ಬೀಜಿಂಗ್: ಕೋವಿಡ್-19 ವೈರಸ್ ವಿಚಾರದಲ್ಲಿ ನಿರಂತ ರವಾಗಿ ದೊಡ್ಡಣ್ಣನಿಂದ ವಾಗ್ಧಾಳಿಗೆ ಗುರಿಯಾಗುತ್ತಿರುವ ಚೀನಾ ಈಗ ಅಮೆರಿಕದ ಡಾಲರ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಅದರ ಆರಂಭಿಕ ಹೆಜ್ಜೆಯೆಂಬಂತೆ, ಚೀನಾ ತನ್ನದೇ ಆದ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೊಳಿಸಲು ಶುರು ಮಾಡಿದೆ. ಈ ಮೂಲಕ ಅಮೆರಿಕದ ಡಾಲರ್ ಏಕಸ್ವಾಮ್ಯವನ್ನು ನಾಶ ಮಾಡುವ ಯೋಜನೆಯನ್ನು ಡ್ರ್ಯಾಗನ್ ಹಾಕಿಕೊಂಡಿದೆ.
ಚೀನಾದ ಅಪೆಕ್ಸ್ ಬ್ಯಾಂಕ್ (ಪೀಪಲ್ಸ್ ಬ್ಯಾಂಕ್ ಆಫ್ ಚೈನಾ)ನ ಡಿಜಿಟಲ್ ಕರೆನ್ಸಿ ಸಂಶೋಧನಾ ಸಂಸ್ಥೆಯು ಈಗಾಗಲೇ ಸುಝೌ, ಹಾಗೂ ಕ್ಸಿಯಾಂಗನ್ ನಗರಗಳಲ್ಲಿ ಮತ್ತು 2022ರ ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ನಡೆಯುವಂಥ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಡಿಜಿಟಲ್ ಕರೆನ್ಸಿಯ ಪ್ರಯೋಗ ಶುರುಮಾಡಿದೆ.
ವೇತನ ಪಾವತಿಯೂ ಶುರು: ಈ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಡಿಸಿ/ಇಪಿ ಹಾಗೂ ಇಆರ್ ಎಂಬಿ ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ, ಕೆಲವು ಸರ್ಕಾರಿ ಉದ್ಯೋಗಿಗಳಿಗೆ ಏಪ್ರಿಲ್ ವೇತನ ವನ್ನು ಈ ಕರೆನ್ಸಿಯ ಮೂಲಕವೇ ಪಾವತಿಸಲಾಗಿದೆ. ಕೆಲವು ನಗರಗಳಲ್ಲಿ ಸಾರಿಗೆ ಸಂಪರ್ಕ, ಇನ್ನೂ ಕೆಲವು ನಗರಗಳಲ್ಲಿ ಆಹಾರ ಮತ್ತು ಚಿಲ್ಲರೆ ವ್ಯಾಪಾರಗಳಿಗೆ ಇದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಮೆಕ್‌ಡೊನಾಲ್ಡ್, ಸ್ಟಾರ್‌ಬಕ್ಸ್, ಸಬ್‌ವೇ ಸೇರಿದಂತೆ 19 ರಿಟೇಲರ್‌ಗಳಿಗೆ ಡಿಜಿಟಲ್ ಕರೆನ್ಸಿಗಳ ಟ್ರಯಲ್ ಮಾಡುವಂತೆ ಆಹ್ವಾನ ನೀಡಲಾಗಿದೆ.
ಹಣದುಬ್ಬರ ಏರಿಕೆಯಾಗಲ್ಲ: ಸದ್ಯಕ್ಕೆ ಡಿಜಿಟಲ್ ಕರೆನ್ಸಿಯನ್ನು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಚಲಾವಣೆಗೆ ಬಿಡುವುದಿಲ್ಲ. ಆದರೆ, ದೀರ್ಘಕಾಲ ದಲ್ಲಿ ಇದರ ವ್ಯಾಪಕ ಬಳಕೆ ಆರಂಭವಾಗಲಿದೆ. ಅಲ್ಲದೆ ಈಗ ಚಲಾವಣೆಯಲ್ಲಿರುವ ಡಿಜಿಟಲ್ ಕರೆನ್ಸಿಯಿಂದ ಹಣದುಬ್ಬರ ಏರಿಕೆಯಾಗಬಹುದೆಂಬ ಭೀತಿಯೂ ಬೇಡ. ಎಂದು ಚೀನಾದ ಅಪೆಕ್ಸ್ ಬ್ಯಾಂಕ್ ಹೇಳಿದೆ.
ಅಮೆರಿಕಕ್ಕೆ ತಿರುಗುಬಾಣ
ಕೋವಿಡ್-19 ವಿಚಾರದಲ್ಲಿ ಚೀನಾ ವಿರುದ್ಧ ಅಮೆರಿಕ ಕೆಂಡ ಕಾರುತ್ತಲೇ ಇದೆ, ಜತೆಗೆ ವ್ಯಾಪಾರ ಸಮರ, ನಿರ್ಬಂಧದ ಬೆದರಿಕೆಯನ್ನೂ ಒಡ್ಡುತ್ತಿದೆ. ಹೀಗಾಗಿ, ಅಮೆರಿಕನ್ ಡಾಲರ್‌ನ ಏಕಸ್ವಾಮ್ಯವನ್ನು ತಗ್ಗಿಸಿ, ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಪರ್ಯಾಯ ಕರೆನ್ಸಿಯ ಆಯ್ಕೆ ಒದಗಿಸುವುದು ಚೀನಾದ ಕಾರ್ಯತಂತ್ರವಾಗಿದೆ. ಅಲ್ಲದೆ, ಅಮೆರಿಕವೇನಾದರೂ ಚೀನಾದ ಮೇಲೆ ಆರ್ಥಿಕ ದಿಗ್ಬಂಧ ಹೇರಿದರೂ, ತಮ್ಮ ಆರ್ಥಿಕತೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದೂ ಇದರ ಮತ್ತೂಂದು ಉದ್ದೇಶವಾಗಿದೆ.