Advertisement

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

08:37 PM May 30, 2020 | Team Udayavani |

ಬೆಂಗಳೂರು: ದೇಶದ ಈಗಿನ ದುಸ್ಥಿತಿಗೆ ಕೋವಿಡ್-19 ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವವರ ಆಡಳಿತದಲ್ಲಿನ ವೈಫಲ್ಯ, ಕಳಪೆ ನಾಯಕತ್ವ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ದೇಶ ಕಟ್ಟಲು, ಪ್ರಜಾತಂತ್ರ ವ್ಯವಸ್ಥೆ ಉಳಿಸಿಕೊಳ್ಳಲು ಸಂವಿಧಾನ, ಗಣರಾಜ್ಯ ರಚಿಸಿಕೊಂಡೆವು ಆದರೆ ಇಂದು ಈ ಸಂವಿಧಾನ ಹಾಗೂ ಗಣರಾಜ್ಯ ವ್ಯವಸ್ಥೆಯನ್ನೇ ಬದಲಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಪ್ರತಿ ಹಂತದಲ್ಲೂ ಹದಗೆಡುತ್ತಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ಪ್ರತಿ ಡಾಲರ್‌ ಗೆ 75.52 ರೂಪಾಯಿಗೆ ತಲುಪಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದರೂ ಕೇಂದ್ರ ಸರ್ಕಾರ ಪೆಟ್ರೊಲ್‌ ಡಿಸೆಲ್‌ ದರ ಕಡಿಮೆ ಮಾಡದೇ ಜನರಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು.

ಕೋವಿಡ್-19 ಪೂರ್ವದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಜಿಡಿಪಿ ಶೇ.3.1ಕ್ಕೆ ಕುಸಿತ ಕಂಡಿತ್ತು. ಈಗ ಅದು ಮತ್ತಷ್ಟು ಕುಸಿತ ಕಂಡಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ದೇಶದಲ್ಲಿ ಆಟೋಮೊಬೈಲ್‌, ಉತ್ಪಾದನಾ ವಲಯ,, ಕೃಷಿ, ರಿಯಲ್‌ ಎಸ್ಟೇಟ್‌ ನಿರ್ಮಾಣ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲ ವಲಯಗಳೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ.

ಕೇಂದ್ರ ಸರ್ಕಾರದ ಕಳೆದೊಂದು ವರ್ಷದಲ್ಲಿ ಮತೀಯ ದ್ವೇಷಕ್ಕೆ ಕುಮ್ಮಕ್ಕು ನೀಡಿರುವುದೇ ಸಾಧನೆ. ಸಿಎಎ ವಿಚಾರದಿಂದ ಹಿಡಿದು, ಕೋವಿಡ್-19 ವಿಚಾರದವರೆಗೂ ಪ್ರತಿ ಹಂತದಲ್ಲೂ ಒಂದು ಕೋಮು, ಒಂದು ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತ ದೇಶದ ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಭಾರತದಲ್ಲಿ ಭಾರತೀಯನೇ ತನ್ನ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿಕೊಳ್ಳುವಂತಹ ಸ್ಥಿತಿ ತಂದಿಟ್ಟರು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಜನ ಜಾಗೃತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕಳೆದ ಒಂದು ವರ್‌ಷದಲ್ಲಿ ಇಂತಹ ಕೀಳು ರಾಜಕಾರಣ ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.

Advertisement

ಮುಖ್ಯಮಂತ್ರಿ ಘೋಷಣೆ ಮಾಡಿರುವ ಪರಿಹಾರ ಇದುವರೆಗೂ ಯಾರಿಗೂ ತಲುಪಿಲ್ಲ. ಕಾರ್ಮಿಕರು ಅವರ ಊರುಗಳಿಗೆ ಹೋಗಲು ಅನುಕೂಲ ಕಲ್ಪಿಸದೇ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿಯ ಸುಳ್ಳಿನ ಪ್ಯಾಕೇಜ್‌ ನಿಂದ ದೇಶದ ಜನಸಂಖ್ಯೆಯ ಶೇ. 10ರಷ್ಟು ಜನರಿಗೂ ಸಹಾಯವಾಗುವುದಿಲ್ಲ. ನರೇಗಾಗೈ ಶೇ.10ರಷ್ಟು ಹಣ ನೀಡಿದ್ದು ಬಿಟ್ಟರೆ ಉಳಿದೆಲ್ಲವೂ ಬ್ಯಾಂಕುಗಳಿಂದ ಸಾಲ ನೆರವು ನೀಡುತ್ತಾರಂತೆ. ಯಾವುದಾದರೂ ಬ್ಯಾಂಕ್‌ ಯಾರಿಗಾದರೂ ಸಹಾಯ ಮಾಡಿರುವ ಉದಾಹರಣೆ ಇದೆಯೇ. ಬ್ಯಾಂಕ್‌ ಗಳು ನೆರವು ನೀಡುವುದನ್ನು ಬಿಟ್ಟು ಜನರ ಮೇಲೆ ದೌರ್ಜನ್ಯ ನಡೆಸುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ಆಂತರಿಕ ವಿಚಾರ ನಮಗೆ ಬೇಡ
ಕಾಂಗ್ರೆಸ್‌ ಪಕ್ಷದ ನಾಯಕರಾಗಲಿ, ಪದಾಧಿಕಾರಿಗಳಾಗಲಿ ಅಥವಾ ಕಾರ್ಯಕರ್ತರಾಗಲಿ, ಅನ್ಯ ರಾಜಕೀಯ ಪಕ್ಷಗಳ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು. ಈ ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷದ ಅಧ್ಯಕ್ಷನಾಗಿ ನಾನು ಮಾತ್ರ ಮಾತನಾಡುತ್ತೇನೆ. ಸದ್ಯ ಪಕ್ಷವನ್ನು ಮತ್ತಷ್ಟು ಸಂಘಟಿಸುವುದು ಮತ್ತು ಸದೃಢಗೊಳಿಸಬೇಕಿದ್ದು, ಇದು ನಮ್ಮ ಏಕೈಕ ಗುರಿಯಾಗಿರಬೇಕು. ಈ ಗುರಿಸಾಧನೆಯತ್ತ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next