Advertisement
ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಪ್ರಾಣಿಜನ್ಯ ತ್ಯಾಜ್ಯ ಹಾಗೂ ಶೌಚತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಇದು ಜನಸಾಮಾನ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆಘಾತಕಾರಿ ಸಂಗತಿ ಎಂದರೆ, ನಗರದಲ್ಲಿ ಮಾಂಸದ ಮಳಿಗೆಗಳ ತ್ಯಾಜ್ಯವನ್ನು ರಾತ್ರಿ ವೇಳೆ ರಾಜ ಕಾಲುವೆ, ಖಾಲಿ ನಿವೇಶನಗಳಲ್ಲಿ ಎಸೆದು ಹೋಗುತ್ತಿರುವುದರಿಂದ ತ್ಯಾಜ್ಯ ಕೊಳೆತು ವೈರಾಣು ಸೋಂಕು ಹರಡುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಪ್ರಾಣಿ ಜನ್ಯ ತ್ಯಾಜ್ಯ ಹಾಗೂ ಶೌಚ ತ್ಯಾಜ್ಯ ಸಮರ್ಪಕ ವಿಲೇವಾರಿ ವ್ಯವಸ್ಥೆ ಇಲ್ಲದಿರುವುದು.
Related Articles
Advertisement
ನಿಯಮಾನುಸಾರ ಮಾಂಸದ ಮಳಿಗೆಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಬೇಕು. ಈ ಬಗ್ಗೆ ಪರವಾನಗಿ ನೀಡುವಾಗಲೂ ಸಾಕಷ್ಟು ಷರತ್ತು ಹಾಕಲಾಗಿರುತ್ತದೆ. ಆದರೆ, ಅದ್ಯಾವುದೂ ಪಾಲನೆಯಾಗುತ್ತಿಲ್ಲ. ಪಾಲಿಕೆಯಲ್ಲಿ ನೋಂದಾಣಿಯಾಗದ ಮಾಂಸದ ಮಳಿಗೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವೆಲ್ಲಾ ಸಂಪೂರ್ಣ ಅವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿವೆ. ಪಾಲಿಕೆ ವತಿಯಿಂದ ಪ್ರಾಣಿಜನ್ಯ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರೂ ಮಾಂಸ ಮಾರಾಟ ಮಳಿಗೆದಾರರು ಇದಕ್ಕೆ ಸ್ಪಂದಿಸುತ್ತಿಲ್ಲ. ಬಹುತೇಕ ಮಳಿಗೆಗಳು ಅನಧಿಕೃತವಾಗಿರುವುದರಿಂದ ಅಲ್ಲಿನ ತ್ಯಾಜ್ಯ ಪಾಲಿಕೆಗೆ ತಲುಪುತ್ತಿಲ್ಲ.
ನಾಯಿಗಳ ಹಾವಳಿ ಹೆಚ್ಚಳ: ಪ್ರಾಣಿಜನ್ಯ ತ್ಯಾಜ್ಯವನ್ನು ಸಾಮಾನ್ಯ ಕಸದೊಂದಿಗೆ ರಸ್ತೆಬದಿ, ಪಾದಚಾರಿ ಮಾರ್ಗಗಳಲ್ಲಿ ಎಸೆಯುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಮಾಂಸದ ಪೋಷಣೆಯಿಂದ ದಷ್ಟಪುಷ್ಟವಾಗಿರುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ದಾರಿಹೋಕರ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಶೌಚ ತ್ಯಾಜ್ಯದ ಗೊಡವೆಪ್ರಾಣಿ ಜನ್ಯ ತ್ಯಾಜ್ಯದ ಜತೆಗೆ ಶೌಚ ತ್ಯಾಜ್ಯ ಸಹ ಪಾಲಿಕೆಗೆ ಸಮಸ್ಯೆಯಾಗಿದೆ. ಮನೆ, ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಶೌಚ ತ್ಯಾಜ್ಯದ ವಿಲೇವಾರಿ ಪ್ರತ್ಯೇಕವಾಗಿ ಆಗಬೇಕು. ಕೆಲವು ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು ಇಂತಹ ತ್ಯಾಜ್ಯದ ವಿಲೇವಾರಿಗೆ ತಮ್ಮದೇ ವ್ಯವಸ್ಥೆ ಮಾಡಿಕೊಂಡಿವೆ. ಆದರೆ, ಮನೆಗಳಲ್ಲಿ ಅಥವಾ ಸಣ್ಣಪುಟ್ಟ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಾಮಾನ್ಯ ತ್ಯಾಜ್ಯದ ಜತೆ ರಸ್ತೆ ಸೇರುತ್ತಿದೆ. ಇದರಿಂದಾಗಿ ಕಸ ವಿಷವಾಗಿ ಪರಿಣಮಿಸುತ್ತಿದೆ. ಶೌಚತ್ಯಾಜ್ಯ (ಸ್ಯಾನಿಟರಿ) ಯಾವುದು?
ಬಟ್ಟೆಗಳಿಗೆ ದೇಹದ ಯಾವುದೇ ದ್ರವ ಪದಾರ್ಥ ಅಂಟಿಕೊಂಡಿದ್ದರೆ ಅವುಗಳನ್ನು ಶೌಚ (ಸ್ಯಾನಿಟರಿ) ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಬಟ್ಟೆಗಳು, ಪೇಯಿಂಟ್, ರಾಸಾಯನಿಕಗಳಿಂದ ಕೂಡಿದ್ದರೆ ಅವುಗಳನ್ನು ಅಪಾಯಕಾರಿ ಗೃಹ ತ್ಯಾಜ್ಯ ಎಂದು ವಿಂಗಡಿಸಿ ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ನೀಡಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ. ಎಷ್ಟೇ ಜಾಗೃತಿ ಮೂಡಿಸಿದರೂ ಮನೆಗಳಿಂದ ಕಸ ಸಮರ್ಪಕವಾಗಿ ವಿಂಗಡಣೆಯಾಗುತ್ತಿಲ್ಲ. ಪಾಲಿಕೆಯಿಂದ ಪರವಾನಗಿ ನೀಡುವ ವೇಳೆ ಪ್ರಾಣಿಜನ್ಯ ತ್ಯಾಜ್ಯ ವಿಲೇವಾರಿಯ ಕುರಿತು ಹಲವು ಷರತ್ತುಗಳನ್ನು ನೀಡಲಾಗುತ್ತದೆ. ಆದರೆ, ಮಳಿಗೆದಾರರು ಅವುಗಳ ಪಾಲನೆಗೆ ಮುಂದಾಗುತ್ತಿಲ್ಲ. ಇದರೊಂದಿಗೆ ನಗರದಲ್ಲಿ ಅನಧಿಕೃತ ಮಾಂಸ ಮಾರಾಟ ಮಳಿಗೆಗಳು ಹೆಚ್ಚಿವೆ. ಮಾಂಸ ಮಾರಾಟ ಮಳಿಗೆದಾರರು ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪಾಲಿಕೆಯ ಸಿಬ್ಬಂದಿಗೆ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಬಹುದಾಗಿದೆ. ಈಗಾಗಲೇ ಪಾಲಿಕೆಯಿಂದ ಅನಧಿಕೃತ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವವರ ಪತ್ತೆ ದಳ ರಚಿಸಲು ಮುಂದಾಗಿದ್ದೇವೆ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು * ವೆಂ.ಸುನೀಲ್‌ಕುಮಾರ್