Advertisement

ಭಟ್ಟರ ಗಾಳಿಪಟದಲ್ಲಿ ಚೈನೀಸ್‌ ಹುಡುಗಿ

05:33 AM Jan 19, 2019 | |

ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಬಹುದು. ಈ ನಡುವೆಯೇ ಭಟ್ಟರು ತಮ್ಮ ಮುಂದಿನ ಸಿನಿಮಾದ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ. ಅದು “ಗಾಳಿಪಟ-2′. ಭಟ್ಟರು “ಗಾಳಿಪಟ-2′ ಚಿತ್ರ ಮಾಡುತ್ತಾರೆಂಬ ಸುದ್ದಿ ಹಲವು ವರ್ಷಗಳಿಂದ ಓಡಾಡುತ್ತಲೇ ಇತ್ತು. ಆದರೆ, ಆ ಸಿನಿಮಾಕ್ಕೆ ಕಾಲ ಕೂಡಿಬಂದಿರಲಿಲ್ಲ.

Advertisement

ಈಗ ಎಲ್ಲವೂ ಪಕ್ಕಾ ಆಗಿದ್ದು, ಭಟ್ಟರು ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಮೊದಲ ಹಂತವಾಗಿ ಚಿತ್ರದ ಟೈಟಲ್‌ ಲಾಂಚ್‌ ಮಾಡಲಾಗಿದೆ. ಈಗಾಗಲೇ ಚಿತ್ರಕ್ಕೆ ಬೇಕಾದ ಗಾಳಿಪಟ ಉತ್ಸವದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಬಾರಿ ಭಟ್ಟರ ಗಾಳಿಪಟದಲ್ಲಿ ಯಾರೆಲ್ಲಾ ಇರುತ್ತಾರೆಂದು ನೀವು ಕೇಳಬಹುದು. ಶರಣ್‌, “ಲೂಸಿಯಾ’ ಪವನ್‌ ಹಾಗೂ ರಿಷಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಮೂವರಿಗೆ ಐವರು ನಾಯಕಿಯರಿದ್ದಾರೆ.

ಈಗಾಗಲೇ ಸೋನಾಲ್‌ ಮೊಂತೆರೋ, ಶರ್ಮಿಳಾ ಮಾಂಡ್ರೆ ಹಾಗೂ ಮುಂಬೈನ ಮಾಡೆಲ್‌ವೊಬ್ಬರು ಆಯ್ಕೆಯಾಗಿದ್ದರು. ಇನ್ನೊಬ್ಬರು ಬೆಂಗಾಲಿ ಬೆಡಗಿ ಹಾಗೂ ಚೈನೀಸ್‌ ಹುಡುಗಿಯೊಬ್ಬಳ ಆಯ್ಕೆ ನಡೆಯಬೇಕಿದೆ. ಎಲ್ಲಾ ಓಕೆ, ಚಿತ್ರಕ್ಕೆ ಚೈನೀಸ್‌ ಹುಡುಗಿಯ ಅಗತ್ಯವೇನು ಎಂದು ನೀವು ಕೇಳಬಹುದು. ಕಥೆ ಪಡೆಯುವ ತಿರುವುನಿಂದಾಗಿ ಚೈನೀಸ್‌ ಹುಡುಗಿಯನ್ನು ಕರೆತರಲು ಭಟ್ಟರು ಮುಂದಾಗಿದ್ದಾರೆ.

ಈಗಾಗಲೇ ಅಲ್ಲಿನ ಒಂದಿಬ್ಬರ ಜೊತೆ ಮಾತುಕತೆಯಾಗಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ. ಈಗಾಗಲೇ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭಗೊಂಡಿದ್ದು, ಅರ್ಜುನ್‌ ಜನ್ಯಾ ಸಂಗೀತ ನೀಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮಹೇಶ್‌ ಎನ್ನುವವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಾರ್ಚ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next