ದಾವಣಗೆರೆ: ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿಯ ಹಲವಾರು ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅಖೀಲ ಭಾರತ ಬ್ಯಾಂಕ್ ನಿವೃತ್ತರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ದಾವಣಗೆರೆ- ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದಿಂದ ಮಂಗಳವಾರ ಆಯೋಜಿಸಲಾಗಿದ್ದ ಒಕ್ಕೂಟದ ಸ್ಥಾಪನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ಬ್ಯಾಂಕ್ ನೌಕರರ ನಿವೃತ್ತ ನಿಧಿಯಲ್ಲಿ ಸಾವಿರಾರು ಕೋಟಿಯಷ್ಟು ಅನುದಾನ ಇದ್ದರೂ ಕೇಂದ್ರ ಸರ್ಕಾರ ಹಲವಾರು ಬೇಡಿಕೆ ಈಡೇರಿಸುತ್ತಿಲ್ಲ ಎಂದು ದೂರಿದರು.
ಬ್ಯಾಂಕ್ ನಿವೃತ್ತರ ಒಕ್ಕೂಟ ಯಾವುದೇ ಜಾತಿ, ಮತ, ಧರ್ಮ, ಪಂಥಗಳ ಬೇಧಭಾವವಿಲ್ಲದೆ ಒಗ್ಗಟ್ಟಿನಿಂದ ಕೂಡಿರುವ ಸಂಘ. ಪ್ರತಿಯೊಬ್ಬರು ನೆಮ್ಮದಿ ಜೀವನ ನಡೆಸುವಂತಾಗಬೇಕು ಎಂಬ ಮಹತ್ತರ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ, ಕೇಂದ್ರದಿಂದ ನೆರವು ದೊರೆಯುತ್ತಿಲ್ಲ ಎಂದು ತಿಳಿಸಿದರು.
ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೋಟ್ಯಂತರ ಮೊತ್ತದ ಅನುತ್ಪಾದಕ ಆಸ್ತಿ ಇದೆ. ಕಾರ್ಪೋರೇಟ್ ಕ್ಷೇತ್ರದಲ್ಲಿನ ಅನೇಕ ಸಾಲ ಮನ್ನಾ ಮಾಡುತ್ತಿರುವುದು ದೇಶದ ಪ್ರಗತಿಗೆ ಅತ್ಯಂತ ಮಾರಕ. ಮುಂದಿನ ದಿನಗಳಲ್ಲಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಕೆಗಾಗಿ ದೇಶವ್ಯಾಪಿ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸಮಿತಿ ಅಧ್ಯಕ್ಷ ಬಿ. ದೇವದಾಸರಾವ್ ಮಾತನಾಡಿ, ಬ್ಯಾಂಕ್ ನಿವೃತ್ತ ನೌಕರರು ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ತಿಳಿಸಿದರು. ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಬ್ಯಾಂಕ್‌ಗಳ ಅಭಿವೃದ್ದಿಗೆ ನಿವೃತ್ತ ನೌಕಕರೇ ಮುಖ್ಯ ಕಾರಣ.
ನಿವೃತ್ತ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಳ ಹೋರಾಟಕ್ಕೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಸಮಿತಿ ಉಪಾಧ್ಯಕ್ಷ ಅಬ್ದುಲ್ ಜಲೀಲ್, ಸಹ ಕಾರ್ಯದರ್ಶಿ ಎಂ.ಎಸ್.ಭಟ್, ನಾಗೇಶ್, ಬಿ.ಎಸ್. ಜೋಷಿ, ರಾಮಮೂರ್ತಿ, ಕೆ. ನಾಗರಾಜ್, ಎಚ್. ಕೆ. ಸತ್ಯಭಾಮ. ಮಂಜುನಾಥ್, ಎಸ್.ಟಿ. ಶಾಂತಗಂಗಾಧರ್ ಇತರರು ಇದ್ದರು.