Advertisement

ತೆರೆಮೇಲೂ ಮುಂದುವರೆದ ಚೇತನ್‌ ಹೋರಾಟ

10:00 AM Dec 30, 2019 | Lakshmi GovindaRaj |

“ಆ ದಿನಗಳು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪರಿಚಯವಾದ ನಟ ಚೇತನ್‌ ಕುಮಾರ್‌, ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಜೊತೆಗೆ ಬೇರೆ ಬೇರೆ ವಿಷಯಗಳಿಗೂ ಆಗಾಗ್ಗೆ ಸುದ್ದಿಯಾಗುವ ನಟ. ಅದರಲ್ಲೂ “ಮೈನಾ’ ಚಿತ್ರದ ನಂತರವಂತೂ ಚೇತನ್‌ ಹೆಸರು ಸಿನಿಮಾಗಳಿಗಿಂತ ಹೋರಾಟ, ಪ್ರತಿಭಟನೆ, ಚಳುವಳಿಗಳಲ್ಲಿ ಕೇಳಿ ಬಂದಿದ್ದೆ ಹೆಚ್ಚು ಎನ್ನಬಹುದು. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಚೇತನ್‌ ಅಭಿನಯದ “ನೂರೊಂದು ನೆನಪು, “ಅತಿರಥ’ ಚಿತ್ರಗಳು ತೆರೆಕಂಡಿದ್ದು, ಮತ್ತೊಂದು ಚಿತ್ರ “ರಣಂ’ ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿದೆ.

Advertisement

ಇನ್ನು “ರಣಂ’ ಚಿತ್ರದಲ್ಲಿ ಚೇತನ್‌ ಅವರದ್ದು ಹೋರಾಟಗಾರನ ಪಾತ್ರವಂತೆ. ಇತ್ತೀಚೆಗಷ್ಟೆ “ರಣಂ’ ಚಿತ್ರದ ಆಡಿಯೋ ಹೊರಬಂದಿದ್ದು, ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಚೇತನ್‌ ಕುಮಾರ್‌, ಚಿತ್ರದಲ್ಲಿ ತಮ್ಮ ಪಾತ್ರ, ತಮ್ಮ ಸಿನಿಮಾ, ಹೋರಾಟ ಮತ್ತಿತರ ಕೆಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. “ನಾನು ನಿಜ ಜೀವನದಲ್ಲೂ ಹೋರಾಟಗಾರ. ಕೃಷಿ ವಿಶ್ವವಿದ್ಯಾಲಯ ಖಾಸಗೀಕರಣ, ಮಹದಾಯಿ ಹೋರಾಟ, ಆದಿವಾಸಿಗಳ ಒಕ್ಕಲೆಬ್ಬಿಸುವುದು ಹೀಗೆ ರಾಜ್ಯದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದೇನೆ.

“ರಣಂ’ ಚಿತ್ರದಲ್ಲೂ ಅಂಥದ್ದೇ ಒಂದು ಪಾತ್ರ ಸಿಕ್ಕಿದೆ. ನನ್ನ ಪಾತ್ರದ ಹೆಸರೇ ಸತ್ಯಾಗ್ರಹಿ ಅಂಥ. ಯಾವಾಗಲೂ ರೈತರ ಪರವಾಗಿ, ಅವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವಂಥ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹುಶಃ ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾ ಗಿರುವ ಮತ್ತು ನನ್ನ ನಿಜ ಜೀವನಕ್ಕೆ ತೀರಾ ಹತ್ತಿರವಿರುವಂಥ ಪಾತ್ರವಿದು’ ಎಂದು ತಮ್ಮ ಪಾತ್ರದ ವಿವರಣೆ ಕೊಡುತ್ತಾರೆ ಚೇತನ್‌ ಕುಮಾರ್‌.

ಇನ್ನು ಕೆಲ ವರ್ಷಗಳಿಂದ ಚೇತನ್‌ ಕುಮಾರ್‌ ಅವರ ಸಾಮಾಜಿಕ ಹೋರಾಟಗಳನ್ನು ಹತ್ತಿರದಿಂದ ನೋಡುತ್ತ ಬಂದ ನಿರ್ಮಾಪಕ ಕನಕಪುರ ಶ್ರೀನಿವಾಸ್‌, ನಿರ್ದೇ ಶಕ ಶ್ರೀಸಮುದ್ರ ಚಿತ್ರಕ್ಕೆ ಹೋರಾಟ ಗಾರನ ಪಾತ್ರಕ್ಕೆ ಚೇತನ್‌ ಕುಮಾರ್‌ ಅವರೇ ಸೂಕ್ತ ಎನ್ನುವ ಕಾರಣಕ್ಕೆ ಅವರನ್ನೆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. “ಸಾಮಾನ್ಯವಾಗಿ ಸಿನಿಮಾದ ನಟರು, ಸಿನಿಮಾ ಇಷ್ಟವಾದ ಕಾರಣಕ್ಕೋ, ಅದು ಹಿಟ್‌ ಆದ ಕಾರಣಕ್ಕೊ, ಬೇರೆ ಏನೇನೋ ಕಾರಣಕ್ಕೆ ಜನ ಅವರನ್ನು ಇಷ್ಟಪಡುತ್ತಾರೆ.

ನಟರು ಹೀರೋಗಳಾಗ್ತಾರೆ. ಆದರೆ ಒಬ್ಬ ನಿಜವಾದ ಹೀರೋನ ಗುಣಗಳನ್ನು ಇಟ್ಟುಕೊಂಡು ಹೀರೋ ಆಗುವ ಅವಕಾಶ ಸಿಗೋದು ಅಪರೂಪ. ಅಂಥದ್ದೊಂದು ಅಪರೂಪದ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ’ ಎನ್ನುವ ಚೇತನ್‌ ಕುಮಾರ್‌, “ಸುಮಾರು ಒಂದೂವರೆ ವರ್ಷದ ಹಿಂದೆ ನಿರ್ಮಾಪಕರು ಮತ್ತು ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯ್ತು. ಹಾಗಾಗಿ ಒಪ್ಪಿಕೊಂಡೆ. ಆದ್ರೆ ಸಿನಿಮಾದ ಶೂಟಿಂಗ್‌ ಮುಗಿದು, ಡಬ್ಬಿಂಗ್‌ ಹಂತದಲ್ಲಿ ನೋಡಿದಾಗ ಚಿತ್ರದಲ್ಲಿ ನನ್ನ ಪಾತ್ರದ ತೂಕ ಏನು ಅಂಥ ಅರ್ಥವಾಯ್ತು.

Advertisement

ಸಿನಿಮಾ ನೋಡಿದಾಗ ಅದು ಎಷ್ಟೊಂದು ಗಾಢವಾಗಿ ಪರಿಣಾಮ ಬೀರುವ ಪಾತ್ರ ಅಂಥ ನೋಡುಗರಿಗೆ ಅರ್ಥವಾಗುತ್ತೆ’ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಪಾತ್ರ ಮಾಡಿರುವ ಖುಷಿಯಲ್ಲಿರುವ ಚೇತನ್‌ ಕುಮಾರ್‌, “ಕಲೆ ಮತ್ತು ಸಿನಿಮಾರಂಗದ ಮೂಲಕ ಒಂದಷ್ಟು ಸಾಮಾಜಿಕ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಸುಮಾರು 14 ವರ್ಷಗಳ ಹಿಂದೆ ಅಮೆರಿಕಾ ಬಿಟ್ಟು ಕರ್ನಾಟಕಕ್ಕೆ ಬಂದೆ. ಇಂದಿಗೂ ಕಲೆ, ಸಿನಿಮಾ ಮತ್ತು ಹೋರಾಟಗಳಲ್ಲೆ ನನ್ನನ್ನು ತೊಡಗಿಸಿಕೊಂಡಿದ್ದೇನೆ. “ರಣಂ’ ಚಿತ್ರದಲ್ಲೂ ರೈತರ ಸಮಸ್ಯೆ, ಅದಕ್ಕಿರುವ ಪರಿಹಾರ, ಬಂಡವಾಳ ಶಾಹಿ ನೀತಿ, ರಾಜಕೀಯ ನಡೆ, ಶ್ರಮಿಕ ವರ್ಗದ ಮೇಲಾಗುತ್ತಿರುವ ದಬ್ಬಾಳಿಕೆ ಹೀಗೆ ಹತ್ತು ಹಲವು ವಿಷಯಗಳ ಚಿತ್ರಣವಿದೆ.

ನನ್ನ ಉದ್ದೇಶ ಕೂಡ ಇಂಥ ಚಿತ್ರಗಳನ್ನು ಮಾಡಬೇಕು ಅನ್ನೋದಾಗಿದೆ’ ಎನ್ನುತ್ತಾರೆ. ಅಂದಹಾಗೆ, ಸದ್ಯ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ “ರಣಂ’ ಚಿತ್ರ ಮುಂಬರುವ ಜನವರಿ ಅಂತ್ಯಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ, ನಿಮಿಕಾ ರತ್ನಾಕರ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ ಆಫ್ ದಿ ಸ್ಕ್ರೀನ್‌ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್‌ ಕುಮಾರ್‌ ಆನ್‌ ಸ್ಕ್ರೀನ್‌ ಮೇಲೂ ಹೋರಾಟಗಾರನಾಗಿ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು “ರಣಂ’ ಚಿತ್ರ ಬಿಡುಗಡೆಯಾದ ಮೇಲಷ್ಟೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next