Advertisement

ಧರ್ಮ ಒಡೆವ ಸಂಚೆಂಬ ಗುಲ್ಲು ನಿರರ್ಥಕ

11:52 AM Sep 25, 2017 | Team Udayavani |

ಬೀದರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕೇಳುತ್ತಿರುವುದು ಹಿಂದು ಧರ್ಮ ಒಡೆಯುವ ಸಂಚೆಂದು ಕೆಲವರು ಗುಲ್ಲೆಬ್ಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

Advertisement

ಚಿತ್ರದುರ್ಗದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವ, ಲಿಂಗಾಯತ ಸಮಾವೇಶ ಹಾಗೂ ಬೀದರನಲ್ಲಿ ನಿಜಗುಣಾನಂದ ಶ್ರೀಗಳ ಪ್ರವಚನ ಆಯೋಜನೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದುವೆನ್ನುವುದು ಜೀವನ ವಿಧಾನ, ಅದೊಂದು ಸಂಸ್ಕೃತಿ. ಅದೊಂದು ಧರ್ಮವಾಗಿದ್ದರೆ ಬೌದ್ಧ, ಜೈನ, ಸಿಖ್‌, ಲಿಂಗಾಯತ ಧರ್ಮಗಳು ಉದಯಿಸಲು ಸಾಧ್ಯವಿರುತ್ತಿರಲಿಲ್ಲ ಎಂದರು.

ಶೋಷಣೆ ಒಪ್ಪದ ದೃಷ್ಟಾರರಿಂದ ನವ ಧರ್ಮ ಜನ್ಮ ತಾಳಿವೆ. ಇದರ ಜೊತೆಗೆ ವೀರಶೈವ, ಲಿಂಗಾಯತದ ಮಧ್ಯ ಗೊಂದಲ ನಿರ್ಮಿಸುತ್ತಿರುವವರು ಒಂದು ಮಾತನ್ನು ಸ್ಪಷ್ಠವಾಗಿ ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತ, ವೀರಶೈವ ಬೇರೆಯಲ್ಲ. ವೀರಶೈವವೆನ್ನುವುದು ಸರ್ಕಾರ ಗುರುತಿಸಿರುವ ಲಿಂಗಾಯತದ 73 ಒಳಪಂಗಡಗಳಲ್ಲಿ ಒಂದಾಗಿದೆ. ಯಾವುದೇ ಐತಿಹಾಸಿಕ ಆಧಾರವಿಲ್ಲದೇ ವೀರಶೈವ ಧರ್ಮವೆಂದು ಗುಲ್ಲೆಬ್ಬಿಸುವುದನ್ನು ಬಿಡಬೇಕು ಎಂದು ಹೇಳಿದರು.

ಬಸವಣ್ಣ ಎಲ್ಲರನ್ನು ಒಳಗೊಂಡ ಧರ್ಮ ಕಟ್ಟಿದ. ಆತ ಯಾರನ್ನೂ ದೂರ ಸರಿಸಿಲ್ಲ. ಸೂಳೆ ಸಂಕವ್ವೆ ಅವ್ವಳಂತಹ 2000 ಜನ ಇದರಲ್ಲಿ ಸೇರುತ್ತಾರೆ. ಮಾದಾರ, ಡೋಹಾರ, ಕ್ಷೌರಿಕ ಎಲ್ಲರನ್ನು ಒಳಗೊಂಡ ಶ್ರೇಷ್ಠ, ಜಾಗತಿಕ ಧರ್ಮ ಇದಾಗಿದೆ. ಇಡಿ ವಿಶ್ವಕ್ಕೆ ಬೆಳಕು ತೋರುವ ಶಕ್ತಿ ಲಿಂಗಾಯತಕ್ಕಿದೆ ಎಂದ ಅವರು, ಚಿತ್ರದುರ್ಗದಲ್ಲಿ ನಡೆಯುವ
ಲಿಂಗಾಯತ ರ್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

ಸಭೆಯಲ್ಲಿ ಭಾಗವಹಿಸಿದ ಭಕ್ತರ ಮನವಿಗೆ ಸ್ಪಂದಿಸಿ ಅ.22ರಿಂದ ಒಂದು ತಿಂಗಳ ಕಾಲ ಪ್ರವಚನಕ್ಕೆ ಸಮಯ ನೀಡುವುದಾಗಿ ಹೇಳಿದರು.

Advertisement

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಗಂದಗೆ, ಲಿಂಗಾಯತ ಸಮನ್ವಯ ಸಮಿತಿಯ ಬಾಬು ವಾಲಿ, ಪ್ರಭುರಾವ್‌ ವಸ್ಮತೆ, ಬಸವರಾಜ ಧನ್ನೂರ, ಆನಂದ ದೇವಪ್ಪ, ಬಸವರಾಜ ಪಾಟೀಲ ಹಾರೂರಗೇರಿ ಮಾತನಾಡಿದರು. ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಪ್ರಾಸ್ತಾವಿಕ ಮಾತನಾಡಿದರು. ಯುವ ಬಸವಕೇಂದ್ರದ ಸುರೇಶ ಚೆನಶೆಟ್ಟಿ ಸ್ವಾಗತಿಸಿದರು.

ವಿರೂಪಾಕ್ಷ ಗಾದಗಿ, ಚೆನ್ನಬಸವ ಹಂಗರಗಿ, ಜಗನ್ನಾಥ ಕಾಜಿ, ಚಂದ್ರಕಾಂತ ಕಾಡಾದಿ, ವೀರಶೆಟ್ಟಿ ಪಾಟೀಲ, ಚೆನ್ನಬಸವ ಹೇಡೆ, ಜಗು ಶಿವಯೋಗಿ, ವಿಜಯಕುಮಾರ ಗೌರೆ, ಶ್ರೀಕಾಂತ ಲಕಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next