ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸ್ವಚ್ಛತಾ ಕಾರ್ಯವನ್ನು ಮೆಚ್ಚಿ ಕೇಂದ್ರ ಸರ್ಕಾರ “ಸ್ವಚ್ಛ ಐಕಾನ್’ ತಾಣವನ್ನಾಗಿ ಗುರುತಿಸಿದ್ದು, ಶ್ರೀಮಠಕ್ಕೆ ಮತ್ತೂಂದು ಗರಿ ಮೂಡಿದಂತಾಗಿದೆ.
ಕೇಂದ್ರ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮೂರನೇ ಹಂತದ ಯೋಜನೆಯಡಿ ಮಂತ್ರಾಲಯವನ್ನು ಆಯ್ಕೆ ಮಾಡಿದ್ದು, ಈ ಕುರಿತು ಬುಧವಾರ ಸಂಜೆ ಶ್ರೀಮಠದ ಎಸ್‌ಆರ್‌ಕೆ ಶ್ರೀ ರಮಣ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಸ್ವಚ್ಛತಾ ಐಕಾನ್‌ಗೆ ಶ್ರೀಮಠವನ್ನು ಆಯ್ಕೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಇದರಿಂದ ಮಠದ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಸ್ವಚ್ಛತೆಯ ಅಭಿಯಾನವನ್ನು ಕೇಂದ್ರ ಸರ್ಕಾರ ಗುರುತಿಸಿ ಮಂತ್ರಾಲಯವನ್ನು ಸ್ವಚ್ಛತಾ ಐಕಾನ್ ಎಂದು ಗುರುತಿಸಿರುವುದು ಸಂತಸ ತಂದಿದೆ.ದೇಶದ ಅಭಿವೃದ್ಧಿಗೆ ಹಸಿರು, ಶಿಕ್ಷಣ, ಆರೋಗ್ಯ ಮತ್ತಿತರ ವಿಷಯಗಳು ಸ್ವಚ್ಛತೆಯ ಮೇಲೆ ಅವಲಂಬಿತಗೊಂಡಿವೆ. ಅಂಥ ಮಹತ್ವದ ಕಾರ್ಯವನ್ನು ಶ್ರೀಮಠ ಸುಮಾರು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದರು.
ಮಂತ್ರಾಲಯದಲ್ಲಿ ಸ್ವಚ್ಛತೆ ಕೆಲಸ ಕೇವಲ ಶೇ.1ರಷ್ಟು ಮಾತ್ರ ಆಗಿದ್ದು, ಇನ್ನೂ ಶೇ.99ರಷ್ಟು ಬಾಕಿಯಿದೆ. ಸ್ವಚ್ಛತೆ ವಿಚಾರದಲ್ಲಿ ಶ್ರೀಮಠ ನೇತೃತ್ವದಲ್ಲಿ ಮಂತ್ರಾಲಯದ ಗ್ರಾಪಂ, ಅಧಿಕಾರಿಗಳು, ಸಿಬ್ಬಂದಿ, ನೌಕರರು, ಭಕ್ತರು ಹಾಗೂ ಗ್ರಾಮಸ್ಥರು ಜಾಗೃತರಾಗಿ ನಿರಂತರ ಪರಿಶ್ರಮ ಪಟ್ಟಿದ್ದಾರೆ.
ಸ್ವಚ್ಛತೆ, ಯುಜಿಡಿ, ಶುದ್ಧ ಕುಡಿಯುವ ನೀರು ಸೇರಿ ಇತರೆ ವಿಷಯಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಕೇಂದ್ರ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಜೂ.25ರಂದು ಸಭೆ ಕರೆದಿದ್ದು, ಅಧಿಕಾರಿಗಳು, ಸಿಬ್ಬಂದಿ ಸೇರಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು.
ಇಂದಿನಿಂದ ಸ್ವತ್ಛತೆ ಪರಿಕಲ್ಪನೆ ಬದಲಾಗಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ಅರಿತು ಮುನ್ನಡೆಯಬೇಕಿದೆ. ಸ್ವತ್ಛ, ಸುಂದರ, ಸಂಪೂರ್ಣ ಮಂತ್ರಾಲಯದ ಸಂಕಲ್ಪ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ
ಮಾಡಲಿದೆ ಎಂದರು.
ಶ್ರೀಮಠದ ಹಿರಿಯ ಪಂಡಿತ ರಾಜಾ ಎಸ್. ಗಿರಿಯಾಚಾರ್ಯ ಮಾತನಾಡಿ, ತಿರುಪತಿ ಹಾಗೂ ಮಂತ್ರಾಲಯವನ್ನು ಕೇಂದ್ರ ಸರ್ಕಾರ ಸ್ವಚ್ಛತೆಯ ಐಕಾನ್ ಮಾಡಿದ್ದು, ಇಲ್ಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದರು.