Advertisement
ಇದುವರೆಗೂ ಪರೀಕ್ಷಾ ಫಲಿತಾಂಶ ಬಂದ ನಂತರ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿತ್ತು. ಆದರೆ ಈಗ ಪರೀಕ್ಷೆಗೆ ಮುನ್ನವೇ ಆತ್ಮಹತ್ಯೆ ಮಾಡುವ ಘಟನೆಗಳು ವರದಿಯಾಗುತ್ತಿವೆ. ವಿದ್ಯಾರ್ಥಿಗಳು ಖನ್ನತೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುತ್ತಿದೆ ಒಂದು ವರದಿ. ಆದರೆ ಖನ್ನತೆಗೆ ಕಾರಣವೇನು? ಕೌಟುಂಬಿಕವೇ? ಶೈಕ್ಷಣಿಕ ಒತ್ತಡವೇ? ವಂಶ ಪಾರಂಪರ್ಯವೇ?
ಎಸ್‌ಎಸ್‌ಎಲ್‌ಸಿಯ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಿದ್ದರು. ಹತ್ತನೇ ತರಗತಿ ಪಾಸಾಗದವನಿಗೆ ಬೆಲೆಯೇ ಇಲ್ಲ, ಅವರಿಗೆ ಭವಿಷ್ಯವಿಲ್ಲ ಎಂದು ಅವರು ಹೇಳಿದ್ದರು. ಒಬ್ಬ ವಿದ್ಯಾರ್ಥಿನಿ ಅದೇ ದಿನ ಮಾನಸಿಕ ಒತ್ತಡದಿಂದ ಅತ್ತು ಕರೆದು ಉಸಿರುಕಟ್ಟಿದಂತಾಗಿ ಕಂಗಾಲಾಗಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ತನಗಿದು ಸಾಧ್ಯವಿಲ್ಲ ಅನಿಸುವ ಕೆಲವರು ಶಾಲೆಗೆ ಗುಡ್ ಬೈ ಹೇಳಿ ಹೋಗಿ ಬಿಡುತ್ತಾರೆ. ಅಂಥವರು ಏನೋ ಒಂದು ಜೀಪನೋಪಾಯ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಏನೇ ಮಾಡಿದರೂ ಕಲಿಯಲಾಗುತ್ತಿಲ್ಲ ಆದರೆ ಶಾಲೆ ತೊರೆಯಲು ಹೆತ್ತವರು ಬಿಡುತ್ತಿಲ್ಲ. ಶಿಕ್ಷಕರು ಮನೆಗೆ ಬಂದು ಪುನಃ ಎಳೆದೊಯ್ಯುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿ ಕಂಗಾಲಾಗುತ್ತಾನೆ. ಹೆತ್ತವರ ಹಾಗೂ ಶಿಕ್ಷಕರ ನಿರೀಕ್ಷೆಗೆ ತಕ್ಕಂತೆ ಕಲಿಯಲಾಗದೆ ಒದ್ದಾಡುತ್ತಾನೆ. ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಕೆಲವರಲ್ಲಿ ಈ ಸಮಸ್ಯೆಯೇ ಖನ್ನತೆಯಾಗಿ ಪರಿವರ್ತನೆಯಾಗುತ್ತದೆ. ದುಂಬಿಯ ಕೈಯಲ್ಲಿ ಕಲ್ಲೆತ್ತಿಸಲು ಶಿಕ್ಷಣ ಇಲಾಖೆ ಹಾಗೂ ಹೆತ್ತವರು ಹಟ ತೊಟ್ಟಿರುವಾಗ ಆ ಮಗು ಏನು ಮಾಡಬೇಕು? ಎಲ್ಲಿಂದ ಸಾಂತ್ವನ ಪಡೆಯಬೇಕು? ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಹೆದರಿಸಿದರೂ ಬೆದರಿಸಿದರೂ ಒತ್ತಡ ಹೇರಿದರೂ ಏನೂ ಅನಿಸುವುದಿಲ್ಲ. ಬಹುತೇಕರು ಇವೆಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು ಕಠಿಣ ಪರಿಶ್ರಮಪಟ್ಟು ಕಲಿತು ನಿರೀಕ್ಷೆಗೂ ಮೀರಿದ ಸಾಧನೆ ಮಾಡುತ್ತಾರೆ. ಆದರೆ ಕೆಲವು ವಿಶೇಷ ಹಾಗೂ ಸೂಕ್ಷ್ಮ ಸ್ವಭಾವದ ವಿದ್ಯಾರ್ಥಿಗಳಿಗೆ ಎಲ್ಲಾ ಕಡೆಯಿಂದಲೂ ಬರುವ ಒತ್ತಡಗಳನ್ನು ಸಹಿಸಲು ಆಗುವುದಿಲ್ಲ. ಅವರು ಕಂಗಾಲಾಗುತ್ತಾರೆ. ದುರ್ಬಲ ಮನಸ್ಸಿನ ಅವರ ಮನಸ್ಸು ಒಡೆದು ಹೋಗುತ್ತದೆ. ಇತರರ ಇಚ್ಚೆಗನುಸಾರ ಸಾಧನೆ ತೋರಲು ತನಗಾಗದಿದ್ದರೆ ಎಂಬ ಭಯ ಅವರನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ.
Related Articles
Advertisement
ಆದರೂ ಆಗಲೇಬಾರದ ಅನಾಹುತ, ಭರಿಸಲಾಗದ ನಷ್ಟ, ಮರೆಯಲಾಗದ ದುಃಖ. ಈ ಅನಪೇಕ್ಷಿತ ಘಟನೆಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಫಲಿತಾಂಶದ ಹೆಸರಲ್ಲಿ ಅನಗತ್ಯ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಶಿಕ್ಷಕರನ್ನು ಏನೇ ಮಾಡಿಯಾದರೂ ಫಲಿತಾಂಶ ತನ್ನಿ ಎಂದು ಇಲಾಖೆ ಒತ್ತಾಯಿಸುವುದು ಸರಿಯಲ್ಲ. ಶಿಕ್ಷಕರ ಒತ್ತಡ ಪೋಷಕರಿಗೆ ವರ್ಗಾವಣೆಯಾಗುತ್ತದೆ. ಇವರೆಲ್ಲರ ಒತ್ತಡಕ್ಕೆ ಬಲಿ ಪಶುವಾಗುವವರು ಮಕ್ಕಳು. ವೈಯಕ್ತಿಕ ಭಿನ್ನತೆ ಎಂಬುದು ವೈಜ್ಞಾನಿಕ ಸತ್ಯ. ಅದನ್ನು ಮನೋವಿಜ್ಞಾನಿಗಳು ಸಾಬೀತು ಮಾಡಿ¨ªಾರೆ. ಎಲ್ಲರ ಬುದ್ಧಿಮಟ್ಟ, ಆಸಕ್ತಿ, ಗ್ರಹಣ ಶಕ್ತಿ ಒಂದೇ ರೀತಿ ಇರುವುದಿಲ್ಲ. ಹಾಗಿರುವಾಗ ಎಲ್ಲಾ ಮಕ್ಕಳೂ ಪಾಸಾಗಬೇಕೆಂದು ಅಪೇಕ್ಷಿಸುವುದು ಸರಿಯಲ್ಲ. ಉರುಹೊಡೆದು ಕಲಿತು ಒಂದಷ್ಟು ಬರೆದು ಹಾಗೂ ಹೀಗೂ ಪಾಸಾದವರದ್ದು ದೊಡ್ಡ ಸಾಧನೆಯೇನಲ್ಲ. ಫೇಲಾದವರು, ಫೇಲಾಗುವವರು ನಾಲಾಯಕ್ಕೂ ಅಲ್ಲ. ಕೇವಲ ಇಂತಹ ಒಂದು ಪರೀಕ್ಷೆಯಿಂದ ಒಬ್ಬನ ಸಾಮರ್ಥ್ಯ ನಿರ್ಧರಿಸುವುದು ತಪ್ಪು. ಅಲ್ಲದೇ ಒಂದರಿಂದ ಒಂಭತ್ತನೇ ತರಗತಿಯವರೆಗೆ ಯಾವುದೇ ಒತ್ತಡವಿಲ್ಲದೆ, ನಪಾಸಾಗುವ ಭಯವಿಲ್ಲದೆ ಕಲಿತವನಿಗೆ ಹತ್ತನೇ ತರಗತಿಯಲ್ಲಿ ಒತ್ತಡ ಹೇರುವುದು ತೀರಾ ಹಾಸ್ಯಾಸ್ಪದ. ಅಮಾನವೀಯ ಕೂಡಾ. ಫಲಿತಾಂಶಕ್ಕಿಂತ ಮಗು ದೊಡ್ಡದು. ಅದರ ಮನಸ್ಸು, ಜೀವ ದೊಡ್ಡದು. ಆ ಮನಸ್ಸು ಮುದುಡದಿರಲಿ. ಆ ಜೀವ ಮರೆಯಾಗದಿರಲಿ. ನಮ್ಮ ಟಾರ್ಗೆಟ್ ತಲುಪಲು ಮಗುವನ್ನು ಟಾರ್ಗೆಟ್ ಮಾಡದಿರೋಣ. ಹೆತ್ತವರು ಹೆಚ್ಚು ಜಾಗೃತರಾಗಬೇಕಾದ ಅಗತ್ಯವಿದೆ. ನಿಮ್ಮ ಮಗುವಿನ ನೈಜ ಸಾಮರ್ಥ್ಯ ಅರಿಯಿರಿ. ಅದಕ್ಕೆ ಅಸಾಧ್ಯವಾದುದನ್ನು ಸಾಧಿಸುವಂತೆ ಒತ್ತಾಯಿಸಬೇಡಿ. ಫಲಿತಾಂಶ ಉತ್ತಮಪಡಿಸಲು ಮುಂದಕ್ಕೆ ಅವಕಾಶಗಳಿರಬಹುದು. ಆದರೆ ಬದುಕಿರುವುದು ಒಂದೇ ಬಾರಿ. ನಿಮ್ಮ ಮಗುವನ್ನು ಅರಿತುಕೊಂಡು ಜೊತೆಗಿರಿ. ಅವರಿಗೆ ಧೈರ್ಯ ತುಂಬಿ, ಪ್ರೋತ್ಸಾಹಿಸಿ. ಅವರ ಸಾಮರ್ಥ್ಯವನ್ನು ಅಂಗೀಕರಿಸಿ, ಒಪ್ಪಿಕೊಳ್ಳಿ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಭವಿಷ್ಯದ ಒಂದಂಶ ನಿರ್ಧಾರವಾಗಬಹುದು ಆದರೆ ಇಡೀ ಬದುಕಲ್ಲ. ಪಾಸಾಗದವನ ಬದುಕು ಖಂಡಿತವಾಗಿ ಕತ್ತಲಾಗುವುದಿಲ್ಲ. ಪ್ರಯತ್ನ ಸಂಪೂರ್ಣ ವಾಗಿರುವಂತೆ ಮಕ್ಕಳಿಗೆ ಸ್ಫೂರ್ತಿ ತುಂಬಿ. ಪ್ರಯತ್ನದ ನಂತರ ಏನೇ ಬರಲಿ. ಇದ್ದುದನ್ನು ಇದ್ದ ಹಾಗೇ ಸ್ವೀಕರಿಸಲು ನೀವೂ ತಯಾರಾಗಿ. ನಿಮ್ಮ ಮಕ್ಕಳನ್ನೂ ಸಿದ್ಧಗೊಳಿಸಿ. ಜೆಸ್ಸಿ ಪಿ.ವಿ.