Advertisement

ತಾರಕಕ್ಕೇರಿದ “ಸಹೋದರರ ಸವಾಲ್‌’

11:19 PM Sep 07, 2019 | Team Udayavani |

ಗೋಕಾಕ: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಂಪುಟ ರಚನೆಯಾದ ಬೆನ್ನಲ್ಲೇ ಜಾರಕಿಹೊಳಿ ಸೋದರರ ರಾಜಕೀಯ ವಾಗ್ಧಾಳಿ ತಾರಕ್ಕೇರಿದೆ. “ಸತೀಶ ಜಾರಕಿಹೊಳಿ ಕುತಂತ್ರಿ, ಮಹಾ ಮೋಸಗಾರ ರಾಜಕಾರಣಿ’ ಎಂದು ರಮೇಶ್‌ ಜಾರಕಿಹೊಳಿ ಆರೋಪಿಸಿದರೆ, “ರಮೇಶ್‌ ಜಾರಕಿಹೊಳಿ ಸೀರಿಯಸ್‌ ರಾಜಕಾರಣಿ ಅಲ್ಲ. ಪ್ರಬುದ್ಧತೆ ಅವರಿಗಿನ್ನೂ ಬಂದಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

Advertisement

ಶನಿವಾರ ಅಭಿಮಾನಿಗಳ ಬಳಗದಿಂದ ಏರ್ಪಡಿಸಲಾಗಿದ್ದ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅನರ್ಹ ಶಾಸಕ ರಮೇಶ ಜಾರಕಿಹೊಳಿ, ತಮ್ಮ 21 ನಿಮಿಷಗಳ ಭಾಷಣದಲ್ಲಿ ಬಹುತೇಕ ಸಮಯ ಸತೀಶ ವಿರುದ್ಧ ಟೀಕೆಗೆ ಮೀಸಲಿಟ್ಟರು. ಗೋಕಾಕದಲ್ಲಿ ಮುಂದಿನ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದ ಜನರು ತಮ್ಮನ್ನು ಒಧ್ದೋಡಿಸುತ್ತಾರೆ ಎಂಬುದು ಅವರಿಗೆ ಗೊತ್ತಾಗಿದೆ.

ಇದಕ್ಕಾಗಿಯೇ ಮೇಲಿಂದ ಮೇಲೆ ಗೋಕಾಕಕ್ಕೆ ಬರುತ್ತಿದ್ದಾರೆ. ನಿಮಗೂ ಮೋಸ ಮಾಡುತ್ತಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು. ಜಾರಕಿಹೊಳಿ ಕುಟುಂಬದಲ್ಲಿಯೇ ಹುಟ್ಟಿ ಸಹೋದರರ ಮಧ್ಯೆ ಹುಳಿ ಹಿಂಡುತ್ತಿರುವ ಸತೀಶ, 2008ರಲ್ಲಿ ಸಹೋದರ ಭೀಮಶಿ ಜಾರಕಿಹೊಳಿ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಅದರಲ್ಲಿ ಯಶಸ್ಸು ಕಾಣದೇ ಈಗ ಮತ್ತೂಬ್ಬ ಸಹೋದರ ಲಖನ್‌ ಜಾರಕಿಹೊಳಿ ಅವರನ್ನು ಎತ್ತಿ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಹಾಗೂ ಲಖನ್‌ ಅವರನ್ನು ಸೋಲಿಸಲು ಸತೀಶ ಗೋಕಾಕ ಕ್ಷೇತ್ರಕ್ಕೆ ಬರುವ ಆಲೋಚನೆ ಮಾಡಿದ್ದಾರೆ. ಇದಕ್ಕೆ ಲಖನ್‌ ಅವರನ್ನು ಬಲಿ ಪಶುಮಾಡಲು ಹೊರಟಿದ್ದಾರೆ. ಆದರೆ ಕ್ಷೇತ್ರದ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

“ಮತ್ತೆ ಕಾಂಗ್ರೆಸ್‌ ಶಾಸಕರ ರಾಜೀನಾಮೆ’
ಗೋಕಾಕ: ಕಾಂಗ್ರೆಸ್‌ ಪಕ್ಷದ ಇನ್ನೂ 10-15 ಶಾಸಕರು ಶೀಘ್ರವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಲಿದ್ದಾರೆ ಎಂದು ರಮೇಶ ಜಾರಕಿ ಹೊಳಿ ಹೇಳಿದರು. ಕಾಂಗ್ರೆಸ್‌ನಲ್ಲಿ ಅಸಮಾ ಧಾನ ಇನ್ನೂ ಆರಿಲ್ಲ. ಈಗ 20 ಶಾಸಕರು ರಾಜೀ ನಾಮೆ ನೀಡಿದ್ದೇವೆ. ಬರುವ ದಿನಗಳಲ್ಲಿ ಮತ್ತಷ್ಟು ಮಂದಿ ನಮ್ಮ ಜತೆಗೆ ಬರೋಕೆ ಸಿದ್ಧರಿದ್ದಾರೆ ಎಂದರು.

Advertisement

20 ವರ್ಷ ಶಾಸಕನಾದರೂ ಸಾಲದಲ್ಲಿದ್ದೇನೆ: ಗೋಕಾಕ ಕ್ಷೇತ್ರದ ಜನರ ಆಶೀರ್ವಾದದಿಂದ ಕಳೆದ 20 ವರ್ಷಗಳಿಂದ ಶಾಸಕನಾಗುತ್ತ ಬಂದಿದ್ದೇನೆ. ಒಂದು ಬಾರಿ ಶಾಸಕರಾದವರು ಇಂದು ಆರ್ಥಿಕವಾಗಿ ಬಹಳ ಸದೃಢರಾಗಿದ್ದಾರೆ. ಆದರೆ, ನಾನು ಕಳೆದ 20 ವರ್ಷಗಳಿಂದ ಶಾಸಕನಾಗಿದ್ದರೂ ಇದುವರೆಗೆ ಸಾಲದ ಸುಳಿಯಿಂದ ಹೊರ ಬಂದಿಲ್ಲ ಎಂದರು.

ರಮೇಶ ಜಾರಕಿಹೊಳಿಗಿಲ್ಲ ಪ್ರಬುದ್ಧತೆ: ಸತೀಶ ಟಾಂಗ್‌
ಬೆಳಗಾವಿ: ಗೋಕಾಕ್‌ನ ಅನರ್ಹ ಶಾಸಕ, ಸಹೋದರ ರಮೇಶ ಜಾರಕಿಹೊಳಿ ಐದು ಬಾರಿ ಗೆದ್ದು ಶಾಸಕರಾಗಿದ್ದರೂ, ಅವರಿಗೆ ರಾಜಕೀಯ ಅನುಭವ ಕಡಿಮೆ. ಅವರು ಸೀರಿಯಸ್‌ ರಾಜಕಾರಣಿ ಅಲ್ಲ. ಪ್ರಬುದ್ಧತೆ ಅವರಿಗಿನ್ನೂ ಬಂದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಜನರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಇಂಥ ಸ್ಥಿತಿಯಲ್ಲಿ ರಮೇಶ ಸಂಕಲ್ಪ ಸಮಾವೇಶ ಆಯೋಜಿಸಿರುವುದು ಸರಿಯಲ್ಲ. ಅವರಿಗೆ ಜನರ ಕಷ್ಟಕ್ಕಿಂತ ತಮ್ಮ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ದೂರಿದರು. ಗೋಕಾಕ ಕ್ಷೇತ್ರಕ್ಕೆ ಶೀಘ್ರ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಖನ್‌ ಜಾರಕಿಹೊಳಿ ಸ್ಪ ರ್ಧಿಸುವುದು ನಿಶ್ಚಿತ. ಲಖನ್‌ ಒಬ್ಬರೇ ಆಕಾಂಕ್ಷಿ ಆಗಿರುವುದರಿಂದ ಅವರ ಹೆಸರನ್ನೇ ಅಂತಿಮಗೊಳಿಸಲಾಗುವುದು.

ಸಮ್ಮಿಶ್ರ ಸರ್ಕಾರ ಪತನಕ್ಕೆ ಸತೀಶ, ಪಾಟೀಲ್‌ ಹೊಣೆ: ಸಮ್ಮಿಶ್ರ ಸರಕಾರ ಪತನವಾಗಲು, ಆಪರೇಷನ್‌ ಕಮಲ ನಡೆಯಲು ಸತೀಶ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್‌ ಕಾರಣ. ಇದಕ್ಕೆ ನಾನು ಗೋಕಾಕ ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧ ಎಂದು ರಮೇಶ ಜಾರಕಿಹೊಳಿ ಹೇಳಿದರು. ಅಪ ರೇಷನ್‌ ಕಮಲದ ಸಮಯದಲ್ಲಿ ನಾನು ಮೈತ್ರಿ ಸರಕಾರದಿಂದ ದೂರ ಉಳಿದ ಸಂದರ್ಭ ಅನೇಕರು ಪ್ರತಿ ದಿನ ನನ್ನ ಮನೆಗೆ ಬಂದು ಚಹಾ ಕುಡಿದರು. ತಿಂಡಿ ತಿಂದರು. ಅಂಥವರಲ್ಲಿ ಏಳು ಜನ ಸಚಿವರಾದರು. 10ಕ್ಕೂ ಹೆಚ್ಚು ಜನ ನಿಗಮ-ಮಂಡಳಿ ಅಧ್ಯಕ್ಷರಾದರು. ಆದರೆ ನಾನು ಎಂದಿಗೂ ಮಂತ್ರಿಗಿರಿಗೆ ಆಸೆ ಮಾಡಲಿಲ್ಲ ಎಂದು ರಮೇಶ ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅವರನ್ನು ಭೇಟಿ ಮಾಡುತ್ತೇನೆ. ರಾಜಕಾರಣ ಬೇರೆ ವೈಯಕ್ತಿಕ ಸಂಬಂಧ ಬೇರೆ. ನಾನು ಎಂದಿಗೂ ಅವರಿಗೆ ಕೇಡು ಬಯಸುವುದಿಲ್ಲ. ಅವರು ಕಾನೂನು ಹೋರಾಟದಲ್ಲಿ ಗೆದ್ದು ಬರಲಿ ಎಂದು ಹಾರೈಸುತ್ತೇನೆ.
-ರಮೇಶ ಜಾರಕಿಹೊಳಿ, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next