Advertisement

ರಂಗೇರುತ್ತಿದೆ ನಗರ ಸ್ಥಳೀಯ ಸಂಸ್ಥೆ ಚುನಾವಣಾ ಕಣ

06:40 AM Aug 23, 2018 | Team Udayavani |

ಬೆಂಗಳೂರು:  ರಾಜ್ಯದ 20 ಜಿಲ್ಲೆಗಳ 104 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಗುರುವಾರ ಅಂತಿಮ ದಿನವಾಗಿದ್ದು, ಚುನಾವಣಾ ಕಣ ರಂಗೇರುತ್ತಿದೆ.

Advertisement

ಈ ಬಾರಿ ಕೊಡಗು ಸೇರಿದಂತೆ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಂಭವಿಸಿದ ಅತಿವೃಷ್ಠಿ ಹಾನಿ ಹಿನ್ನೆಲೆಯಲ್ಲಿ ಈ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಇದುವರೆಗೆ ಅಷ್ಟೊಂದು ತೀವ್ರವಾಗಿರಲಿಲ್ಲ. ಆದರೆ, ಕೊನೆಯ ಕೆಲ ದಿನಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಬಗ್ಗೆ ಗಮನಹರಿಸಲಿದ್ದು, ಸ್ವಲ್ಪ ಮಟ್ಟಿನ ಭಿರುಸು ಕಂಡುಬರಲಿದೆ.

104 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 2,500 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಿಂದ 2,253, ಬಿಜೆಪಿಯಿಂದ 2,191, ಜೆಡಿಎಸ್‌ನಿಂದ 1,283, ಬಿಎಸ್‌ಪಿಯಿಂದ 111, ಇತರ ಪಕ್ಷಗಳಿಂದ 170 ಹಾಗೂ ಪಕ್ಷೇತರರು 2,539 ಸೇರಿ ಒಟ್ಟು 8,547 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದ ಬಳಿಕ ಕಣದಲ್ಲಿ ಉಳಿದ ಅಭ್ಯರ್ಥಿಗಳ ಅಂತಿಮ ಚಿತ್ರಣ ಸಿಗಲಿದ್ದು, ಇದರೊಂದಿಗೆ ಪ್ರಚಾರ ಕಾರ್ಯವೂ ಚುರುಕುಗೊಳ್ಳಲಿದೆ.

ಪ್ರಕೃತಿ ವಿಕೋಪದಿಂದಾಗಿ ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಲ್ಲಿ ಪರಿಹಾರ ಕಾರ್ಯ ಮತ್ತು ಸಂತ್ರಸ್ತರಿಗೆ ನೆರವು ನೀಡಲು ಆದ್ಯತೆ ನೀಡಿವೆ. ಹೀಗಾಗಿ ಈ ಬಾರಿ ಚುನಾವಣಾ ಕಾವು ಅಷ್ಟೊಂದು ತೀವ್ರಸ್ವರೂಪ ಪಡೆದಿಲ್ಲ. ಆದರೆ, ಕೊಡಗು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಶುಕ್ರವಾರದ ಬಳಿಕ ರಾಜಕೀಯ ಪಕ್ಷಗಳ ನಾಯಕರು ಚುನಾವಣೆಯತ್ತ ಗಮನಹರಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಪ್ರಚಾರಕ್ಕೆ ಹೋಗುತ್ತಿಲ್ಲ:
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೋಗುವುದಿಲ್ಲ. ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸೇರಿದಂತೆ ಸ್ಥಳೀಯ ನಾಯಕರೇ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

Advertisement

ಮತದಾರರ ಸೆಳೆಯಲು ನಾನಾ ಕಸರತ್ತು
ಮಂಡ್ಯ:
ನಗರಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ವಿವಿಧ ಆಮಿಷಗಳನ್ನು ಮುಂದಿಟ್ಟು,ಮತಯಾಚನೆ ಮಾಡುತ್ತಿದ್ದಾರೆ.

ವಾರ್ಡ್‌ ವಾರು ಮತದಾರರ ಪಟ್ಟಿಯನ್ನು ಕೈಯಲ್ಲಿಟ್ಟು ಕೊಂಡಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ವಾರ್ಡ್‌ನಲ್ಲಿ ಎಷ್ಟು ಮತದಾರರಿದ್ದಾರೆ. ಯಾರ್ಯಾರ ಓಟು ಸ್ಥಳೀಯ ವಾರ್ಡ್‌ನಲ್ಲಿದೆ, ವಾರ್ಡ್‌ನ ಹೊರಗೆ ಎಷ್ಟು ಮತಗಳಿವೆ. ವಾರ್ಡ್‌ನ ಮತದಾರರಾಗಿದ್ದು ಉದ್ಯೋಗವನ್ನರಿಸಿಕೊಂಡು ನಗರದಿಂದ ಹೊರಗೆ ಹೋಗಿರುವ ಮತದಾರರು ಎಷ್ಟು ಎಂಬೆಲ್ಲಾ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಮತಕ್ಕಾಗಿ ಉಡುಗೊರೆಗಳನ್ನು ತಲುಪಿಸುವ ವ್ಯವಸ್ಥಿತ ಕಾರ್ಯತಂತ್ರ ನಡೆಸಿದ್ದಾರೆ.

ಪ್ರತಿಷ್ಠಿತ ಬಡಾವಣೆಗಳಲ್ಲಿರುವ ಜನರ ಬಳಿ ವಿನಯದಿಂದ ಮತಯಾಚನೆ ಮಾಡುವ ಅಭ್ಯರ್ಥಿಗಳು, ಕೊಳಚೆ ಪ್ರದೇಶಗಳ ನಿವಾಸಿಗಳ ಬಳಿ ಒಂದು ಮತಕ್ಕೆ ಇಂತಿಷ್ಟು ಹಣ ಅಥವಾ ಉಡುಗೊರೆ ನೀಡುವುದರೊಂದಿಗೆ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ಅರಿಶಿನ-ಕುಂಕುಮವನ್ನು ಬೆಳ್ಳಿ ಬಟ್ಟಲುಗಳಲ್ಲಿ ಇಟ್ಟು ಮತ ಕೇಳುವುದು, ಕವರ್‌ಗಳಲ್ಲಿ ಸೀರೆಯನ್ನಿಡುವುದು, ಮೂಗುತಿ, ಬೆಳ್ಳಿ ಕಾಲು ಚೈನು, ಕಾಲುಂಗುರ, ಮೂಗುತಿಯನ್ನು ಪ್ಯಾಕ್‌ ಮಾಡಿಸಿ ವೀಳ್ಯದೆಲೆ ಮೇಲಿಟ್ಟು ಮತದಾರರಿಗೆ ನೀಡುವ ಮೂಲಕ ಮತ ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ. ಮತ್ತೆ ಕೆಲವರು ಆ ಕುಟುಂಬದಲ್ಲಿರುವ ಮತದಾರರನ್ನು ಲೆಕ್ಕ ಹಾಕಿ ಒಂದು ಓಟಿಗೆ 1000 ರೂ.ನಂತೆ ಕವರ್‌ನಲ್ಲಿಟ್ಟು ನೀಡಿ ಕೈಮುಗಿದು ಮತಯಾಚನೆ ಮಾಡುತ್ತಿದ್ದಾರೆ. ಕೊಳಚೆ ಪ್ರದೇಶದ ಜನರಿಗೆ ಹಣ-ಮದ್ಯ ಕೊಟ್ಟು ಮತಗಳನ್ನು ಕೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಾರ್ಟಿಫ‌ಂಡ್‌ ನಿರೀಕ್ಷೆ: ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಪಾರ್ಟಿಫ‌ಂಡ್‌ ಹೆಸರಿನಲ್ಲಿ ಒಂದಷ್ಟು ಹಣ ನೀಡುತ್ತಿವೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ 1 ಲಕ್ಷ ರೂ.ವರೆಗೆ ಪಾರ್ಟಿಫ‌ಂಡ್‌ ಸಿಗುವ ಸಾಧ್ಯತೆ ಇದೆ. ಜೆಡಿಎಸ್‌ನಲ್ಲಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಹಣವನ್ನು ತಮ್ಮ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ನೀಡುತ್ತಿದ್ದಾರೆ. ಆದರೂ, ಬಹುಪಾಲು ಖರ್ಚನ್ನು ಅಭ್ಯರ್ಥಿಗಳೇ ಭರಿಸುವುದು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next