೆಗೆ ಪಾಲಿಕೆ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಹಲವಾರು ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಪದ್ಮನಾಭ ನಗರ, ಜಯನಗರ, ಮಾಧವರಾವ್ ಪಾರ್ಕ್, ಪುಲಿಕೇಶಿನಗರ, ಕುಮಾರಸ್ವಾಮಿ ಬಡಾವಣೆ, ರಾಜಾಜಿನಗರ, ಆರ್,ಆರ್.ನಗರ, ಪೀಣ್ಯ, ಬಸವೇಶ್ವರ ನಗರ, ಸಂಜಯನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಶೀಘ್ರ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ದಟ್ಟಣೆ ಉಂಟಾಗಿತ್ತು.
ರಕ್ಷಣೆಗೆ ಧಾವಿಸಿದ ಎನ್‌ಡಿಆರ್‌ಎಫ್ ಸಿಬ್ಬಂದಿ: ವೈಟ್‌ಫೀಲ್ಡ್ ಬಳಿಯ ಸೀಗೆಹಳ್ಳಿ ಬಳಿ ಸಾಯಿ ಗಾರ್ಡನ್ ಬಳಿ ಬುಧವಾರ ಬೆಳಗ್ಗೆ ರಸ್ತೆಗಳು ಸಂಪೂರ್ಣ ಜಲವೃತಗೊಂಡು ಜನರು ಮನೆಗಳಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ 50 ಎನ್‌ಡಿಆರ್‌ಎಫ್ ಸಿಬ್ಬಂದಿ 150 ಹೆಚ್ಚು ವಿಲ್ಲಾಗಳಲ್ಲಿ ಸಿಲುಕಿದ್ದ ಜನರನ್ನು 10 ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆತಂದರು.
ಕೆರೆಗಳಂತಾದ ರಸ್ತೆಗಳು: ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಮದಾಗಿ ಕೋರಮಂಗಲ 4ನೇ ಬ್ಲಾಕ್, 7ನೇ ಬ್ಲಾಕ್, ಕೆ.ಆರ್.ಪುರದ ಗಾಯತ್ರಿ ಬಡಾವಣೆ, ಭೀಮಯ್ಯ ಬಡಾವಣೆ ರಸ್ತೆಗಳು, ನೆಲಮಂಗಲದ ನೈಸ್ ರಸ್ತೆಯ ಮಾಕಳಿ ಬಳಿ ಸವೀರ್ಸ್ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳು ಮುಂದೆ ಹೋಗಲಾಗದ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ವಾಹನಗಳಲ್ಲಿದ್ದ ವಾಹನಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಬಂದಿದ್ದಾರೆ.
ಸಿಎಂ ಬಂದು ಹೋದ್ರೂ ತಪ್ಪದ ಸಮಸ್ಯೆ: ಇತ್ತೀಚೆಗೆ ನಗರದಲ್ಲಿ ಮಳೆಯಿಂದ ಅನಾಹುತಕ್ಕೆ ಒಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಮುಂದೆ ಮಳೆಯಿಂದ ಯಾವುದೇ ಅನಾಹುತ ಉಂಟಾಗದಂತೆ ತಾತ್ಕಾಲಿಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಮಂಗಳವಾರ ಸುರಿದ ಮಳೆಯಿಂದ ಮುಖ್ಯಮಂತ್ರಿಗಳು ಈ ಹಿಂದೆ ಭೇಟಿ ನೀಡಿದ ಶಾಂತಿನಗರ, ಎಚ್‌ಎಸ್‌ಆರ್ ಬಡಾವಣೆ, ಪೈ ಬಡಾವಣೆ, ರಾಮಮೂರ್ತಿ ನಗರಗಳಲ್ಲಿ ಸಮಸ್ಯೆಯಾಗಿದೆ.
ಸಮಸ್ಯೆಗೆ ಒಳಗಾದ ಪ್ರದೇಶಗಳು: ಕೆ.ಆರ್.ಪುರದ ನೇತ್ರಾವತಿ ಬಡಾವಣೆ, ಗಾಯತ್ರಿ ಬಡಾವಣೆ, ಚಿಕ್ಕದೇವಸಂದ್ರ, ಸ್ವತಂತ್ರನಗರ, ಮಹದೇವಪುರದ ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ವರ್ತೂರು ಕೋಡಿ ಸುತ್ತಲಿನ ಪ್ರದೇಶಗಳು, ಆಡುಗೋಡಿ, ಯಶವಂತಪುರ, ಭಟ್ಟರಹಳ್ಳಿ ಭಾಗಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ್ದು, ಬೆಳ್ಳಂದೂರು ಕೆರೆಯ ಬಳಿ ಮತ್ತೆ ನೊರೆ ಸಮಸ್ಯೆ ಕಾಡಿದೆ.
ಬಡಾವಣೆ ಸಂಪೂರ್ಣ ಜಲಾವೃತ: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ವಾರ್ಡ್‌ನ ಮಂಜುನಾಥ ಬಡಾವಣೆ ಮಂಗಳವಾರ ಸುರಿದ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡು ಮನೆಗಳಿಗೆ ಕೊಳಚೆ ನೀರು ಪ್ರವೇಶಿಸಿದರಿಂದ ಜನರು ಪರದಾಡಿದ್ದಾರೆ. ಈ ಕುರಿತು ಶಾಸಕ ಬೈರತಿ ಬಸವರಾಜು ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರೊಂದಿಗೆ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನಕ್ಕೆ ಮುಂದಾಗಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿವಾಳ ಭಾಗದಲ್ಲಿ ಮಳೆಯಿಂದ ಆಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದು, ಇದೀಗ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸಮಸ್ಯೆಯಾಗುತ್ತಿದೆ. ಸಮಸ್ಯೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಗಾಗಲೇ ಅನಾಹುತ ತಡೆಗೆ ಸರ್ಕಾರ 300 ಕೋಟಿ ರೂ. ನೀಡಿದೆ.-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ