ಭಾಲ್ಕಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯಾವ ಭರವಸೆಗಳೂ ಈಡೇರಿಲ್ಲ. ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ಮುಖಂಡರ ಸುಳ್ಳ ಆಶ್ವಾಸನೆಗಳಿಗೆ ಮರಳಾಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಜ್ಯಾಂತಿ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ, ಸಿಸಿ ರಸ್ತೆ, ಗೋದಾಮು ಮತ್ತು ಮಲ್ಲಣ್ಣ ದೇಗುಲದ ಕಲ್ಯಾಣ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.
ನೋಟ್ ಬ್ಯಾನ್‌ನಿಂದ ಬಡ ಜನರು ತಮ್ಮ ಹಣ ಪಡೆಯಲು ಬೀದಿಗೆ ಬರಬೇಕಾಯಿತು. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಕೇಂದ್ರ ಸರಕಾರ ಇದು ವರೆಗೂ 1 ಕೋಟಿ ಉದ್ಯೋಗ ಕಡಿತ ಮಾಡಿದೆ ಎಂದು ದೂರಿದರು.
ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ವೈಜಿನಾಥ ಪಾಟೀಲ ಮಾತನಾಡಿ, 1973ರಿಂದಲೂ ಜ್ಯಾಂತಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಖಂಡ್ರೆ ಮನೆತನ ಸಹಾಯ, ಸಹಕಾರ ನೀಡುತ್ತ ಬಂದಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಮಾಜಿ ಸದಸ್ಯ ಶಿವರಾಜ ಹಾಸನಕರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಾಬುರಾವ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪು ಪಾಟೀಲ್ ಖಾನಾಪೂರ, ಗುಂಡೇರಾವ್ ಪಾಟೀಲ, ಗಂಗಾಧರ ಪಾಟೀಲ, ಕೋನಮೇಳಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ, ಅಶೋಕರಾವ್ ಸೋನಜಿ, ಧನರಾಜ ಪಾಟೀಲ, ರಮೇಶ ಪ್ರಭಾ, ಸೋಮನಾಥ ಪಾಟೀಲ, ವಿಜಯಕುಮಾರ ಹನಮಶೆಟ್ಟಿ, ಉಮಾಕಾಂತ ಚಾಕೂರೆ, ಸಂತೋಷ ಪಾಟೀಲ, ಗಣೇಶ ಪಾಟೀಲ ಇದ್ದರು. ಭೀಮಪ್ಪ ನಿರೂಪಿಸಿದರು.
ತೆರೆದ ಜೀಪ್‌ನಲ್ಲಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಈಶ್ವರ ಖಂಡ್ರೆ ಅವರನ್ನು ಸ್ವಾಗತಿಸಿ, ತೆರೆದ ಜೀಪ್‌ನಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಜೈ ಘೋಷ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.