Advertisement

ಖಾತೆ ಹಂಚಿಕೆ ಗೊಂದಲಕ್ಕೆ ಸಿಲುಕಿರುವ ಮುಖ್ಯಮಂತ್ರಿ

11:39 PM Aug 21, 2019 | Lakshmi GovindaRaj |

ಬೆಂಗಳೂರು: 25 ದಿನಗಳ ನಂತರ ಸಂಪುಟ ವಿಸ್ತರಣೆ ಮಾಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಈಗ ಖಾತೆ ಹಂಚಿಕೆಯ ಸವಾಲು ಎದುರಾಗಿದೆ. ಅನರ್ಹಗೊಂಡ ಶಾಸಕರು ಮತ್ತು ಹಿರಿಯ ಸಚಿವರ ನಡುವಿನ ಪ್ರಮುಖ ಖಾತೆಗಳ ಬೇಡಿಕೆ ಪಟ್ಟಿಗೆ ಕಟ್ಟು ಬಿದ್ದಿರುವ ಕಾರಣ ಮುಖ್ಯಮಂತ್ರಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

Advertisement

ಮೈತ್ರಿ ಸರ್ಕಾರವನ್ನು ಉರುಳಿಸಲು ಬಂಡಾಯ ಸಾರಿದ್ದ ಅತೃಪ್ತ ಶಾಸಕರಿಗೆ ಬಿಜೆಪಿ ಸರ್ಕಾರ ಬರುವ ಮೊದಲೇ ಅವರು ಬಯಸಿದ ಖಾತೆ ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈಗ ಅವರು ಅನರ್ಹಗೊಂಡು ನೂತನ ಸಂಪುಟದಲ್ಲಿ ಸಚಿವರಾಗದೇ ಹೊರಗುಳಿದಿರುವುದರಿಂದ ಅವರ ವಿರುದ್ದ ಹಿಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೊರ್ಟ್‌ನಲ್ಲಿ ಪ್ರಶ್ನಿಸಿದ್ದರಿಂದ ಪ್ರಕರಣ ಇತ್ಯರ್ಥವಾಗುವವರೆಗೂ ಅವರು ಸಚಿವರಾಗಲು ಅವಕಾಶ ಇಲ್ಲ.

ಆದರೆ, ಈಗ ಯಡಿಯೂರಪ್ಪ ಅನರ್ಹರಿಗೆ ಸಂಪುಟದಲ್ಲಿ ಸ್ಥಾನಗಳನ್ನು ಖಾಲಿ ಇಟ್ಟುಕೊಂಡೇ ಸಂಪುಟ ರಚನೆ ಮಾಡಿದ್ದಾರೆ. ಆದರೆ, ಅನರ್ಹರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಮುಖ ಖಾತೆಗಳನ್ನು ಅವರಿಗೇ ಮೀಸಲಿಡುವ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್‌, ಅಶೋಕ್‌, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ್‌, ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಿರಿಯ ಸಚಿವರು ಪ್ರಮುಖ ಖಾತೆಗಳಾದ ಕಂದಾಯ, ಗೃಹ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಇಂಧನ, ಲೋಕೋಪಯೋಗಿ, ಕೃಷಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹದಿನೇಳು ಅನರ್ಹ ಶಾಸಕರಲ್ಲಿ ಕನಿಷ್ಠ ಹತ್ತು ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕಿರುವುದರಿಂದ ಅವರಿಗೆ ಭರವಸೆ ನೀಡಿದ್ದ ಖಾತೆಗಳನ್ನು ಹೊರತುಪಡಿಸಿ ಖಾತೆ ಹಂಚಿಕೆ ಮಾಡಬೇಕಿರುವುದರಿಂದ ವಿಳಂಬವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅವರ ಮಾತಿಗೆ ಕಟ್ಟು ಬಿದ್ದರೆ, ಹಿರಿಯ ಸಚಿವರಿಗೆ ಪ್ರಮುಖ ಖಾತೆ ತಪ್ಪುವ ಸಾಧ್ಯತೆ ಇದೆ. ಹಿರಿಯ ಸಚಿವರೂ ಕೂಡ ಪ್ರಬಲ ಖಾತೆಗಳಿಗೆ ಈಗಾಗಲೇ ಯಡಿಯೂರಪ್ಪ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರ ನಡುವಿನ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿಯವರು ಖಾತೆ ಹಂಚಿಕೆಯಲ್ಲಿ ಇನ್ನೂ ಗೊಂದಲದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅನರ್ಹ ಶಾಸಕರ ಒಪ್ಪಂದ: ಮೈತ್ರಿ ಸರ್ಕಾರವನ್ನು ಉರುಳಿಸಲು ಬಂಡಾಯ ಸಾರಿ ಮುಂಬೈಗೆ ತೆರಳಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರಲ್ಲಿ ಬಹುತೇಕರು ಪ್ರಮುಖ ಖಾತೆ ನೀಡಬೇಕೆಂದು ಬಿಜೆಪಿ ನಾಯಕರ ಜೊತೆಗೆ ಮೌಖೀಕ ಒಪ್ಪಂದ ಮಾಡಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಬಂಡಾಯ ಶಾಸಕರ ನಾಯಕರಾಗಿರುವ ರಮೇಶ್‌ ಜಾರಕಿಹೊಳಿಯವರು ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಜಲ ಸಂಪನ್ಮೂಲ ಖಾತೆಯನ್ನೇ ನೀಡಬೇಕೆಂದು ಬಿಜೆಪಿ ನಾಯಕರ ಜೊತೆಗೆ ಅಲಿಖೀತ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಬಿ.ಸಿ.ಪಾಟೀಲ್‌ -ಗೃಹ ಇಲಾಖೆ, ಶಿವರಾಮ್‌ ಹೆಬ್ಟಾರ್‌ -ಸಾರಿಗೆ, ಎಸ್‌.ಟಿ. ಸೋಮಶೇಖರ್‌ -ಬೆಂಗಳೂರು ನಗರಾಭಿವೃದ್ಧಿ, ಎಚ್‌.ವಿಶ್ವನಾಥ್‌ -ಉನ್ನತ ಶಿಕ್ಷಣ ಅಥವಾ ಕಂದಾಯ, ಪ್ರತಾಪ್‌ಗೌಡ ಪಾಟೀಲ್‌ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಆರ್‌. ಶಂಕರ್‌ -ಅರಣ್ಯ, ಬೈರತಿ ಬಸವರಾಜ್‌ -ಲೋಕೋ ಪ ಯೋಗಿ ಇಲಾಖೆಯನ್ನು ನೀಡಬೇಕೆಂದು ಅಧಿಕೃತ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಅವರೊಂದಿಗೆ ಡಾ. ಸುಧಾ ಕರ್‌, ಆನಂದ್‌ ಸಿಂಗ್‌ ಕೂಡ ಇಂಥದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿಯದಿದ್ದರೂ ಪ್ರಮುಖ ಖಾತೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಅನರ್ಹ ಶಾಸಕ ಗೋಪಾಲಯ್ಯ ತಮ್ಮ ಪತ್ನಿಯನ್ನು ಬಿಬಿಎಂಪಿ ಮೇಯರ್‌ ಮಾಡು ವುದರ ಜೊತೆಗೆ ಮಂತ್ರಿಮಂಡಲದಲ್ಲಿ ಪ್ರಬಲ ಖಾತೆ ನೀಡಬೇಕೆಂದು ಕೇಳಿ ಕೊಂಡಿದ್ದರು ಎನ್ನಲಾಗಿದೆ. ಅನರ್ಹರು ಬಂಡಾಯವೆದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಬಂದ ತಕ್ಷಣವೇ ಮೊದಲ ಸಂಪುಟ ರಚನೆ ಸಂದರ್ಭದಲ್ಲಿಯೇ ಅನರ್ಹರಿಗೆ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next