ಬೆಂಗಳೂರು: ಕೋವಿಡ್ ಮಹಾಮಾರಿಯ ಎದುರು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಇಂಗ್ಲಿಷ್ ಪರೀಕ್ಷೆ ಹೇಗೆ ನಡೆಸಬೇಕು ಎಂಬುದೇ ಸರ್ಕಾರಕ್ಕೆ ಸವಾಲಾಗಿದೆ. ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹೊತುಪಡಿಸಿ ಬೇರೆಲ್ಲ ಪರೀಕ್ಷೆ ಪೂರ್ಣಗೊಂಡಿದೆ. ಆದರೆ, ಮೌಲ್ಯಮಾಪನ ಕಾರ್ಯ ನಡೆದಿಲ್ಲ. ಇಂಗ್ಲಿಷ್ ಪರೀಕ್ಷೆ ನಡೆಸಿಯೇ ಮೌಲ್ಯಮಾಪನ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೌಲ್ಯಮಾಪನ ಕಾರ್ಯವನ್ನು ಇನ್ನಷ್ಟು ವಿಕೇಂದ್ರೀಕರಣಗೊಳಿಸುವ ವ್ಯವಸ್ಥೆಯೂ ಆರಂಭವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವುದರಿಂದ ಮೌಲ್ಯಮಾಪನ ವಿಕೇಂದ್ರೀಕರಣಗೊಳಿಸುವ ಬಗ್ಗೆಯೂ ಅಧಿಕಾರಿಗಳು ಈಗಾಗಲೇ ಚರ್ಚೆ ನಡೆಸಿ¨ªಾರೆ. ಆದರೆ, ಇಂಗ್ಲಿಷ್ ಪರೀಕ್ಷೆ ಯಾವಾಗ ನಡೆಸಬೇಕು ಎಂಬುದೇ ಪಿಯು ಇಲಾಖೆಯ ಮುಂದಿರುವ ದೊಡ್ಡ ಸವಾಲಾಗಿದೆ. ಒಂದೇ ಒಂದು ಪರೀಕ್ಷೆಗಾಗಿ ವಿದ್ಯಾರ್ಥಿಗಳು ಇನ್ನೂ ಎಷ್ಟು ದಿನ ಕಾಯಬೇಕು ಎಂಬುದು ಗೊತ್ತಿಲ್ಲ. ಪರಿಸ್ಥಿತಿ ತಿಳಿಯಾಗದೇ ಯಾವುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪಿಯು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರು ಈಗಾಗಲೇ ಅನೇಕ ಬಾರಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೋವಿಡ್ ಮಹಾಮಾರಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಮೇ 3ರ ನಂತರ ವೇಳಾಪಟ್ಟಿ ತಯಾರಿಸುವ ಬಗ್ಗೆಯೂ ಮಂಡಳಿ ಮತ್ತು ಇಲಾಖೆ ನಿರ್ಧಾರ ಮಾಡಿದೆ. ಅಲ್ಲದೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಪುನರ್ ಮನನ ಕಾರ್ಯಕ್ರಮಗಳನ್ನು ಆರಂಭಿಸಿದೆ.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ, ಮೇ 3ರ ನಂತರವೂ ಸರ್ಕಾರಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ದೊಡ್ಡ ಸವಾಲಾಗಿಯೇ ಪರಿಣಮಿಸಬಹುದು ಎಂದು ಅಂದಾಜಿಸಲಾಗಿದೆ. ಐಸಿಎಸ್‌ಇ, ಸಿಬಿಎಸ್‌ಇ ಸಹಿತವಾಗಿ ವಿವಿಧ ಬೋರ್ಡ್‌ಗಳು ಕೂಡ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿವೆ. ಈ ಬೋರ್ಡ್‌ಗಳು ಕೂಡ ಪರೀಕ್ಷೆಗೆ ಸಂಬಂಧಿಸಿದಂತೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀದ್ದಾ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ, ಇದರ ಬಗ್ಗೆ ಸಚಿವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಲಾಕ್‌ಡೌನ್ ತೆರವಾದ ನಂತರ ಪರೀಕ್ಷೆ ನಡೆಸುವಾಗ ಸಾಮಾಜಿಕ ಅಂತರ ಅತಿ
ಅವಶ್ಯಕವಾಗಿರುತ್ತದೆ. ಹೀಗಾಗಿ ಇನ್ನಷ್ಟು ಹೆಚ್ಚು ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.