Advertisement
ಮುಂಬಯಿಯಲ್ಲಿ ನಗರ 24×7 ವ್ಯವಸ್ಥೆ ಪ್ರಾಯೋಗಿಕವಾಗಿ ಜ.27 ರಿಂದ ಜಾರಿಗೆ ಬಂದಿದೆ. ಆರಂಭಿಕವಾಗಿ ಇದಕ್ಕೆ ದೊರಕಿರುವ ಉತ್ತಮ ಜನಸ್ಪಂದನೆಯಿಂದಾಗಿ ಇದನ್ನು ಶಾಶ್ವತ ಕ್ರಮವಾಗಿ ಅಂಗೀಕರಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಮುಂಬಯಿ ಮಾದರಿಯಲ್ಲೇ ನಗರ 24×7 ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಇತರ ನಗರಗಳಲ್ಲೂ ಒಲವು ಹೆಚ್ಚುತ್ತಿದೆ.
Related Articles
Advertisement
ಮಂಗಳೂರು ನಗರದ ಕೆಲವು ಸಿಟಿಬಸ್‌ಗಳು ಕನಿಷ್ಠ 12 ಗಂಟೆಯವರೆಗೆ ಸಂಚರಿಸಬೇಕು ಮತ್ತು ಆಯ್ದ ಕೆಲವು ಪ್ರದೇಶದಲ್ಲಿ ರಾತ್ರಿ 12 ಗಂಟೆಯವರೆಗೆ ಮಳಿಗೆಗಳು ಹಾಗೂ ರೆಸ್ಟೋರೆಂಟ್‌ಗಳು ತೆರೆದಿಡಲು ಅವಕಾಶ ಇರಬೇಕು ಎಂಬ ಬೇಡಿಕೆ ಈ ಹಿಂದೆಯೇ ಕೇಳಿಬಂದಿತ್ತು. ನಗರದ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ದಿಷ್ಟವಾಗಿ ಕೆಲವು ರಸ್ತೆಗಳಲ್ಲಿ ಆಹಾರ ಮಳಿಗೆಗಳು, ಮಾಲ್‌ಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿಯವರೆಗೆ ತೆರೆದಿಡಲು ಅವಕಾಶ ನೀಡಿದರೆ ನಗರ ಹೆಚ್ಚು ಅವಧಿಯವರೆಗೆ ವಾಣಿಜ್ಯವಾಗಿ ಚಟುವಟಿಕೆಯಿಂದ ಇರುತ್ತದೆ. ನಗರ ಪ್ರವಾಸೋದ್ಯಮ ಅವಕಾಶಗಳಿಗೆ ಈಗಾಗಲೇ ಗುರುತಿಸಿಕೊಂಡಿದೆ. ಹೊರ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ರಾತ್ರಿ ಹೆಚ್ಚು ಹೊತ್ತು ಶಾಫಿಂಗ್ ಮಾಡಲು ಅವಕಾಶ ದೊರೆಯುತ್ತದೆ. ಆಹಾರ ಖಾದ್ಯಗಳು ತಡರಾತ್ರಿವರೆಗೆ ಲಭ್ಯವಿರುತ್ತದೆ. ಇದಲ್ಲದೆ ಸ್ಥಳೀಯವಾಗಿ ಹಗಲಿನಲ್ಲಿ ಉದ್ಯಮ, ಕಚೇರಿ ಕೆಲಸಗಳಲ್ಲಿ ತೊಡಗಿರುವವರಿಗೆ ರಾತ್ರಿ ಕುಟುಂಬದ ಜತೆಗೆ ಮಳಿಗೆ, ರೆಸ್ಟೋರೆಂಟ್‌ಗಳಿಗೆ ತೆರಳಲು ಅನೂಕೂಲವಾಗುತ್ತದೆ. ಮಂಗಳೂರಿಗೆ ಟೆಕ್ಕಿಗಳನ್ನು ಆಕರ್ಷಿಸಲು ಕೂಡಾ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ನಗರದಲ್ಲಿ ಮಳಿಗೆಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು ತಡರಾತ್ರಿವರೆಗೆ ತೆರೆದಿಡುವ ಸಂದರ್ಭದಲ್ಲಿ ಒಂದಷ್ಟು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಭದ್ರತಾ ಕ್ರಮಗಳು ಕೂಡ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನಗರದಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಮಧ್ಯರಾತ್ರಿವರೆಗೆ ತೆರೆದಿಡಲು ಅವಕಾಶ ನೀಡಿದರೆ ಪೊಲೀಸ್ ಇಲಾಖೆಗೂ ನಿಗಾವಹಿಸಲು ಸಾಧ್ಯವಾಗುತ್ತದೆ. ಅದುದರಿಂದ ಮಂಗಳೂರಿನಲ್ಲಿ ಒಂದು ನಿರ್ದಿಷ್ಟ ಪ್ರದೇಶ ಅಥವಾ ರಸ್ತೆಯನ್ನು ತೆಗೆದುಕೊಂಡು ರಾತ್ರಿ 12 ಗಂಟೆಯವರೆಗೆ ಮಳಿಗೆಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳಿಗೆ ಕಾರ್ಯನಿರ್ವಹಿಸಲು ಪ್ರಾಯೋಗಿಕವಾಗಿ ಅವಕಾಶ ನೀಡುವ ಚಿಂತನೆ ನಡೆಸಬಹುದಾಗಿದೆ.
ಮಂಗಳೂರಿನಲ್ಲಿ ಸಾಧ್ಯತೆಗಳುಮಂಗಳೂರು ನಗರ ಬೆಳೆಯುತ್ತಿದೆ. ವಾಣಿಜ್ಯವಾಗಿ ಮತ್ತು ಔದ್ಯೋಗಿಕವಾಗಿ ವಿಸ್ತರಣೆ ನಿಟ್ಟಿನಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ನಗರದಿಂದ ಹೊರ ಹೋಗುವ ಸರ್ವಿಸ್ , ಎಕ್ಸ್‌ಪ್ರೆಸ್ ಬಸ್‌ಗಳು ರಾತ್ರಿ 9.30 ಕ್ಕೆ ಸ್ಥಗಿತಗೊಳ್ಳುತ್ತವೆ. ಸಿಟಿಬಸ್‌ಗಳು ಕೂಡ ರಾತ್ರಿ 10.15 ಕ್ಕೆ ಕೊನೆಗೊಳ್ಳುತ್ತವೆ . ಹೊರಗಿನಿಂದ ಬರುವ ಖಾಸಗಿ ಬಸ್,ಎಕ್ಸ್‌ಪ್ರೆಸ್ ಬಸ್‌ಗಳು ರಾತ್ರಿ 10.30 ರ ವೇಳೆಗೆ ಸ್ಥಗಿತಗೊಳ್ಳುತ್ತವೆ. ಆ ಬಳಿಕ ದೂರದ ಊರಿನಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ವಿರಳವಾಗಿ ಇರುತ್ತವೆ. ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್‌ಗೆ ರೈಲುಗಳ ಆಗಮನ ನಿರ್ಗಮನ ಇರುತ್ತವೆ. ಬಸ್‌ಗಳ ಸಂಚಾರ ಸ್ಥಗಿತಗೊಂಡ ಬಳಿಕ ನಗರದೊಳಗೆ ಸಂಚರಿಸಲು ಆಟೋರಿಕ್ಷಾಗಳು ಮಾತ್ರ ಆಧಾರವಾಗಿರುತ್ತವೆ. ಬಸ್ ಸಂಚಾರಗಳು ಬಹುತೇಕ ರಾತ್ರಿ 10.30ಕ್ಕೆ ಕೊನೆಗೊಳ್ಳುವುದರಿಂದ ನಗರ ಕೂಡ 10 ಗಂಟೆಯ ವೇಳೆ ಬಹುತೇಕ ಸ್ತಬ್ಧವಾಗುತ್ತದೆ. ಹೊಟೇಲ್‌ಗಳು,ಮಾಲ್‌ಗಳು ರಾತ್ರಿ 10.30 ಕ್ಕೆ ಬಂದ್ ಆಗುತ್ತವೆ. - ಕೇಶವ ಕುಂದರ್