Advertisement
ಚಂದ್ರಶೇಖರ ಶ್ರೀಗಳ ಪುಣ್ಯಾರಾಧನೆ, ಲಿಂ| ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಸಂದರ್ಭದಲ್ಲಿ ಮೇ 2ರಂದು ಶ್ರೀಮಠದ ಜಾತ್ರಾ ಮಹೋತ್ಸವಕ್ಕಾಗಿ ಇದೇ ಮೊದಲ ಬಾರಿಗೆ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ ಹಮ್ಮಿಕೊಳ್ಳಲಾಗಿದೆ.
Related Articles
Advertisement
ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ಎಲ್ಲ ಗ್ರಾಮಗಳಂತೆ ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಪದ್ಧತಿ ಇಲ್ಲಿ ಇಲ್ಲ. ಬದಲಾಗಿ ಜಾತ್ರೆ ಸಂದರ್ಭದಲ್ಲಿ ಮಠದ ಬಳಿ ಇರುವ ಆಲದ ಮರಕ್ಕೆ ಜೋಳಿಗೆಯೊಂದನ್ನು ಕಟ್ಟಿರುತ್ತಾರೆ. 4-5 ದಿನ ಕಟ್ಟಲಾಗುವ ಈ ಜೋಳಿಗೆಗೆ ಭಕ್ತರು ತಮ್ಮಿಷ್ಟದಂತೆ ದೇಣಿಗೆ ಹಾಕುವುದು ಇಲ್ಲಿಯ ವಾಡಿಕೆಯಾಗಿದೆ.
ಕೇವಲ 7-8 ವರ್ಷಗಳ ಹಿಂದಿನಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಹಿಂದಿನಿಂದಲೂ ಈ ಗ್ರಾಮದಲ್ಲಿ ಬದುಕನ್ನು ಅರಸಿ ಗುಳೆ ಹೋಗುವುದು ಸಂಗಾಪುರ ಎಸ್.ಎಚ್. ಗ್ರಾಮಸ್ಥರಿಗೆ ಅನಿವಾರ್ಯವಾಗಿತ್ತು. ಪರಿಣಾಮ ರೈತರು ಕೂಡ ಆರ್ಥಿಕ ಸಂಕಷ್ಟದಿಂದ ಸಾಲದ ಸುಳಿಗೂ ಸಿಲುಕಿದ್ದರು. ಆದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ನೀರಾವರಿ ಯೋಜನೆ ಕಲ್ಪಿಸಿದ್ದರಿಂದ ಇದೀಗ ಈ ಭಾಗದಲ್ಲಿ ನೀರಾವರಿ ಸಮೃದ್ಧಿಯಾಗಿದೆ.
ಕೃಷಿಯಿಂದ ಆರ್ಥಿಕ ಶಕ್ತಿ ವೃದ್ಧಿಸಿಕೊಂಡಿರುವ ರೈತರು ಸಂತಸದಿಂಧ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮ್ಮೂರಿಗೆ ಬರದ ಅಪಕೀರ್ತಿ ಅಳಿಸಿ ಹಾಕಿ, ಸಮೃದ್ಧ ಜೀವನ ಕಟ್ಟಿಕೊಳ್ಳಲು ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರನ್ನು ಗ್ರಾಮದಲ್ಲಿ ಎಳೆಯುವ ಮೊದಲ ರಥೋತ್ಸವಕ್ಕೆ ಆಹ್ವಾನಿಸಿದ್ದು, ಅವರಿಂದಲೇ ಚಾಲನೆ ಕೊಡಿಸಲು ನಿರ್ಧರಿಸಿದ್ದಾರೆ.
ಅನ್ಯ ಊರಿನವರಿಂದ 1 ರೂ. ದೇಣಿಗೆ ಪಡೆಯದೇ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಸಂಗ್ರಹಿಸಿರುವ ದೇಣಿಗೆ ಹಣದಲ್ಲಿ ರಥ ನಿರ್ಮಾಣಗೊಂಡಿದೆ. ಇದು ನಮ್ಮೂರ ಭಕ್ತರಲ್ಲಿ ಆತ್ಮವಿಶ್ವಾಸ, ದೈವಸಾಕ್ಷಾತ್ಕಾರದ ಪ್ರತೀಕ. ನಮ್ಮೂರ ಅನ್ನದಾತನ ನೆಲಕ್ಕೆ ಹರಿದ ಕೃಷ್ಣೆಯಿಂದ ಸ್ವಾಭಿಮಾನ ಮೈಗೂಡಿದ್ದು, ಸ್ವಾಭಿಮಾನದ ರಥದ ಮೂಲಕ ಗ್ರಾಮ ಸಮೃದ್ಧಿಯನ್ನು ಸಂಕೇತಿಸುತ್ತಿದ್ದಾರೆ. -ಅಭಿನವ ಸಿದ್ಧಲಿಂಗ ಶ್ರೀಗಳು, ಶ್ರೀಸಿದ್ಧಲಿಂಗೇಶ್ವರ ಕಮರಿಮಠ, ಸಂಗಾಪುರ ಎಸ್.ಎಚ್
ತಮ್ಮ ಸ್ವಾಭಿಮಾನದ ಜೀವನಕ್ಕೆ ನಾಂದಿ ಹಾಡಲು ತಮ್ಮೂರಿಗೆ ಗಂಗೆಯನ್ನು ಹರಿಸಿದ ಜನನಾಯಕರನ್ನು ಕರೆಸಿ, ಅವರಿಂದಲೇ ನೂತನ ರಥೋತ್ಸವಕ್ಕೆ ಚಾಲನೆ ಕೊಡಿಸುತ್ತಿದ್ದಾರೆ. ಅನ್ನದಾತ ಸದಾ ಕೃತಜ್ಞನಾ ಜೀವಿ ಹಾಗೂ ಉಪಕಾರ ಸ್ಮರಣೆಯ ವ್ಯಕ್ತಿ ಎಂಬುದರ ಪ್ರತೀಕ. -ಡಾ| ಮಹಾಂತೇಶ ಬಿರಾದಾರ, ವಿಜಯಪುರ
ಗುಳೆ ಹೋಗುತ್ತಿದ್ದ ನಮ್ಮೂರು ನೀರಾವರಿ ಕಂಡಿದ್ದು, ಸಮೃದ್ಧ ಲಕ್ಷ್ಮೀ ಮನೆ ಮಾಡಿದ್ದಾಳೆ. ಹೀಗಾಗಿ ನಮ್ಮೂರ ರಥಕ್ಕೆ ನಮ್ಮೂರಿನ ಜನ ಮಾತ್ರವೇ ದೇಣಿಗೆ ಸಂಗ್ರಹಿಸಿ ರಥ ನಿರ್ಮಿಸಿದ್ದೇವೆ. -ರಮೇಶ ಶಂಕ್ರೆಪ್ಪ, ರೈತ
-ಜಿ.ಎಸ್. ಕಮತರ