Advertisement

ಡಂಪಿಂಗ್‌ ಯಾರ್ಡ್‌ ಆಗಿ ಮಾರ್ಪಡುತ್ತಿದೆ ನಗರ 

12:38 PM May 28, 2018 | |

ನಗರ: ತೆರಿಗೆ ಸಂಗ್ರಹಿಸುವ ಸ್ಥಳೀಯಾಡಳಿತ ತ್ಯಾಜ್ಯಕ್ಕೂ ಒಂದು ವ್ಯವಸ್ಥೆ ಮಾಡಬೇಕಲ್ಲ. ಇಲ್ಲದೇ ಇದ್ದರೆ ನಗರಸಭೆ ಮುಂಭಾಗ, ಬಸ್‌ ನಿಲ್ದಾಣದ ಮುಂಭಾಗವೇ ತ್ಯಾಜ್ಯ ಹಾಕಲಾಗುವುದು. ಇದು ನಾಗರಿಕರೊಬ್ಬರ ಆಕ್ರೋಶದ ನುಡಿ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದಲ್ಲೇ ತ್ಯಾಜ್ಯ ರಾಶಿ ಹಾಕುತ್ತಿದ್ದು, ಪ್ರಶ್ನಿಸಿದರೆ ಈ ಉತ್ತರ ಲಭಿಸಿತು.

Advertisement

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪುತ್ತೂರು ಪೇಟೆಯ ಕೇಂದ್ರಸ್ಥಾನ. ಪುತ್ತೂರು ಅಥವಾ ಮಡಿಕೇರಿ- ಮಂಗಳೂರಿಗೆ ತೆರಳುವ ಪ್ರಯಾಣಿಕರು ಪುತ್ತೂರು ಬಸ್‌ ನಿಲ್ದಾಣಕ್ಕೆ ಬರಲೇಬೇಕು. ಹೀಗೆ ಬರುವವರ ಮುಂದೆ ಪುತ್ತೂರಿನ ಮಾನ ಹರಾಜು ಹಾಕಲು, ಇಂತಹ ತ್ಯಾಜ್ಯದ ಗುಡ್ಡೆ ಸಾಕು.

ಕೆಲವು ದಿನಗಳಿಂದ ತ್ಯಾಜ್ಯದ ಸಮಸ್ಯೆ ಮಿತಿಮೀರಿ ಬೆಳೆಯುತ್ತಿದೆ. ಹೊಸ ವ್ಯವಸ್ಥೆ ಇನ್ನೂ ಕೂಡ ಮನೆ- ಅಂಗಡಿಗಳ ಬಾಗಿಲಿಗೆ ತಲುಪದ ಕಾರಣ, ಜನರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಅದರಲ್ಲೂ ಪುತ್ತೂರು ಬಸ್‌ನಿಲ್ದಾಣ ಮುಂಭಾಗದಲ್ಲೇ ತ್ಯಾಜ್ಯದ ಗುಡ್ಡೆ ಬೆಳೆಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಮಳೆಗಾಲ ಶುರುವಾಗಿದೆ. ಮಳೆ ನೀರು ಭೂಮಿ ಮೇಲ್ಮೈಯನ್ನು ಕೊಚ್ಚಿಕೊಂಡು ಹೋಗುವ ವೇಳೆ, ಇಂತಹ ತ್ಯಾಜ್ಯವನ್ನು ಹೊತ್ತೂಯ್ದರೆ ಹೇಗಿರಬಹುದು ಪರಿಸ್ಥಿತಿ? ಇಂತಹ ತ್ಯಾಜ್ಯದಲ್ಲಿ ಸೊಳ್ಳೆ ಉತ್ಪತ್ತಿಯಾಗಿ, ರೋಗ-ರುಜಿನ ಹರಡಿದರೆ ಜನರ ಆರೋಗ್ಯದ ಗತಿಯೇನು? ಒಂದೆಡೆ ಸ್ವಚ್ಛ ಅಭಿಯಾನ ನಡೆಸುತ್ತಾ, ಇನ್ನೊಂದೆಡೆ ನಾಗರಿಕರು ತ್ಯಾಜ್ಯ ಗುಡ್ಡೆ ಹಾಕುತ್ತಿದ್ದರೆ ಯಾರು ಹೊಣೆ? ಪುತ್ತೂರಿಗೆ ಭೇಟಿ ಕೊಡುವ ಪ್ರವಾಸಿಗರು ನಮ್ಮೂರಿನ ಬಗ್ಗೆ ಏನು ಹೇಳಿಕೊಂಡಾರು? ಇಂತಹ ಎಲ್ಲ ಪ್ರಶ್ನೆಗಳು ತ್ಯಾಜ್ಯದ ಮುಂದೆ ಧುತ್ತೆಂದು ಎದುರಾಗಿದೆ.

ಪರಿಹಾರ ಕಂಡುಕೊಂಡಿದ್ದ ನಿವೃತ್ತ ಅಧಿಕಾರಿ
ಘನತ್ಯಾಜ್ಯ ಸಮಸ್ಯೆ ನಿಜ. ಆದರೆ ಕೊನೆಯಿಲ್ಲದ ಸಮಸ್ಯೆಯೇನಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಪುರಸಭೆಯ ನಿವೃತ್ತ ಆರೋಗ್ಯ ನಿರೀಕ್ಷಕ ಅಬೂಬಕ್ಕರ್‌ ಅವರು ಕೈಗೊಂಡ ಕ್ರಮದ ಬಗ್ಗೆ ಮಾತಿಗೆ ಸಿಕ್ಕಿದರು. 1996ರಿಂದ 2009ರ ವರೆಗೆ ಪುತ್ತೂರು ಪುರಸಭೆ ಹಾಗೂ ತಾ| ಕಚೇರಿಯಲ್ಲಿ ಇವರು ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆಗಲೂ ಘನತ್ಯಾಜ್ಯ ವಿಲೇವಾರಿ ಕಷ್ಟ ಇತ್ತು. ಪುತ್ತೂರು ಪುರಸಭೆಯಲ್ಲಿ ಆರೋಗ್ಯ ವಿಭಾಗದಲ್ಲಿ ಇವರೊಬ್ಬರೇ ಅಧಿಕಾರಿ, ಸಿಬಂದಿ. ಆದರೂ ಸ್ವತ್ಛತೆ ಬಗ್ಗೆ ನಿಗಾ ಇಟ್ಟು, ಉತ್ತಮ ಕೆಲಸ ಮಾಡಿದ್ದಾರೆ ಎಂದು ಜನ ಗುರುತಿಸುತ್ತಾರೆ.

Advertisement

ಎಲ್ಲ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಘನತ್ಯಾಜ್ಯಕ್ಕೆ ಅಗತ್ಯವಿದ್ದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಬಂದು, ಪೌರಕಾರ್ಮಿಕರ ಹಾಜರಿ ತೆಗೆಯುತ್ತಿದ್ದರು. ನಂತರ ವಿವಿಧ ಕಡೆಗಳಿಗೆ ಹಂಚಿ ಕಳುಹಿಸುತ್ತಿದ್ದರು. ಸಂಜೆ ವೇಳೆಗೆ ಪುತ್ತೂರು ಪೇಟೆಯೆಲ್ಲ ಸ್ವಚ್ಛ ಆಗಬೇಕಿತ್ತು. ವಾಹನ ಕಡಿಮೆ ಇದೆ ಎಂದಾದರೆ, ಗುತ್ತಿಗೆ ತೆಗೆದುಕೊಳ್ಳಲು ಆಡಳಿತಕ್ಕೆ ಒತ್ತಾಯ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಅಧಿಕಾರಿ, ಸಿಬಂದಿ ಕೆಲಸ ಮಾಡುತ್ತಾರೆ ಎಂದಾದರೆ, ಯಾರದೇ ಆಡಳಿತವಾದರೂ ಸಹಕಾರ ನೀಡುತ್ತದೆ ಎನ್ನುತ್ತಾರೆ ಅಬೂಬಕ್ಕರ್‌.

ಆಗುತ್ತಿಲ್ಲ ಎಂದರೆ ಏನರ್ಥ?
ಏಳು ಲಾರಿಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ, ಆದರೆ ರೂಟ್‌ಮ್ಯಾಪನ್ನೇ ಮಾಡಿಲ್ಲ. ಫಾಲೋಅಪ್‌ ಕೂಡ ಮಾಡುತ್ತಿಲ್ಲ. ಸರಿಯಾಗಿ ಯೋಜನೆ ರೂಪಿಸಿಕೊಂಡು, ನಗರ ಪ್ರದೇಶವನ್ನಾದರೂ ಶುಚಿಗೊಳಿಸಲು ಅಧಿಕಾರಿಗಳು ಮನಸ್ಸು ಮಾಡಬಹುದಿತ್ತು. 2-3 ದಿನಕ್ಕೊಮ್ಮೆಯಾದರೂ ತ್ಯಾಜ್ಯ ವಿಲೇವಾರಿ ಮಾಡಿದರೆ ಇಷ್ಟು ದೊಡ್ಡ ಸಮಸ್ಯೆ ಸೃಷ್ಟಿ ಆಗುತ್ತಿರಲಿಲ್ಲ. ಈ ಮೊದಲು ಕೇವಲ 2 ತಂಡಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದವು. ಈಗ ಆಗುತ್ತಿಲ್ಲ ಎಂದರೆ ಏನರ್ಥ.
 - ಜಯಂತಿ ಬಲ್ನಾಡ್‌,
ಅಧ್ಯಕ್ಷೆ, ಪುತ್ತೂರು ನಗರಸಭೆ 

ಕಾಯುತ್ತಾ ಕೂರುತ್ತಾರೆ
ಈಗ ಜನರಿಗೆ ಸ್ವಲ್ಪ ತಿಳಿವಳಿಕೆ ಬಂದಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದಿಲ್ಲ. ಆದರೆ ಘನತ್ಯಾಜ್ಯ ವಿಲೇವಾರಿಗೆ ಒಂದು ವ್ಯವಸ್ಥೆಯನ್ನೇ ಮಾಡುವುದಿಲ್ಲ ಎಂದಾದರೆ, ಜನರು ತ್ಯಾಜ್ಯವನ್ನು ಎಲ್ಲಿ ಹಾಕಬೇಕು? ಕೆಲವರು ಮನೆ ಹೊರಗಡೆ ಕಸ ಇಟ್ಟು ಕಾಯುತ್ತಾ ಕೂರುವ ದೃಶ್ಯ ಕಂಡಿದ್ದೇನೆ. ತಕ್ಷಣ ಪುತ್ತೂರು ನಗರಸಭೆ ಆಡಳಿತ ಸೂಕ್ತ ನಿರ್ಧಾರ ತೆಗೆದುಕೊಂಡು, ಅಧಿಕಾರಿ- ಸಿಬಂದಿಗೆ ನಿರ್ದೇಶನ ನೀಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು.
 – ಅಬೂಬಕ್ಕರ್‌, ನಿವೃತ್ತ ಆರೋಗ್ಯ ನಿರೀಕ್ಷಕ,
    ಪುತ್ತೂರು ಪುರಸಭೆ

ಮುಗಿಯದ ಸಮಸ್ಯೆ
ಘನತ್ಯಾಜ್ಯ ವಿಲೇವಾರಿ ಮುಗಿಯದ ಸಮಸ್ಯೆ. ಡಸ್ಟ್‌ ಬಿನ್‌ ಇರುವಾಗ ಅದರಲ್ಲೇ ತಂದು ತ್ಯಾಜ್ಯ ಹಾಕುತ್ತಿದ್ದರು.
ಸುತ್ತಮುತ್ತಲ ಪ್ರದೇಶ ಮಲಿನ ಆಗುತ್ತಿತ್ತು. ಆದರೆ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿರಲಿಲ್ಲ. ಬಳಿಕ ಮನೆ- ಅಂಗಡಿಗಳ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸಲಾಯಿತು. ಇದೂ ಹಳ್ಳ ಹಿಡಿಯಿತು. ಈ ವ್ಯವಸ್ಥೆಯನ್ನು ಕಿತ್ತೂಗೆದು, ಗುತ್ತಿಗೆ ನೀಡುವ ಪದ್ಧತಿ ಜಾರಿಗೆ ತಂದರು. ಇದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next