Advertisement

ಬೇಡಿಕೆ ಈಡೇರಿಕೆಗೆ ಮಸಣ ಕಾರ್ಮಿಕರ ಸಂಘ ಆಗ್ರಹ

10:59 PM Oct 22, 2019 | Team Udayavani |

ಬೆಂಗಳೂರು: ಮಸಣ ಪ್ರದೇಶಗಳನ್ನು ಜನಸ್ನೇಹಿ ನಂದನಗಳನ್ನಾಗಿ ರೂಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮಂಗಳವಾರ ರಾಜ್ಯ ಮಸಣ ಕಾರ್ಮಿಕರ ಸಂಘದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಸಂಘದ ಸಂಚಾಲಕರಾದ ಬಿ.ಮಾಳಮ್ಮ ಮತ್ತು ಯು.ಬಸವರಾಜ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಈ ಸಮಾವೇಶದಲ್ಲಿ ಕಲಬುರಗಿ, ಬೀದರ್‌, ಬಳ್ಳಾರಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಪ್ರದೇಶ ಸೇರಿ ವಿವಿಧೆಡೆಗಳಿಂದ ಹಲವು ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಮಾಳಮ್ಮ, ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಮಸಣ ಕಾರ್ಮಿ ಕರಿ ದ್ದಾರೆ. ಆದರೆ ಅವರ ಕೌಟುಂಬಿಕ ಬದುಕು ದುಸ್ತರವಾಗಿದೆ. ಇಂತಹ ಕುಟುಂಬಗಳ ನೆರವಿಗೆ ಸರ್ಕಾರ ಬರಬೇಕು. ಅಲ್ಲದೆ, ಮಸಣ ನಿರ್ವಾಹಕ ನೌಕರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.

ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯ ಉದ್ಯೋಗವೆಂದು ಪರಿಗಣಿಸಿ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 2,500ರೂ. ಕೂಲಿ ಪಾವತಿಸಬೇಕು. ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಬಂಧ ವಿಶೇಷ ಆರೋಗ್ಯ ಕಾರ್ಡ್‌ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸಂಚಾಲಕ ಯು.ಬಸವರಾಜ ಮಾತನಾಡಿ, ಕೆಲವು ಕಡೆ ಮಸಣ ಪ್ರದೇಶಗಳ ಒತ್ತುವರಿಯಾಗಿದೆ. ಆ ಹಿನ್ನೆಲೆ ಸರ್ಕಾರ ರಾಜ್ಯದ ಎಲ್ಲಾ ಸಾರ್ವಜನಿಕ ಮಸಣ ಪ್ರದೇಶವನ್ನು ಗಣತಿ ಮಾಡಿ ಆ ಪ್ರದೇಶಕ್ಕೆ ತಂತಿಬೇಲಿ ಆಳವಡಿಕೆ ಮಾಡಬೇಕು ಎಂದು ಆಗ್ರಹಿಸಿದರು. ಹಗರಿ ಬೊಮ್ಮನಹಳ್ಳಿ ಮೂಲದ ಕಾರ್ಮಿಕ ನಾಗೇಂದ್ರಪ್ಪ, ಮಸಣದಲ್ಲಿಯೇ ದಿನ ಕಳೆಯುವ ನಮಗೆ ಸರ್ಕಾರ ಅಂತ್ಯೋದಯ ರೇಷನ್‌ ಕಾರ್ಡ್‌ಗಳನ್ನು ನೀಡಬೇಕು.

Advertisement

ಅಲ್ಲದೆ ಸುಮಾರು 3 ಸಾವಿರ ರೂ.ಪಿಂಚಣಿ ನೀಡಲು ಮಂದಾಗಬೇಕು ಎಂದರು. ಸರ್ಕಾರದ ಪರವಾಗಿ ಕಾರ್ಮಿಕರ ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಬೀರ್‌ ಅಹಮದ್‌ ಮುಲ್ಲಾ, ನಿಮ್ಮ ಬೇಡಿಕೆಗಳನ್ನು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next