ದಿ ಚೆಕ್ ಮೇಟ್ ಇದು ಮೊದಲನೇ ಸುತ್ತಿ ನ ಆಟ “ದಿ ಚೆಕ್ ಮೇಟ್ ‘ – ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಭಾರತೀಶ ವಸಿಷ್ಠ ಹಾಗೂ ಸಂತೋಷ ಚಿಪ್ಪಾಡಿ ಈ ಚಿತ್ರದ ನಿರ್ದೇಶಕರು. “ರೌಂಡ್ ಓನ್ ಪ್ಲೇ ದ ಗೇಮ್’ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ. “ಜಗದ್ ಜ್ಯೋತಿ ಮೂವಿ ಮೇಕರ್ ‘ ಬ್ಯಾನರ್ ಅಡಿಯಲ್ಲಿ ರಂಜನ್ ಹಾಸನ್ ಬಂಡವಾಳ ಹೂಡಿರುವ ಚಿತ್ರ, ತನ್ನ ಶೂಟಿಂಗ್, ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ ಮೊದಲ ಹಂತವಾಗಿ, ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆಗೊಳಿಸಿದೆ. ಚಿತ್ರ ನಿರ್ಮಾಪಕ ಕಂ ನಾಯಕ ರಂಜನ್ ಹಾಸನ್ ಮಾತನಾಡಿ, “ಚದುರಂಗ ಅಂದರೆ ಬುದ್ಧಿವಂತರ ಆಟ ಎಂದೇ ಪ್ರಖ್ಯಾತಿ. ಚೆಸ್ ಆಧಾರವಾಗಿಟ್ಟುಕೊಂಡು ತಯಾರಿಸಿದ ಕಥೆ “ದಿ ಚೆಕ್ ಮೇಟ್’. ಹೊಸ ಬಗೆಯ ಚಿತ್ರ ನಮ್ಮದು. ನಿರ್ದೇಶಕರು ಮೊದಲು ಕಥೆ ಹೇಳಿದಾಗಲೇ ಭಿನ್ನ ಅನಿಸಿತ್ತು. ನಂತರ ಅವರ ಕೆಲಸ ನೋಡಿ ಕನ್‌ಫರ್ಮ್ ಆಯಿತು. ಪ್ರೀತಿ, ಸ್ನೇಹ, ಬದುಕು ಈ ಮೂರು ಅಂಶಗಳನ್ನು ಇಟ್ಟು ಚಿತ್ರ ಮಾಡಿದ್ದೇವೆ. ಕೊರೊನಾ ಮೊದಲ ಲಾಕ್‌ಡೌನ್‌ನಲ್ಲಿ ಅರ್ಧಗೊಳಿಸಿದ್ದ ಚಿತ್ರವನ್ನು, ಎರಡನೇ ಲಾಕ್‌ಡೌನ್ ನಂತರ ಪೂರ್ಣಗೊಳಿಸಿ, ಈಗ ಸೆನ್ಸಾರ್ ಆಗಿ,ಅಕ್ಟೋಬರ್ 7 ರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಇದು ಕೇವಲ ಚಿತ್ರದ ಮೊದಲನೇ ಭಾಗ. ಎರಡನೇ ಭಾಗ ಬಾಕಿ ಇದೆ’ ಎಂದರು.
ಚಿತ್ರ ನಿರ್ದೇಶಕರಲ್ಲೊಬ್ಬರಾದ ಭಾರತೀಶ ವಸಿಷ್ಠ ಮಾತನಾಡಿ, “ಸ್ನೇಹ, ಪ್ರೀತಿ ಬದುಕು ಇವುಗಳಲ್ಲಿ ಯಾವುದು ಪ್ರಮುಖ ಎಂದು ನಿರ್ಧರಿಸುವುದು ಕಷ್ಟ. ಬದುಕಿನ ಸಂದರ್ಭಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಇದನ್ನ ಹೇಳಹೊರಟಿರುವ ಕಥೆಯೇ ದಿ ಚೆಕ್ ಮೇಟ್. ಇನ್ನು ಚಿತ್ರ ಕಥೆ ಬಗ್ಗೆ ಹೇಳುವುದಾದರೆ, ನಾಲ್ಕು ಜನ ಸ್ನೇಹಿತರು ತಮ್ಮ ತಮ್ಮ ಬ್ರೇಕಪ್ ಪಾರ್ಟಿ ಮಾಡಲು ಒಂದೆಡೆ ಸೇರಿದಾಗ, ಅಲ್ಲಿ ನಡೆಯುವ ವಿಚಿತ್ರ ಅನುಭವಗಳು, ಚದುರಂಗದ ಆಟ, ಅದರ ಫಲಿತಾಂಶ ಏನು ಎಂಬುದೇ ಈ ಕಥೆ. ಚದುರಂಗದ ಜೊತೆಯಲ್ಲಿ ಕುತೂಹಲಕಾರಿಯಾಗಿ ಕಥೆ ಸಾಗಲಿದೆ’ ಎಂದರು.
ರಂಜನ್ ಹಾಸನ್ ನಾಯಕನಾಗಿ ಅಭಿನಯಿಸಿದ್ದು, ಪ್ರೀತು ಪೂಜಾ ನಾಯಕಿಯಾಗಿದ್ದಾರೆ. ನೀನಾಸಂ ಅಶ್ವತ್ಥ್, ವಿಶ್ವ ವಿಜೇತ್, ಸುಧೀರ್ ಕಾಕ್ರೋಚ್, ಪ್ರದೀಪ್ ಪೂಜಾರಿ, ಸರ್ದಾರ್ ಸತ್ಯ, ವಿಜಯ್ ಚೆಂಡೂರು, ಚಿಲ್ಲರ್ ಮಂಜು, ಕಾರ್ತಿಕ್ ಹುಲಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಈ .ಎಸ್. ಈಶ್ವರ್, ಸುನೀಲ್ ಕಶ್ಯಪ್ ಸಂಕಲನ, ಶಶಾಂಕ್ ಶೇಶಗಿರಿ ಸಂಗಿತ, ವೈಲೆಂಟ್ ವೇಲು ಸಾಹಸ ನಿರ್ದೇಶನ ಚಿತ್ರಕ್ಕಿದೆ.