Advertisement

ಬಯಲು ಶೌಚ ಮುಕ್ತ ಜಿಲ್ಲೆಗೆ ಅ.2ರ ಗಡುವಿತ್ತ ಜಿಪಂ ಸಿಇಒ

03:09 PM May 13, 2017 | |

ಹುಬ್ಬಳ್ಳಿ: ಶೌಚಾಲಯ ನಮ್ಮ ಸ್ವಾಭಿಮಾನದ ಸಂಕೇತವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ವೈಯಕ್ತಿಕವಾಗಿ ಗಮನ ಹರಿಸಬೇಕು. ಆ. 15ರೊಳಗೆ ಹುಬ್ಬಳ್ಳಿ ತಾಲೂಕು ಹಾಗೂ ಅ. 2ರೊಳಗೆ ಧಾರವಾಡ ಜಿಲ್ಲೆಯು ಬಯಲು ಶೌಚ ಮುಕ್ತವಾಗಬೇಕೆಂದು ಜಿಪಂ ಸಿಇಒ ಆರ್‌. ಸ್ನೇಹಲ್‌ ಹೇಳಿದರು. 

Advertisement

ಇಲ್ಲಿನ ನ್ಯೂ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ಜಿಪಂ, ತಾಪಂ ವತಿಯಿಂದ ಸ್ವತ್ಛ ಭಾರತ ಮಿಷನ್‌ (ಗ್ರಾ) ಅಡಿ ಶುಕ್ರವಾರ ಹಮ್ಮಿಕೊಂಡಿದ್ದ ನಮ್ಮನೆಯ ಶೌಚಾಲಯ-ನಮ್ಮ ಸ್ವಾಭಿಮಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಹುಬ್ಬಳ್ಳಿ ತಾಲೂಕಿನ 26 ಗ್ರಾಪಂಗಳ 7400 ಕುಟುಂಬಗಳು ಇದುವರೆಗೆ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಈ ಕುಟುಂಬಗಳಿಗೆ ಶೌಚಾಲಯ ನಿರ್ಮಾಣದ ಕುರಿತು ಸಂದೇಶ ತಲುಪಿಸುವ ನಿಟ್ಟಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.

ಆ. 15ರೊಳಗೆ ತಾಲೂಕಿನ ಎಲ್ಲ ಕುಟುಂಬಗಳು ಶೌಚಾಲಯ ಕಟ್ಟಿಸಿಕೊಳ್ಳಬೇಕು. ಅ. 2ರೊಳಗೆ ಧಾರವಾಡ ಜಿಲ್ಲೆಯು ಬಯಲು ಶೌಚ ಮುಕ್ತವಾಗಬೇಕು. ಆ ನಿಟ್ಟಿನಲ್ಲಿ ಯುದೊಪಾದಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಹಳ್ಳಿಗಳಲ್ಲಿ ಶೌಚಾಲಯ ಕಟ್ಟಲು ಜಾಗವಿಲ್ಲ, ಮನೆಯ ಪಕ್ಕವಿದ್ದರೆ ವಾಸನೆ ಬರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಪ್ರತಿ ಗ್ರಾಮದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲೇಬೇಕು ಎಂದರು. ತರಬೇತಿ ಪಡೆಯಲು ಬಂದ ಪ್ರತಿ ಕಾರ್ಯಕರ್ತರು ಕನಿಷ್ಠ 10 ಜನರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಪ್ರೇರಣೆ ನೀಡಬೇಕು. ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಮೂಲಕ ಪಾಲಕರಿಗೆ ತಿಳಿಸುವ ಕಾರ್ಯ ಮಾಡಬೇಕು. 

Advertisement

ಒಂದೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಪ್ರೇರಣೆ ನೀಡಿದರೆ ಅಂತಹ ಕಾರ್ಯಕರ್ತರಿಗೆ ಗೌರವಧನವಾಗಿ 150 ರೂ. ಕೊಡಲಾಗುವುದು. ಶೌಚಾಲಯ ಕಟ್ಟಿಸಿಕೊಳ್ಳಲು ಸಾಮಾನ್ಯ ವರ್ಗದ ಬಿಪಿಎಲ್‌ ಕಾರ್ಡ್‌ದಾರರಿಗೆ 12ಸಾವಿರ ರೂ., ಎಸ್‌ಸಿ-ಎಸ್‌ಟಿಯವರಿಗೆ 15ಸಾವಿರ ರೂ. ಹಾಗೂ ಇನ್ನಿತರೆ ವರ್ಗದವರಿಗೆ ಬ್ಯಾಂಕ್‌ನಿಂದ ಸಾಲಸೌಲಭ್ಯ ವ್ಯವಸ್ಥೆಯಿದೆ. 

ಗ್ರಾಪಂ ವ್ಯಾಪ್ತಿಗಳಲ್ಲಿ ಪಿಡಿಒಗಳು ಗ್ರಾಮಸ್ಥರಲ್ಲಿ ಶೌಚಾಲಯದ ಕುರಿತು ತಿಳಿವಳಿಕೆ ನೀಡಬೇಕು ಎಂದರು. ಜಿಲ್ಲಾಮಟ್ಟದ ಅಧಿಕಾರಿ ಮುನಿರಾಜ ಜಡಿ ಮಾತನಾಡಿ, ಜನರು ಮನೆಯಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕು. ಜೊತೆಗೆ ಅದರ ನಿರ್ವಹಣೆಯು ಮುಖ್ಯ ಎಂದರು. 

ತಾಪಂ ಆರೋಗ್ಯಾಧಿಕಾರಿ ಡಾ| ಪ್ರಮೀಳಾ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಿವಗಂಗಾ ಹೆಬ್ಬಳ್ಳಿ, ಗ್ರಾಮೀಣ ಬಿಇಒ ಎಂ.ಎಲ್‌. ಹಂಚಾಟೆ,ಜಿಪಂ ಡಿಆರ್‌ ಡಿಎ ಯೋಜನಾ ನಿರ್ದೇಶಕ ಎಸ್‌. ಎಂ. ಕೆಂಚಣ್ಣವರ ಮಾತನಾಡಿದರು. ಶ್ರೀಮತಿ ತಿವಾರಿ ಉಪನ್ಯಾಸ ನೀಡಿದರು. 

ಸಹಾಯಕ ಯೋಜನಾಧಿಕಾರಿ ಭೀಮಪ್ಪ ಎನ್‌., ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪ್ರೇಮಾ ಕಡಪಟ್ಟಿ ಇತರರಿದ್ದರು. ಪದ್ಮಾವತಿ ಎನ್‌.ಪಿ. ಪ್ರತಿಜ್ಞಾವಿಧಿ ಬೋಧಿಸಿದರು. ತಾಪಂ ಇಒ ಡಾ| ರಾಮಚಂದ್ರ ಹೊಸಮನಿ ಸ್ವಾಗತಿಸಿದರು. ಸಿ. ಕಣಿಕಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next